೧೦೦ನೇ ರ್‍ಯಾಂಕ್ ಸಾಧನೆಗೈದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದ ಕುವರಿ ವಿಜೇತಾ
ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆಯ ಯುವತಿ ವಿಜೇತಾ ಭೀಮಸೇನ ಹೊಸಮನಿ 100 ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.
ವಿಜೇತಾ ಅವರು ಎಲ್. ಕೆ. ಜಿ ಯಿಂದ 5ನೇ ತರಗತಿವರೆಗೆ ವಿಜೇಜಾ ಭೀಮಸೇನ ಹೊಸಮನಿ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿ ಪ್ರಥಮ ವರ್ಷ ವಿಜಯಪುರ ನಗರದ ತುಂಗಳ ಕಾಲೇಜಿನಲ್ಲಿ ಹಾಗೂ ಪಿಯುಸಿ ದ್ವಿತೀಯ ದರಬಾರ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ನಂತರ ಪ್ಲ್ಯಾಟ್ ಎಕ್ಸಾಂ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ
ಬಿ.ಎ ಎಲ್.ಎಲ್.ಬಿ
ಕ್ರಿಮಿನಲ್ ಲಾ ಪದವಿಯನ್ನು ಗೋಲ್ಡ್ ಮೆಡಲ್ ನೊಂದಿಗೆ ಪೂರ್ಣಗೊಳಿಸಿದ್ದಾರೆ.
2020 ರಿಂದ ಮೂರು ಬಾರಿ ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದಾರೆ. 2023ರ ಪ್ರಿಲಿನ್ಮರಿ ಎಕ್ಸಾಂ, ಮೇನ್ ಎಕ್ಸಾಂ ಪಾಸ್ ಆಗಿ ಸಂದರ್ಶನ ಪಾಸ್ ಮಾಡಿ ಈಗ ಉತ್ತೀರ್ಣರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ 100ನೇ ಸ್ಥಾನ ಪಡೆದಿದ್ದಾರೆ.
ಆನ್ ಲೈನ್ ತರಬೇತಿ ಮತ್ತು ಮನೆಯಲ್ಲಿಯೇ ಹೆಚ್ಚಿನ ಅಭ್ಯಾಸ ಮಾಡಿರುವ ವಿಜೇತಾ ಭೀಮಸೇನ ಹೊಸಮನಿ ಅವರಿಗೆ ಐ.ಆರ್.ಎಸ್ ಅಂದರೆ ಇಂಡಿಯನ್ ರೆವೆನ್ಯೂ ಸರ್ವೀಸ್ ನಲ್ಲಿ ಹುದ್ದೆ ಸಿಗುವ ಸಾಧ್ಯತೆಯಿದೆ.
ಇವರ ತಂದೆ ಭೀಮಸೇನ ಹೊಸಮನಿ ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಮುಖ್ಯ ವ್ಯವಸ್ಥಾಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದುಕೊಂಡಿದ್ದು, ಇದೀಗ ಅವರು
ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಗಳ ಸಾಧನೆಗೆ ಪೋಷಕರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

’ಉದಯರಶ್ಮಿ’ ದಿನಪತ್ರಿಕೆ ಬಳಗದಿಂದ ಅಭಿನಂದನೆ
ವಿಜೇತಾ ಹೊಸಮನಿ ಸಾಧನೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ (ಧಾರವಾಡ) ಯ ನೀವೃತ್ತ ಸಹಾಯಕ ಮಹಾ ಪ್ರಬಂಧಕಿ ಶಿವದೇವಿ ಮಣೂರ (ವೀರಾಪೂರ), ರುಡ್ಸೆಟ್ ನಿವೃತ್ತ ನಿರ್ದೇಶಕ ಮಹಾಂತೇಶ ವೀರಾಪೂರ, ಸಂದೇಶ ವೀರಾಪೂರ, ಮೇಘಾ ವೀರಾಪೂರ ಹಾಗೂ “ಉದಯರಶ್ಮಿ” ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ, ಪ್ರಕಾಶಕಿ ಶೈಲಾ ಮಣೂರ, ರಶ್ಮಿ ಮಣೂರ, ರಮ್ಯ ಮಣೂರ ಸೇರಿದಂತೆ ವಿಜಯಪುರ ಜಿಲ್ಲೆಯ, ನಾಡಿನ ಹಲವು ಗಣ್ಯರು, ಅಧಿಕಾರಿಗಳು ಅಭಿನಂದಿಸಿದ್ದಾರೆ.

