ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ಸೂಚನೆ
ವಿಜಯಪುರ: ಪ್ರಸಕ್ತ ವರ್ಷ ೨೦೨೪ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-೧ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏಪ್ರಿಲ್ ೧೫ರಿಂದ ವಿಜಯಪುರ ನಗರದಲ್ಲಿರುವ ಹತ್ತು ಮೌಲ್ಯಮಾಪನ ಕೇಂದ್ರಗಳಲ್ಲಿ ಜರುಗಲಿದ್ದು, ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿತ ಎಲ್ಲ ಶಿಕ್ಷಕರು ಮತ್ತು ಗುಂಪು ಬಿ ವೃಂದದ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳು ನಿಗದಿತ ದಿನಾಂಕ ಮತ್ತು ಸಮಯಕ್ಕೆ ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಸೂಚಿಸಿದ್ದಾರೆ.
ಮೌಲ್ಯಮಾಪನ ಕಾರ್ಯಕ್ಕೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳ ಸಮೇತ ಎಲ್ಲ ಪೂರ್ವಸಿದ್ಧತೆಗಳು ಪೂರ್ಣಗೊಂಡಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಎಲ್ಲ ವಿಷಯಗಳ ಶಿಕ್ಷಕರುಗಳ ಮೌಲ್ಯಮಾಪನ ಕಾರ್ಯದ ಆದೇಶಗಳನ್ನು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರುಗಳ ಲಾಗಿನ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸಂಬಂಧಿಸಿದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ವಿಷಯ ಶಿಕ್ಷಕರುಗಳು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಕ್ರಮ ವಹಿಸಬೇಕು. ಮೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರು ಉಳಿಯುವುದು ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ನಿಯಮ ೨೮ ಮತ್ತು ೧೨೨ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ನಿಯಮಗಳು-೨೦೧೨ರ ಪ್ರಕಾರ ದಂಡನಾರ್ಹ ನಡುವಳಿಕೆಯಾಗುತ್ತದೆ. ಆದ್ದರಿಂದ ಯಾವುದೇ ರೀತಿಯ ಅನಪೇಕ್ಷಿತ ಘಟನೆಗಳಿಗೆ ಆಸ್ಪದ ನೀಡದೇ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ವಿಷಯ ಶಿಕ್ಷಕರುಗಳು ಸಕಾಲದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
