ವಿಜಯಪುರ: ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗಳಿಗೆ ತೆರಳಿ ಎಲ್ಲರೂ ಮತದಾನ ಮಾಡಬೇಕು. ಮತದಾನ ದಿನದಂದು ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶೇಷಚೇತನರಿಗೆ ರ‍್ಯಾಂಪ್ ವ್ಯವಸ್ಥೆ, ಮತ್ತು ಇತರೆ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿ ಸಿ.ಆರ್. ಮುಂಡರಗಿ ಹೇಳಿದರು.
ಮಂಗಳವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಇವರ ಸಹಯೋಗದಲ್ಲಿ ಜಿಲ್ಲಾ ವಿಜಯಪುರ ನಗರದ ವಿವಿಧ ಬ್ಯಾಂಕ್‌ಗಳಿಗೆ ಹಾಗೂ ಅಂಚೆ ಕಛೇರಿಗಳಿಗೆ ತೆರಳಿ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಗ್ರಾಹಕರಿಗೆ ಹಮ್ಮಿಕೊಂಡ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ನರೇಂದ್ರಬಾಬು ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು, ಅಷ್ಟೇ ಅಲ್ಲದೇ ನಮ್ಮ ಜವಾಬ್ದಾರಿಯೂ ಸಹ. ತಾವೆಲ್ಲರೂ ಮತದಾನ ಮಾಡಿದರೆ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಿಮ್ಮ ಒಂದು ಮತ ದೇಶಕ್ಕೆ ಅತೀ ಮುಖ್ಯ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ವಾಣಿಶ್ರೀ ಉಮರಾಣಿ ಮಾತನಾಡಿ, ವಿಶೇಷವಾಗಿ ಜಿಲ್ಲೆಯ ಪ್ರತಿ ಮತಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೋಸ್ಕರ ಮಹಿಳಾ ಸ್ನೇಹಿ ಮತಗಟ್ಟೆ(ಪಿಂಕ್/ಸಖಿ ಬೂತ್)ಗಳನ್ನು ಅಲಂಕರಿಸಲಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು ಎಂದರು.
ಬಳಿಕ ಎಲ್ಲರೂ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು ಮತ್ತು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಿದರು. ವಿವಿಧ ಬ್ಯಾಂಕ್ ಗಳ ಗೋಡೆಗಳ ಮೇಲೆ ಮತದಾನ ಜಾಗೃತಿಯ ವಿವಿಧ ಪೋಸ್ಟರ್ ಗಳನ್ನು ಅಂಟಿಸಲಾಯಿತು. ಮತದಾನ ಜಾಗೃತಿಯ ಕರಪತ್ರಗಳನ್ನು ಬ್ಯಾಂಕ್ ಗಳ ವ್ಯವಸ್ಥಾಪಕರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಅಂಚೆ ಕಚೇರಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ:
ವಿಜಯಪುರ ಜಿಲ್ಲೆಯ ಅಂಚೆ ವಿಭಾಗ ಕಚೇರಿಗೆ ಭೇಟಿ ನೀಡಿ ಅಂಚೆ ಇಲಾಖೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕಛೇರಿಯ ಅಧೀಕ್ಷಕರಾದ ಜಿ. ಬಿ ನಾಯಕರವರೊಂದಿಗೆ ಚರ್ಚಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿಗಾಗಿ ತಯಾರಿಸಿರುವ ಶೀಲುಗಳು, ಕರಪತ್ರಗಳು ಮತ್ತು ಪೋಸ್ಟರ್ ಗಳನ್ನು ಹಸ್ತಾಂತರಿಸಲಾಯಿತು. ಮತದಾನ ಪ್ರಮಾಣ ಹೆಚ್ಚಿಸಲು ವಿಜಯಪುರ ಜಿಲ್ಲೆಯ ಅಂಚೆ ವಿಭಾಗದ ಅಡಿಯಲ್ಲಿ ಬರುವ ಎಲ್ಲ ಅಂಚೆ ಕಛೇರಿಗಳಿಗೆ ಬರುವ ಗ್ರಾಹಕರಿಗೆ ಮತದಾನ ಜಾಗೃತಿ ಮೂಡಿಸಿ ಜಿಲ್ಲಾ ಪಂಚಾಯತಿಗೆ ಮಾಹಿತಿ ನೀಡಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಎ. ಬಿ. ಅಲ್ಲಾಪೂರ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ದಾರಾವತ್ ವೀರಣ್ಣ, ಹಿರಿಯ ವ್ಯವಸ್ಥಾಪಕರಾದ ವಿಷ್ಣುವರ್ಧನ ರೆಡ್ಡಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಅನಿಲ ಮೋರೆ, ಸ್ಟೇಟ್ ಬ್ಯಾಂಕ್‌ನ ಕ್ರೆಡಿಟ್ ಮ್ಯಾನೆಜರ್ ಕೃಷ್ಣಯ್ಯ, ಆಪರೇಷನ್ಸ್ ಮ್ಯಾನೇಜರ್ ಪಿ.ಆರ್ ದೇಸಾಯಿ, ಅಂಚೆ ವಿಭಾಗದ ಉಪ ಅಧೀಕ್ಷಕರಾದ ವ್ಹಿ. ವ್ಹಿ. ನಿಂಬರಗಿ, ಕಚೇರಿ ಸಹಾಯಕರಾದ ವ್ಹಿ. ಎಸ್. ಉಮರಾಣಿ, ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾ ಪಂಚಾಯತಿಯ ಸಿ. ಸಿ ಕುಲಕರ್ಣಿ, ವಿಶ್ವನಾಥ ಶಹಾಪೂರ, ಸುವರ್ಣ ಭಜಂತ್ರಿ, ಹಾಗೂ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

