-ಮಲಿಕ್.ಎಲ್.ಜಮಾದಾರ
ವಿಜಯಪುರ: ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಝಳವೋ ಝಳ. ಇದರಿಂದ ನೀರಿನ ಆಕರಗಳು ಒಣಗಿ ಹೋಗಿವೆ. ಜನ ಜೀವನಕ್ಕೆ ನೀರಿನ ಅಭಾವದಿಂದ ಅಸ್ತವ್ಯಸ್ತ ಉಂಟಾಗಿದೆ. ಇಂತಹ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಮತ್ತಷ್ಟು ತಾರಕ್ಕೇರಿದೆ. ಜನ ಜಾನುವಾರುಗಳಿಗೆ ನೀರಿನ ಅಭಾವದಿಂದಾಗಿ ಗ್ರಾಮದ ಸುತ್ತಮುತ್ತಲಿನ ವಸ್ತಿ ಪ್ರದೇಶಗಳಲ್ಲಿ ನೀರನ್ನು ಪೂರೈಸಲು ನಂದರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಧುಮಕನಾಳ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವತಃ ಗ್ರಾಮ ಪಂಚಾಯತಿ ಸದಸ್ಯರೇ ಜನರ ನೀರಿನ ಬವಣೆಯನ್ನು ನೀಗಿಸುವಲ್ಲಿ ಮುಂದಾಗಿದ್ದಾರೆ. ನಿತ್ಯ ಹಲವು ವಸ್ತಿ ಪ್ರದೇಶಗಳಿಗೆ ಖುದ್ದಾಗಿ ತಾವೇ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಗ್ರಾಮಸ್ಥರು ಇವರ ಸೇವೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದಿದ್ದಾರೆ.
ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಬಿಸಲಿನ ಹಂಗಿಲ್ಲದೆ ನಿರಂತರ ಜನರ ದಾಹ ತಣಿಸುವಲ್ಲಿ ಮುಂದಾಗಿದ್ದಾರೆ. ಜನಪ್ರತಿನಿಧಿಗಳು ಕುಂತಲ್ಲೆ ಪರೋಕ್ಷವಾಗಿ ಜನಸೇವೆ ಮಾಡುವ ಈ ದಿನಮಾನದಲ್ಲಿ ಇವರು ಪ್ರತ್ಯಕ್ಷವಾಗಿ ಈ ಸೇವೆಗೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯವಾದದ್ದಾಗಿದೆ.
ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ತತ್ತರಿಸಿದ ಜನತೆಗೆ ಕುಡಿಯಲು ನೀರು ಸರಬರಾಜು ಮಾಡುತ್ತಿದ್ದಾರೆ. ಭೀಮಾನದಿಯ ನದಿಯಿಂದ ಸುಮಾರು 30 ಕಿ.ಮಿ ಅಂತರದಲ್ಲಿದ್ದು ಯಾವುದೇ ನೀರಿನ ಆಕರಗಳಿಲ್ಲ. ಇತ್ತ ಬೋರವೆಲ್ 1000 ಫೂಟ್ ಆಳವನ್ನು ಕೊರೆಸಿದರೂ ಬಾರದ ನೀರು, ಇದರಿಂದ ಜನರು ಹೈರಾಣಾಗಿದ್ದಾರೆ. ವಸ್ತಿ ಪ್ರದೇಶಗಳಿಗೆ ನೀರಿನ ಅತೀವ ಕೊರತೆ ಇದ್ದು, ಇದೆಲ್ಲವನ್ನೂ ಗಮನಿಸಿದ ವಿಜಯಪುರ ಜಿಲ್ಲಾಡಳಿತದಿಂದ ಅಲ್ಲೆಲ್ಲ ಟ್ಯಾಂಕರ ಮೂಲಕ ನೀರು ಪೂರೈಸಲು ಆದೇಶಿಸಲಾಗಿದೆ.
ಆದರೆ ಇಲ್ಲಿ ಈ ಗ್ರಾಮದ ಸುತ್ತಮುತ್ತಲಿನ ವಸ್ತಿ ಪ್ರದೇಶಗಳಿಗೆ ಖುದ್ದಾಗಿ ಗ್ರಾಮ ಪಂಚಾಯತಿ ಸದಸ್ಯರೇ ಫೀಲ್ಡ್ಗಿಳಿದು ನೀರಿನ ಬವಣೆ ನೀಗಿಸುತ್ತಿದ್ದಾರೆ. ಇಂತಹ ಜನಪ್ರತಿನಿಧಿ ಪಡೆದ ನಾವೇ ಧನ್ಯರು ಎನ್ನುತ್ತಾರೆ ಇಲ್ಲಿನ ಜನ.

” ಬೇಸಿಗೆಯಲ್ಲಿ ಜನರಿಗೆ ಜೀವ ಜಲ ನೀರನ್ನು ಒದಗಿಸುವುದು ಪುಣ್ಯದ ಕೆಲಸ. ಅದರಂತೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸುತ್ತಿದ್ದೇನೆ. ಇದು ನನ್ನ ಕರ್ತವ್ಯವು ಕೂಡ ಹೌದು. ಗ್ರಾಮದ ಎಲ್ಲ ವಸ್ತಿ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ.”
-ಅಪ್ಪುಗೌಡ ಚ. ಪಾಟೀಲ ನಂದರಗಿ ಗ್ರಾಪಂ ಸದಸ್ಯರು
” ಅಪ್ಪುಗೌಡ್ರು ಬೇಸಿಗೆಯಲ್ಲಿ ನಿತ್ಯವೂ ನೀರನ್ನು ಪೂರೈಸುತ್ತಿದ್ದಾರೆ. ನಮ್ಮ ನೂರಾರು ಕುರಿಗಳಿಗೆ ಮತ್ತು ಜನ ಜೀವನಕ್ಕೆ ತುಂಬಾ ಅನುಕೂಲವಾಗಿದೆ ಇದರಿಂದ ನಮ್ಮ ನೀರಿನ ದಾಹ ತಣಿಸಿದಂತಾಗಿದೆ. ಅವರು ಬೆಳಗಿನಿಂದ ನೀರು ಪೂರೈಸುವಲ್ಲಿ ತೊಡಗುತ್ತಾರೆ. ಇವರ ಸೇವೆ ಶ್ಲಾಘನೀಯವಾದದ್ದು.”
– ಕುರಿಗಾಹಿ ದಸ್ತಗೀರಸಾಬ ದಾ.ಶೇಖ್ ಗ್ರಾಮಸ್ಥ

