ದೇವರ ಹಿಪ್ಪರಗಿ: ಮಡಿವಾಳ ಮಾಚಿದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ಅಂಗವಾಗಿ ಸೋಮವಾರ ಗದ್ದುಗೆಮಠದಲ್ಲಿ ಸಾಂಪ್ರದಾಯಿಕವಾಗಿ ನಡೆದು ಬಂದ ಪೂಜಾ ವಿಧಿವಿಧಾನಗಳು ಬೆಳಿಗ್ಗೆ ಹೋಮ ಹವನದೊಂದಿಗೆ ಆರಂಭಗೊಂಡವು. ನಂತರ ಆರಾ ಎಂದೇ ಕರೆಯಲಾಗುವ ಪ್ರಕೃತಿಗೆ ಆಹಾರ ನೀಡುವುದು ಜರುಗಿತು. ಆನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಮೇನ್ ಬಜಾರಿನಲ್ಲಿರುವ ತೇರಿನವರೆಗೆ ಸಾಗಿ ೫ ಸುತ್ತು ಪ್ರದಕ್ಷಿಣೆ ಹಾಕಿ ನೈವೇದ್ಯ (ಬಡ್ಯಾಣ) ಅರ್ಪಿಸಲಾಯಿತು. ತದನಂತರ ಬೆಳಿಗ್ಗೆಯಿಂದಲೇ ಹೂವಿನ ಹಾರ, ತಳಿರು ತೋರಣಗಳಿಂದ ಶೃಂಗಾರಗೊಂಡ ರಥ (ತೇರ) ಕ್ಕೆ ನೆರೆದ ಸಾವಿರಾರು ಜನ ಭಕ್ತರ ಜಯಕಾರ, ಉದ್ಘೋಶಗಳ ಮೂಲಕ ಕಳಸಾರೋಹಣ ನೆರವೇರಿಸಿ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದ ಕಾರಣ ಯುವಭಕ್ತ ಸಮೂಹ ಉತ್ಸಾಹದಿಂದ ರಥವನ್ನು ಸರಾಗವಾಗಿ ಮಾನೆದೊಡ್ಡಿ ಹತ್ತಿರದವರೆಗೆ ಎಳೆದು ತಮ್ಮ ಭಕ್ತಿ, ಭಾವ ತೋರಿದರು.
ಈ ಸಮಯದಲ್ಲಿ ಮಹಿಳೆಯರು, ಮಕ್ಕಳು, ಯುವಕರು ತಾವು ತಂದ ಉತ್ತತ್ತಿ, ಬಾಳೆಹಣ್ಣುಗಳನ್ನು ರಥೋತ್ಸವ ಸಾಗುವಾಗ ಅದರ ಮೇಲೆ ಎರೆಚಿ ಸಂತಸಪಟ್ಟರು. ನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಉತ್ಸವ ಹೊರವಲಯದ ಮಡಿವಾಳ ಮಾಚಿದೇವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ತೆರಳಿ ಪುನಃ ಮರಳಿ ಗದ್ದಿಗೆಮಠಕ್ಕೆ ಬಂದು ಸೇರಿತು.
ಬೆಳಿಗ್ಗೆಯಿಂದ ಆರಂಭವಾದ ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಪಟ್ಟಣದ ಭಕ್ತಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಮಾಚಿದೇವರ ಕೃಪೆಗೆ ಪಾತ್ರವಾಯಿತು. ಇನ್ನೂ ಹೆಸ್ಕಾಂ ಇಲಾಖೆ ರಥಭೀದಿಯಲ್ಲಿ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ನಿಲ್ಲಿಸಿ ವಿದ್ಯುತ್ ತಂತಿಗಳಿಂದ ಆವಘಡಗಳು ಸಂಭವಿಸದಂತೆ ನಿಗಾ ವಹಿಸಿತು. ಪೊಲೀಸ್ ಇಲಾಖೆಯ ಸಿಬ್ಬಂದಿ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮ ವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

