ಗಬಸಾವಳಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಜಿಗಜಿಣಗಿ ಮನವಿ
ಮೋರಟಗಿ: ಪ್ರಧಾನಿ ಮೋದಿ ಹಾಗೂ ಸಚಿವರ ಮನವೊಲಿಸಿ ಕಳೆದ ಅವಧಿಯಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಜಿ ಸರಕಾರಕ್ಕೆ ಬೆಂಬಲಿಸಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸಮೀಪದ ಗಬಸಾವಳಗಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೋರಟಗಿ ಮತ್ತು ಯಂಕಂಚಿ ಜಿಲ್ಲಾ ಪಂಚಾಯಿತಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ವಿಜಯಪುರ ಇತಿಹಾಸದಲ್ಲೇ ಗುರುತಿಸುವಂಥ ಕೆಲಸಗಳು ಕಳೆದ ಅವಧಿಯಲ್ಲಿ ಆಗಿವೆ. ನಾನೊಬ್ಬ ಜಾತ್ಯತೀತ ನಾಯಕ. ಜನ ನನ್ನ ಸರಳತೆ ನೋಡಿ ಆಶೀರ್ವದಿಸಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮತ್ತೊಮ್ಮೆ ತಮ್ಮ ಸೇವೆಗೆ ಅವಕಾಶ ಕಲ್ಪಿಸಲು ಆಶೀರ್ವದಿಸಬೇಕು ಎಂದರು.
ಪ್ರಧಾನಿ ಮೋದಿ ಅವರ ಆಡಳಿತದಿಂದ ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರವಾಗಿದೆ. ೫೦ ವರ್ಷಗಳಲ್ಲಿ ಆಗದ ಕೆಲಸಗಳನ್ನು ಮೋದಿಜಿ ಕೆಲವೇ ವರ್ಷಗಳಲ್ಲಿ ಮಾಡಿದ್ದಾರೆ. ಅವರ ಕಾರ್ಯಗಳು ಅಜರಾಮರ. ಅನೇಕ ವರ್ಷಗಳವರೆಗೆ ಸರಕಾರ ನಡೆಸಿದರೂ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗದವರು ಮೋದಿ ಅವರ ಕಾರ್ಯಗಳ ಬಗ್ಗೆ ಅಸೂಯೆಪಡುತ್ತಿದಾರೆ. ಅವುಗಳನ್ನು ಸಹಿಸಿಕೊಳ್ಳಲು ಆಗದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಸುಳ್ಳು ಭರವಸೆ, ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯ ಸರಕಾರ ದಿವಾಳಿಯಾಗಿದೆ.
ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ೨೫ ಸಾವಿರ ಕೋಟಿ ಹಣವನ್ನು ರಾಜ್ಯ ಸರಕಾರ ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಂಡಿದೆ. ಈ ಕುರಿತು ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಪ್ರಶ್ನಿಸಬೇಕು. ಎಲ್ಲ ದಲಿತರು ಒಗ್ಗಟ್ಟಾಗಿ ಇದನ್ನು ಖಂಡಿಸಬೇಕು. ಯಾವುದೇ ಜಾತಿ ಭೇದ ಮಾಡದೆ ದಲಿತರಿಗೆ ಸಾಕಷ್ಟು ಗೌರವ ನೀಡುವ ಬಿಜೆಪಿಯನ್ನು ಎಲ್ಲರೂ ಬೆಂಬಲಿಸಬೇಕು ಎಂದರು.
ಮಾಜಿ ಶಾಸಕ ರಮೇಶ ಭೂಸನೂರ,
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಪಕ್ಷದ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ( ಕೂಚಬಾಳ ), ಕರ್ನಾಟಕ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಸಿಂದಗಿ ಮಂಡಲ ಅಧ್ಯಕ್ಷ ಸಂತೋಷಗೌಡ ಪಾಟೀಲ್ ಡಂಬಳ ಹಾಗೂ ಮಾಜಿ ಜಿ. ಪಂ. ಸದಸ್ಯ ಸಿದ್ದು ಬುಳ್ಳಾ, ಡಾ, ಅನಿಲ್ ನಾಯಕ್, ಮಂಡಲ ಉಪಾಧ್ಯಕ್ಷ ಬಂಗಾರೆಪ್ಪಗೌಡ ಬಿರಾದಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕರ್ತರ ಸಭೆಯಲ್ಲಿ ಯಂಕಂಚಿ ಹಾಗೂ ಮೋರಟಗಿ ಜಿಲ್ಲಾ ಪಂಚಾಯತಿಯ ಬೂತ ಮಟ್ಟದ ಕಾರ್ಯಕರ್ತರು ಅಧ್ಯಕ್ಷರು ಹಾಗೂ ಪಕ್ಷದ ಅಭಿಮಾನಿಗಳು ಇದ್ದರು.

