ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಇಡೀ ದಿನ ಜರುಗಿದ ವಾದಿ-ಪ್ರತಿವಾದಿ ಗೀ ಗೀ ಪದಗಳು ಜನಮನಸೂರೆಗೊಂಡವು.
ಸಿಂದಗಿ ತಾಲೂಕಿನ ಮದರಿಯ ಸಂಗನಬಸವೇಶ್ವರ ಗೀ ಗೀ ಪದ ಕಲಾ ಮೇಳ ಹಾಗೂ ಅಥಣಿ ತಾಲೂಕಿನ ಬಾಳೇಗರಿಯ ರೇಣುಕಾದೇವಿ ಗೀ ಗೀ ಪದ ಕಲಾ ಮೇಳದಿಂದ ವಾದಿ-ಪ್ರತಿವಾದಿ ಗೀ ಗೀ ಪದಗಳು ಜರುಗಿದವು. ಮದರಿಯ ರಾಜ್ಯ ಪ್ರಶಸ್ತಿ ವಿಜೇತ ಗಾಯಕ ಭಾಗಣ್ಣ ಲಕ್ಷ್ಮಣ ತಳವಾರ ಇವರಿಗೆ ಪರಶುರಾಮ ಮಾದರ ಅವರು ವಾಯಲೀನ್ ಸಾಥ್ ನೀಡಿದರು. ಬಾಳೇಗರಿಯ ಗಾಯಕಿ ಲಕ್ಷ್ಮೀಬಾಯಿ ಅಡಿವೆಪ್ಪ ಕೊಣ್ಣೂರ ಗೀ ಗೀ ಮುಖ್ಯಗಾಯಕಿಗೆ ಗೋಪಾಲ ಕೋಳಿ, ಶ್ರೀಕಾಂತ ಕೊಣ್ಣೂರ, ಶಾಂತಪ್ಪ ಜಮಾದಾರ ಸಾಥ್ ನೀಡಿದರು. ಎರಡು ಗೀ ಗೀ ಕಲಾಮೇಳಗಳು ಗರ್ಭಕಾಂಡ ವಿಷಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಸ್ತುತ ಪಡಿಸಿದ ವಾದಿ-ಪ್ರತಿವಾದಿ ಗೀ ಗೀ ಪದಗಳನ್ನು ಜನರು ಆಲಿಸಿದರು.
ಮುಖ್ಯ ಗಾಯಕಿ ಲಕ್ಷ್ಮೀಬಾಯಿ ಅಡಿವೆಪ್ಪ ಕೊಣ್ಣೂರ ಅವರನ್ನು ಮಾತನಾಡಿಸಿದಾಗ, ನಿಜವಾದ ಕಲಾವಿದರಿಗೆ ಎಲ್ಲ ಕಾಲದಲ್ಲಿಯೂ ಬೆಲೆ ಇದೆ. ನಾನು ಎಂಟನೇ ವರ್ಷದಿಂದಲೂ ಈ ಗೀ ಗೀ ಪದಗಳನ್ನು ಹಾಡಲು ಆರಂಭಿಸಿದೆ. ನನಗೆ ನಮ್ಮ ಊರಿನ ಗುರುಗಳಿಂದ ಗೀ ಗೀ ಪದಗಳನ್ನು ಹಾಡುವದನ್ನು ಕಲಿತೆ. ಮೂವತ್ತು ವರ್ಷದಿಂದ ನಾನು ಗೀ ಗೀ ಪದಗಳನ್ನು ಹಾಡುತ್ತಿದ್ದೇನೆ. ಸರ್ಕಾರವು ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ನೀಡುತ್ತಿರುವುದು ಕಲಾವಿದರ ಬದುಕಿಗೆ ಆಸರೆಯಾಗಿದೆ. ಇಂದು ಮೊಬೈಲ್, ದೂರದರ್ಶನಯುಗದಲ್ಲಿ ಗೀ ಗೀ ಪದಗಳನ್ನು ಕಡಿಮೆಯಾಗಿದೆ. ಯುವಜನಾಂಗವು ಜನಪದ ಕಲೆಗಳನ್ನು ಕಲಿಯಲು ಆಸಕ್ತಿ ವಹಿಸುವುದು ಕಡಿಮೆ. ನನ್ನ ಮಗ ಶ್ರೀಕಾಂತನಿಗೆ ನನ್ನ ಗೀ ಗೀ ಪದ ಹಾಡುವ ಕಲೆಯನ್ನು ಕಲಿಸುತ್ತಿರುವೆ. ಮುಂದಿನ ದಿನಗಳಲ್ಲಿ ನನ್ನ ಮೊಮ್ಮಕ್ಕಳಿಗೂ ಇದನ್ನು ಕಲಿಸುವ ವಿಚಾರವಿದೆ ಎಂದರು.
ರಾತ್ರಿ ಬಸವನಬಾಗೇವಾಡಿಯ ಬಸವೇಶ್ವರ ಬಯಲಾಟ ಸಂಘದಿಂದ ರೇಣುಕಾ ಯಲ್ಲಮ್ಮದೇವಿ ಮಹಾತ್ಮೆ ಎಂಬ ಬಯಲಾಟ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

