“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಇಡೀ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯವನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ ಬಹುಶಹ ಕನ್ನಡ ಸಾಹಿತ್ಯದಲ್ಲಿರುವ ಕಥೆ, ಕವನ, ಕಾವ್ಯ, ವಚನಗಳು, ಕೀರ್ತನೆಗಳು ಚಿಂತನಗಳು, ಸಿದ್ದಾಂತಗಳು, ಜನಪದ ಸಾಹಿತ್ಯ, ಪುರಾಣಗಳು ಪುಣ್ಯ ಕಥೆಗಳು,ಹನಿಗವನಗಳು ಮಿಡಿಗವನಗಳು, ಚುಟುಕಗಳು, ಸಾಂಗತ್ಯಗಳು,ದ್ವಿಪದಿಗಳು, ತ್ರಿಪದಿಗಳು, ಸುನೀತಗಳು ನಾಟಕಗಳು ಹೀಗೆ ಹತ್ತು ಹಲವು ಪ್ರಕಾರಗಳನ್ನು ನಾವು ಕಾಣಬಹುದು.
ತಾವು ಬದುಕುತ್ತಿರುವ ರೀತಿ ಸಮಾಜದ ನೀತಿ ಹೆಣ್ಣು ಮಕ್ಕಳಿಗೆ ಇದ್ದ ಸೂಕ್ಷ್ಮವಾದ ಸಂವೇದನೆಗಳು ಆಕೆಯ ಆಸೆಯ ಆಕಾಂಕ್ಷೆಗಳು ತಲ್ಲಣಗಳು ಪ್ರೀತಿ ಪ್ರೇಮ ಕರುಣೆ ಮುಂತಾದ ನವರಸಗಳನ್ನು ಸುರಿಸುವ ಕೆಲವೊಮ್ಮೆ ಸಮಾಜವನ್ನು ಬಡಿದೆಚ್ಚರಿಸುವ ಸಾಹಿತ್ಯ ಹೆಣ್ಣು ಮಕ್ಕಳಿಂದ ಸೃಷ್ಟಿಯಾಯಿತು. ಈ ರೀತಿ ಸಾಹಿತ್ಯ ಸೃಷ್ಟಿಯಾಗುವ ಮುನ್ನ ಕಂತಿ ಎಂಬ ಮಹಿಳೆ ಮೊಟ್ಟಮೊದಲ ಬಾರಿ ಕವನಗಳನ್ನು ರಚಿಸಿದಳು ಎಂಬುದು ನಮ್ಮ ಗಮನಕ್ಕೆ ಬರುತ್ತದೆ, ಆದರೂ ಆಕೆಯ ಯಾವುದೆ ಕೃತಿಗಳು ಇಂದಿನವರೆಗೂ ಲಭ್ಯವಾಗಿಲ್ಲ. ಆದ್ದರಿಂದ ವಚನಕಾರ್ತಿ, ಕದಳಿಯ ಕರ್ಪೂರ ಎಂದು ಕರೆಯುವ ಅಕ್ಕಮಹಾದೇವಿ ಕನ್ನಡದ ಮೊದಲ ಕವಯತ್ರಿ ಎಂದೆನಿಸಿಕೊಂಡಳು. ತನ್ನ ಸುತ್ತಣ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಢಾಂಬಿಕತೆ, ಮೂಢನಂಬಿಕೆ ಅಶ್ರದ್ಧೆ ಅಸಮಾನತೆಗಳನ್ನು ವಿರೋಧಿಸುತ್ತಾ ನಿಜವಾದ ಭಕ್ತಿ ಜ್ಞಾನ ವೈರಾಗ್ಯಗಳನ್ನು ಕುರಿತು ವಚನಗಳ ಮೂಲಕ ಪ್ರಸ್ತುತ ಪಡಿಸಿದಳು. ಸಮಾಜದ ಜನರ ಮೌಲ್ಯವನ್ನು ಪ್ರಶ್ನಿಸುತ್ತ, ತಪ್ಪಿದಲ್ಲಿ ತಿದ್ದುವ ಕೆಲಸವನ್ನು ಮಾಡಿದಳು. .ವಚನ ಸಾಹಿತ್ಯದ ಮೂಲಕ ನಮ್ಮ ಕನ್ನಡ ಸಾಹಿತ್ಯ ಪ್ರಾರಂಭವಾಯಿತು ಎಂದು ಹೇಳಿದರೆ ತಪ್ಪಿಲ್ಲ. ಮನೆ ಮನೆಗಳಲ್ಲಿ ಗೃಹಿಣೀಯರಾಗಿ ತಮ್ಮ ಕಾಯಕ ದಾಸೋಹಗಳನ್ನು ಮಾಡುತ್ತಿದ್ದ ಮಹಿಳೆಯರು ಅನುಭವ ಮಂಟಪದ ರೂವಾರಿಗಳ ಸಾಂಗತ್ಯದಲ್ಲಿ ತಮ್ಮ ಅನುಭವವನ್ನು ವಚನಗಳ ರೂಪದಲ್ಲಿ ರಚಿಸಿದರು.
ಸುಮಾರು 36ಕ್ಕೂ ಹೆಚ್ಚು ಜನ ಶಿವಶರಣೆಯರು ವಚನಗಳನ್ನು ರಚಿಸಿದರು.
ಅಮ್ಮುಗೆರಾಯ ಅಮ್ಮಗೆ ರಾಯಮ್ಮ, ರೆಮ್ಮವ್ವ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕದಿರ ರೆಮ್ಮವ್ವೆ, ಕನ್ನಡಿ ಕಾಯಕದ ರೆಮ್ಮುವ್ವೆ, ಉರಿಲಿಂಗಪೆದ್ದಿಗಳ ಪತ್ನಿ ಕಾಳವ್ವೆ, ಕಾಲ ಕಣ್ಣೀ ಕಾಮವ್ವ, ಬಸವಯ್ಯನವರ ಧರ್ಮಪತ್ನಿ ಕಾಳವ್ವೆ, ಸಿದ್ಧಬುದ್ದಯ್ಯನವರ ಪತ್ನಿ ಕಾಳವ್ವೆ, ಕೇತಲದೇವಿ, ಕೊಟ್ಟಣದ ಸೋಮವ್ವೆ, ಮೋಳಿಗೆ ಮಹಾದೇವಿ, ಗಂಗಮ್ಮ, ಗಂಗಾಂಬಿಕೆ, ಗಜೇಶ ಮಸಣಯ್ಯನವರ ಪತ್ನಿ ಗುಪ್ತ ವಚನಕಾರ್ತಿ, ದುಗ್ಗಳೆ ನೀಲಾಂಬಿಕೆ,ಬೊಂತಾದೇವಿ, ಮಸಣಮ್ಮ, ರೇಕಮ್ಮ, ಲಕ್ಷ್ಮಮ್ಮ, ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮ, ವೀರಮ್ಮ, ಶರಣೆ ಸತ್ಯಕ್ಕ, ಸೂಳೆ ಸಂಕವ್ವೆ, ದೂಪದ ಗೊಗ್ಗವ್ವೆ, ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ ಹೀಗೆ 30ಕ್ಕೂ ಹೆಚ್ಚು ಜನ ಮಹಿಳಾ ವಚನಕಾರ್ತಿಯರು ವಚನಗಳನ್ನು ರಚನೆ ಮಾಡಿದ್ದು ಕಲ್ಯಾಣದ ಅನುಭವ ಮಂಟಪ ಜಗತ್ತಿಗೆ ನೀಡಿದ ದೊಡ್ಡ ಕಾಣಿಕೆಯಾಗಿದೆ. ಸಮಾಜದ ಅನಿಷ್ಟ ಮತ್ತು ಸಂಕುಚಿತ ರೀತಿ ನೀತಿಗಳನ್ನು ಜಾತಿಭೇದಗಳನ್ನು ಲಿಂಗ ಭೇದಗಳನ್ನು ತೊಡೆದು ಹಾಕುವ ಚಿಂತನೆ ಮಾಡಿದ ಅಂದಿನ ವಚನಕಾರ್ತಿಯರು ಇಂದಿನ ಮಹಿಳಾ ವಾದಕ್ಕೆ, ಸ್ತ್ರೀಪರ ಚಿಂತನೆಗಳಿಗೆ ಮೊದಲ ಮೆಟ್ಟಿಲನ್ನು ಕಟ್ಟಿಕೊಟ್ಟಿದ್ದಾರೆ. ಅಂತೆಯೇ ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಮೊದಲ ಬಂಡಾಯ ಲೇಖಕಿಯಾಗಿದ್ದಾಳೆ.
ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಸಾಹಿತಿಯೆಂದು ನಾವು ವಚನಕಾರ್ತಿ ಅಕ್ಕಮಹಾದೇವಿಯನ್ನು ಗುರುತಿಸುತ್ತೇವೆ.ಆದರೆ ಇದಕ್ಕೂ ಮುನ್ನ ಕಂತಿ ಎಂಬ ಓರ್ವ ಮಹಿಳೆ ಕವನಗಳನ್ನು ರಚಿಸಿದ್ದಳೆಂಬುದು ಎಲ್ಲರಿಗೂ ಗೊತ್ತಿದೆ ಆದರೆ ಆಕೆಯ ಯಾವುದೇ ಕವನ ಇಲ್ಲವೇ ಲೇಖನಗಳು ನಮಗೆ ಇನ್ನೂವರೆಗೂ ಸಿಕ್ಕಿಲ್ಲ. ಇನ್ನು ವಿಜಯನಗರ ಸಾಮ್ರಾಜ್ಯದ ಅಚ್ಚುತರಾಯನ ಹಿರಿಯ ಪತ್ನಿ ರಾಣಿ ತಿರುಮಲಾಂಬೆ ತನ್ನ ಪತಿಯ ಎರಡನೇ ಮದುವೆಯ ಕುರಿತು ವರದಾಂಬಿಕ ಪರಿಣಯ ಕೃತಿಯನ್ನು ರಚಿಸಿದಳು.
ವಿಜಯನಗರ ಅರಸರಾದ ಕಂಪಣ್ಣನ ರಾಣಿ ಗಂಗಾಂಬಿಕೆ ಕೂಡ ಸಂಸ್ಕೃತದಲ್ಲಿ ಮಧುರ ವಿಜಯ ಎಂಬ ಕೃತಿಯನ್ನು ರಚಿಸಿದಳು. ಇದು ಕನ್ನಡದಲ್ಲಿ ವೀರಕಂಪಣ ರಾಯ ಚರಿತೆ ಎಂಬ ಹೆಸರಿನಲ್ಲಿ ತರ್ಜುಮೆಗೊಂಡಿದೆ. ರಘುನಾಥ ನಾಯಕನ ಆಸ್ಥಾನದಲ್ಲಿ ಮಧುರ ವಾಣಿ ಎಂಬ ಕವಯತ್ರಿ ಇದ್ದಳು ಎಂದು ತಿಳಿದು ಬರುತ್ತದೆ, ಮುಂದೆ ಮೈಸೂರಿನ ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ ಮತ್ತು ಶೃಂಗಾರಮ್ಮ ಎಂಬ ಕವಯತ್ರಿಯರಿದ್ದರು.
ಸಂಚಿಯ ಹೊನ್ನಮ್ಮ ಹದಿಬದಿಯ ಧರ್ಮ ಎಂಬ ಕಾವ್ಯವನ್ನು ಸಾಂಗತ್ಯದಲ್ಲಿ ರಚಿಸಿದ್ದಾಳೆ. ಸಾಂಪ್ರದಾಯಿಕ ಗೃಹಿಣಿ ಲಕ್ಷಣಗಳನ್ನು ವಿವರಿಸಿರುವ ಸಂಚಿಯ ಹೊನ್ನಮ್ಮ ಹೆಣ್ಣು ಮಕ್ಕಳು ಸಂಪೂರ್ಣವಾಗಿ ಪುರುಷ ಪ್ರಧಾನ ವ್ಯವಸ್ಥೆಯನ್ನು ಒಪ್ಪಿಕೊಂಡು ಪುರುಷನ ಸುಖ ಸಂತೋಷಗಳಿಗಾಗಿ ದುಡಿದರೆ ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಯೂರಿರುತ್ತದೆ ಎಂಬ ಅಭಿಪ್ರಾಯವನ್ನು ತನ್ನ ಕೃತಿಯಲ್ಲಿ ತೋರಿದ್ದಾಳೆ.
ಆಕೆಯ ಕವನದ ಸಾಲುಗಳೇ ಹೆಣ್ಣು ಶಿಶು ಉಳಿಸಿ ಯೋಜನೆಯ ಜಾಹೀರಾತಿನಲ್ಲಿ ಬಳಸಿಕೊಂಡಿದ್ದರು.ಹೆಣ್ಣಲ್ಲವೇ ನಮ್ಮನೆಲ್ಲ ಪಡೆದ ತಾಯಿ ಹೆಣ್ಣಲ್ಲವೇ ನಮ್ಮನೆಲ್ಲ ಹಡೆದವಳು ಹೆಣ್ಣು ಹೆಣ್ಣೇಂದೇತಕೆ ಬೀಳುಗಳವರು ಕಣ್ಣು ಕಾಣದ ಗಾವಿಲರು ಎಂದು ಹೆಣ್ಣು ಕುಲವನ್ನು ಹೀಗಳೆಯುವ ಜನರಿಗೆ ಆಕೆ ಉತ್ತರಿಸಿದರೆ ಕುವರನಾದರೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು ಎಂದು ಅತ್ಯಂತ ಸೌಮ್ಯವಾಗಿ ಸ್ತ್ರೀ ಪುರುಷ ತಾರತಮ್ಯವನ್ನು ಪ್ರಶ್ನಿಸಿದ್ದಾಳೆ..
ಗಲಗಲಿಯ ಅವ್ವ ಹರಪನಹಳ್ಳಿಯ ಭೀಮವ್ವ ಬಿಜಾಪುರದ ಪ್ರಯಾಗಬಾಯಿ, ಯಶೋದಾಬಾಯಿ ಅಂಬಾಬಾಯಿ ರುಕ್ಮಿಣಿ ಬಾಯಿ ಮುಂತಾದವರು ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಗೋಪಾಲಕೃಷ್ಣ ವಿಠಲ ಎಂಬ ಅಂಕಿತನಾಮದಲ್ಲಿ 400ಕ್ಕೂ ಹೆಚ್ಚು ಕವನಗಳನ್ನು, ದ್ವಿಪದಿ ಛಂದಸ್ಸಿನಲ್ಲಿ ರಾಮಾಯಣವನ್ನುರಚಿಸಿರುವ ಚಿತ್ರದುರ್ಗದ ಅಂಬಾಬಾಯಿಯ ಕುರಿತು ಇತ್ತೀಚೆಗೆ ಮಹತ್ತರ ದಾಖಲೆಗಳು ದೊರೆತಿದ್ದು ಆಕೆಯ ಹಾಡುಗಳ ಕ್ಯಾಸೆಟ್ 2003 ರಲ್ಲಿ ಬಿಡುಗಡೆಯಾಗಿದೆ.
ಇನ್ನು ಸ್ತ್ರೀಪರ ಚಿಂತನೆಯನ್ನು ಹೊಂದಿರುವ ಜಾನಪದ ಮಹಿಳೆಯರ ಅಕ್ಕರೆಯ ಆಡಂಬೊಲ. ತಮ್ಮ ಸುಖ ದುಃಖ ನೋವು ನಲಿವು ಅಕ್ಕರೆ ಹಂಬಲ ಬಾಳಿನ ಏರಿಳಿತಗಳು, ಹೆಣ್ಣು ಮಕ್ಕಳ ಕುರಿತಾದ ನೂರಾರು ಸಮ್ಮಿಶ್ರ ಭಾವಗಳನ್ನು ಜಾನಪದದಲ್ಲಿ ನಾವು ಕಾಣಬಹುದು. ಇದು ಕೂಡ ಸಾಕಷ್ಟು ಅಜ್ಞಾತ ಮಹಿಳೆಯರಿಂದ ರಚಿತವಾಗಿವೆ. ಸೋಬಾನೆ ಪದ,ಹಂತಿಯ ಪದ,ಬೀಸುವ ಕುಟ್ಟುವ ಸಮಯದಲ್ಲಿ ರಚಿತವಾದ ಪದಗಳು ಹೀಗೆ ಹತ್ತು ಹಲವು ಜಾನಪದ ರಚನೆಗಳು ಜನರಿಂದ ಜನರ ಬಾಯಿಗೆ ಹರಿದು ಬಂದಿವೆ.
ಇನ್ನು ಮೈಸೂರು ದೊರೆಗಳಾದ ಕೃಷ್ಣರಾಜ ಒಡೆಯರ್ ಅವರ ಪತ್ನಿ ಚೆಲುವಾಂಬೆಯವರು ವರನಂದಿ ಕಲ್ಯಾಣ ಎಂಬ ಕೃತಿಯನ್ನು ರಚಿಸಿದರು. ದಿಲ್ಲಿಯ ಬಾದಶಹನ ಪುತ್ರಿ ವರನಂದಿ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯನ್ನು ಹಿಂಬಾಲಿಸಿ ಬಂದು ಮದುವೆಯಾದದ್ದು ಈ ಕಾವ್ಯದ ವಸ್ತು. ನಿಜವಾಗಿಯೂ ಇದೊಂದು ಅದ್ಭುತ ಕೃತಿ ಇದರ ಅನುವಾದವನ್ನು ಓದಿ ಸಣ್ಣದೊಂದು ಲೇಖನವನ್ನು ನಾನು ಕೂಡ ಬರೆದಿದ್ದೇನೆ.
ಇನ್ನು ಹೊಸಗನ್ನಡದ ಸಾಹಿತ್ಯಕ್ಕೆ ಬಂದರೆ ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ ಸರಸ್ವತಿ ರಾಜವಾಡೆ , ಹೆಚ್ ವಿ ಸಾವಿತ್ರಮ್ಮ, ಶ್ಯಾಮಲಾದೇವಿ ಬೆಳಗಾಂವ್ಕರ್, ಜಯದೇವಿತಾಯಿ ಲಿಗಾಡೆ, ತ್ರಿವೇಣಿ, ಎಂ.ಕೆ .ಇಂದಿರಾ, ಅನುಪಮಾ ನಿರಂಜನ್, ವೈದೇಹಿ, ಸಾಯಿಸುತೆ, ಎಚ್ ಜಿ ರಾಧಾದೇವಿ, ಸರೋಜಿನಿ ಮಹಿಷಿ ಶೃಂಗಾರಮ್ಮ, ವೀಣಾ ಶಾಂತೇಶ್ವರ, ಪದ್ಮಾ ಶೆಣೈ ,ಎಚ್ಎಸ್ ಪಾರ್ವತಿ, ಶಾಂತದೇವಿ ಮಾಳವಾಡ, ಸಾರಾ ಅಬುಬಕರ್, ಸಬಿಹ ಭೂಮಿ ಗೌಡ, ನೇಮಿಚಂದ್ರ, ಚಿ.ನ. ಮಂಗಳ,, ಸಂಧ್ಯಾ ಪೈ, ಸುಧಾ ಮೂರ್ತಿ ಹೀಗೆ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ಇದೀಗ ನೂರಾರು ಸಾವಿರಾರು ಲೇಖಕಿಯರು ಕಂಡು ಬರುತ್ತಾರೆ. ಕನ್ನಡ ಸಾಹಿತ್ಯ ಈ ಎಲ್ಲ ಲೇಖಕರ ಕಥೆ, ಕವನ, ಕಾದಂಬರಿ, ಹಾಸ್ಯ, ಲಲಿತ ಬರಹ, ರಸಾಯನ,ವಿಡಂಬನೆ, ವಿಮರ್ಶೆ, ಸಂಶೋಧನಾ ಬರಹ,ಸಾಮಾಜಿಕ, ಧಾರ್ಮಿಕ ಮತ್ತು ವೈಜ್ಞಾನಿಕ ಬರಹಗಳಿಂದ ಅತ್ಯಂತ ಶ್ರೀಮಂತವಾಗಿದೆ. ಕೇವಲ ಅಡುಗೆ ಮನೆ ಸಾಹಿತ್ಯ ಎಂದು ಹೆಣ್ಣು ಮಕ್ಕಳು ರಚಿಸುತ್ತಿದ್ದ ಸಾಹಿತ್ಯವನ್ನು ಹೀಗಳೆಯುತ್ತಿದ್ದ ಜನರಿಗೆ ಸವಾಲು ಹಾಕುವಂತೆ ಮಹಿಳೆಯರು ಪ್ರಬುದ್ಧವಾಗಿ ಬರೆಯುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಮನರಂಜನೆ, ಕ್ರೀಡೆ, ವೈದ್ಯಕೀಯ, ವಿಜ್ಞಾನ, ಪ್ರವಾಸ ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿರತರಾಗಿರುವ ಮಹಿಳೆಯರ ಕುರಿತು ಮಹಿಳೆಯರೇ ಲೇಖನಗಳನ್ನು ಬರೆಯುತ್ತಿದ್ದಾರೆ. ಸೂಕ್ಷ್ಮವಾದ ಸ್ತ್ರಿ ಸಂವೇದನೆಗಳ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಕುರಿತು ಸೂಕ್ತ ಅವಲೋಕನದ ಜೊತೆ ಜೊತೆಗೆ ಸ್ತ್ರೀ ಸಹಜವಾದ ಕುತೂಹಲ ಆಸಕ್ತಿಗಳು, ಹೆಣ್ಣು ಜೀವನದ ತುಡಿತ ಮಿಡಿತಗಳು ಅವರ ಮನೋದೈಹಿಕ ವ್ಯತ್ಯಾಸಗಳು ಹೀಗೆ ಹತ್ತು ಹಲವು ಹರವುಗಳಲ್ಲ ಸಾಹಿತ್ಯವನ್ನು ಅವರು ಹೊರ ತರುತ್ತಿದ್ದಾರೆ.
ಹೊಸಗನ್ನಡದ ಮೊದಲ ಲೇಖಕಿ ಎಂದು ಪ್ರಖ್ಯಾತರಾದವರು ತಿರುಮಲಾಂಬ. ನಂಜನಗೂಡಿನ ವಕೀಲ ವೆಂಕಟ ಕೃಷ್ಣ ಅಯ್ಯಂಗಾರ ಎಂಬವರ ಪುತ್ರಿ ತಿರುಮಲಂಬ ಸ್ತ್ರೀ ಕುಲದ ಏಳಿಗೆಗೆ ಹಗಲಿರುಳು ಶ್ರಮಿಸಿದವರು ಸಂಪಾದಕಿಯಾಗಿ ಪ್ರಕಾಶಕಿಯಾಗಿ ಮುದ್ರಕಿಯಾಗಿ ಆಕೆ ಕಾರ್ಯ ನಿರ್ವಹಿಸಿದರು ಆದರೆ ಶಾಂತಾದೇವಿ ಎಂಬ ಇನ್ನೋರ್ವ ಹೊಸ ಕನ್ನಡದ ಲೇಖಕಿ ನಂಜನಗೂಡು ತಿರುಮಲಾಂಬ ಅವರಿಗಿಂತಲೂ ಮುಂಚೆ ಸಾಹಿತ್ಯ ರಚನೆ ಮಾಡಿದ್ದಾರೆ ಎಂಬುದು ಇತ್ತೀಚಿಗೆ ತಿಳಿದು ಬಂದಿದೆ.
ಕನ್ನಡದಲ್ಲಿ ಹಾಸ್ಯ ಸಾಹಿತ್ಯವನ್ನು ಬರೆದವರಲ್ಲಿ ಟೀ ಸುನಂದಮ್ಮ, ನುಗ್ಗೆಹಳ್ಳಿ ಪಂಕಜ, ಭುವನೇಶ್ವರಿ ಹೆಗಡೆಯವರು ಪ್ರಖ್ಯಾತರು. ನಾವು ಚಿಕ್ಕವರಿದ್ದಾಗ ಸುಧಾ, ತರಂಗ ಮುಂತಾದ ವಾರಪತ್ರಿಕೆಗಳಲ್ಲಿ ಇವರ ಲೇಖನಗಳು ಸದಾ ಪ್ರಕಟವಾಗುತ್ತಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಬೆರಳೆಣಿಕೆಯಷ್ಟು ಇದ್ದಾಗಲೇ ಸೃಜನಶೀಲ ಹಾಸ್ಯ ಸಾಹಿತ್ಯವನ್ನು ರಚಿಸಿದ ಟಿ ಸುನಂದಮ್ಮನವರು ಸುಮಾರು 25 ವರ್ಷಗಳ ಕಾಲ ನಿರಂತರವಾಗಿ ರಾಶಿಯವರ ಕೊರವಂಜಿ ಪತ್ರಿಕೆಗೆ ಬರೆಯುತ್ತಿದ್ದರು. ಅವರ ಕಲ್ಪನೆಯ ಮೈಲಾರಯ್ಯ ಮತ್ತು ಸರಸು ಎಂಬ ದಂಪತಿಗಳನ್ನು ಅಂದಿನ ಕಾಲಮಾನದ ವರ್ತಮಾನದ ಘಟನೆಗಳನ್ನು ತಮ್ಮ ಹಾಸ್ಯ ಬರಹದ ವಸ್ತುಗಳನ್ನಾಗಿ ಆಕೆ ಬಳಸುತ್ತಿದ್ದರು.
ಪೆಪ್ಪರ್ಮೆಂಟು ಜಂಬದ ಚೀಲ ನನ್ನ ಅತ್ತೆಗಿರಿ ಮುತ್ತಿನ ಚಂಡು ಮುಂತಾದ ಹಾಸ್ಯ ಸಂಕಲನಗಳನ್ನು ಪ್ರಕಟಿಸಿದ ಅವರು ಗಂಭೀರ ಸಾಹಿತ್ಯದಲ್ಲೂ ಕೈಯಾಡಿಸಿದ್ದಿದೆ.
ಶಿ ಶಿ ಮಾಳವಾಡರ ಪತ್ನಿ ಶಾಂತಾದೇವಿ ಮಾಳವಾಡ ಮದುವೆಯಾದ ನಂತರ ಶಿಕ್ಷಣವನ್ನು ಮುಂದುವರಿಸಿ ರಸಪಾಕದಿಂದ ಹಿಡಿದು ಕೆಳದಿ ಚೆನ್ನಮ್ಮನ ವರೆಗಿನ ಸಂಶೋಧನಾತ್ಮಕ ಕೃತಿಗಳನ್ನು ಒಳಗೊಂಡಂತೆ 26 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರು ಇನ್ನಿತರ ಲೇಖಕಿಯರು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುವಲ್ಲಿ ಸಹಾಯ ಹಸ್ತ ಚಾಚಿದ್ದಾರೆ.
1923ರ ಸಮಯದಲ್ಲಿ ತಮ್ಮ ಹಲವಾರು ನಾಟಕ ಸಣ್ಣ ಕಥೆ ಕಾವ್ಯ ಪ್ರಬಂಧಗಳ ಮೂಲಕ ಸರಸ್ವತಿ ದೇವಿಗೌಡರವರು ಪರಂಪರಾನುಗತವಾಗಿ ಸ್ತ್ರೀ ಅನುಭವಿಸುತ್ತಾ ಬರುತ್ತಿರುವ ಮೌಲ್ಯಗಳು ಮತ್ತು ಧೋರಣೆಗಳನ್ನು ಒರೆಗೆ ಹಚ್ಚಿ ನೋಡಿದ್ದಾರೆ.
ಅದೇ ಸಮಯದಲ್ಲಿ ಇನ್ನೋರ್ವ ಲೇಖಕಿ ಗೀತಾ ಕುಲಕರ್ಣಿಯವರು ಸ್ತ್ರೀ ಪುರುಷ ಸಮಾನತೆಯನ್ನು ಸಾರುವ ಹಲವಾರು ಕಥೆಗಳು ಲೇಖನಗಳು ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ.
ತಮ್ಮೆಲ್ಲ ಕಥೆಗಳ ಮೂಲಕ ಜೀವನೋತ್ಸಾಹವನ್ನು ತೋರುತ್ತಿದ್ದ ರಾಜೇಶ್ವರಿ ನರಸಿಂಹಮೂರ್ತಿಯವರು, ಚಾರಿತ್ರಿಕ ಕಾದಂಬರಿಗಳನ್ನು ಬರೆದ ಮೊದಲ ಕನ್ನಡದ ಲೇಖಕಿ ಸಿಎನ್ ಜಯಲಕ್ಷ್ಮಿ ದೇವಿ ಶಪ್ತವಾಪಿ, ಗಂಗರಸ ದುರ್ವಿನೀತ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅಪಾರ ವಿದ್ವತ್ ಪ್ರತಿಭೆಯನ್ನು ಹೊಂದಿದ ಸರೋಜಿನಿ ಮಹಿಷಿ ಯವರು ಗಂಭೀರ ಚಿಂತನೆಗಳನ್ನು ಹೊಂದಿರುವ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. ಈ ಹಿಂದೆ ಮೈಸೂರು ರಾಜರ ಆಶ್ರಯದಲ್ಲಿದ್ದ ಮಂಡ್ಯದ ಶೃಂಗಾರಮ್ಮ ಅವರು ಶ್ರೀದೇವಿ ಎಂಬ ಕಾವ್ಯನಾಮದಲ್ಲಿ ಆಗಮ ಶಾಸ್ತ್ರದ ಕುರಿತು ಲೇಖನಗಳನ್ನು ಬರೆದ ಮೊದಲ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಜನಪ್ರಿಯತೆಯ ಆಧಾರದಲ್ಲಿ ಹೇಳುವುದಾದರೆ ಕಾದಂಬರಿಕಾರರಾದ ತ್ರಿವೇಣಿ ಎಂ ಕೆ ಇಂದಿರಾ, ಅನುಪಮಾ ನಿರಂಜನ್, ಸಾಯಿಸುತೆ, ಹೆಚ್ ಜಿ ರಾಧಾದೇವಿ ಮುಂತಾದವರು 20ನೇ ಶತಮಾನದ ಮಧ್ಯಭಾಗದಿಂದ ಹೆಚ್ಚು ಜನಪ್ರಿಯರಾಗಿದ್ದವರು.
ವೈಯುಕ್ತಿಕವಾಗಿ ನನಗೆ ತ್ರಿವೇಣಿಯವರ ಅಪಸ್ವರ, ಬೆಳ್ಳಿ ಮೋಡ ಹೂವು ಹಣ್ಣು ಬೆಕ್ಕಿನ ಕಣ್ಣು, ದೂರದ ಬೆಟ್ಟ ಹಣ್ಣೆಲೆ ಚಿಗುರಿದಾಗ ಸೋತು ಗೆದ್ದವಳು ಕೀಲು ಗೊಂಬೆ ಮುಂತಾದ ಕಾದಂಬರಿಗಳು ಬಹಳ ಆಪ್ತವಾದವು. ಅದರಲ್ಲಿಯೂ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಬರೆದ ದಾಂಪತ್ಯದಲ್ಲಿ ಸಾಮರಸ್ಯವಿಲ್ಲದ ಅಪಸ್ವರ, ಚಿಕ್ಕಮ್ಮನ ಕಿರುಕುಳದಿಂದ ಮಾನಸಿಕವಾಗಿ ಸೋತು ಮತ್ತೆ ಬದುಕಿನತ್ತ ಮುಖ ಮಾಡಿದ ಬೆಕ್ಕಿನ ಕಣ್ಣು ಕಾದಂಬರಿಗಳು ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿದ್ದವು.
ತಮ್ಮ 45ನೇ ವಯಸ್ಸಿನಲ್ಲಿ ಬರೆಯಲು ಆರಂಭಿಸಿದ ಎಂಕೆ ಇಂದಿರಾ ಅವರ ಕಾದಂಬರಿಗಳು ವಿವಿಧ ಸಾಮಾಜಿಕ ಹಿನ್ನೆಲೆಗಳನ್ನು ತೋರುತ್ತ ವೈವಿಧ್ಯಮಯ ಮತ್ತು ರೋಚಕ ಬದುಕಿನ ಚಿತ್ರಣಗಳನ್ನು ಕೊಡುತ್ತವೆ
ಸದಾನಂದ ಎಂಬ ಇವರ ಕಾದಂಬರಿ ನನಗೆ ಅತ್ಯಂತ ಅಚ್ಚುಮೆಚ್ಚಿನದು. ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿ ಮಡಿಯುಟ್ಟ ಪಣಿಯಮ್ಮ ಜೀವನವನ್ನು ಎದುರಿಸಿದ ರೀತಿ ಅದ್ಭುತ. ಗೆಜ್ಜೆಪೂಜೆ ಸಮಾಜದ ಅನಿಷ್ಟ ಪದ್ದತಿಯನ್ನು ವಿರೋಧಿಸಿ ಬರೆದ ಕಾದಂಬರಿ.
ವೀಣಾ ಶಾಂತೇಶ್ವರ ಅವರು ಬರೆದ ಗಂಡಸರು ಎಂಬ ಕೃತಿ ಅತಿ ಹೆಚ್ಚು ಚರ್ಚಿತಗೊಂಡ ಕೃತಿಯಾಗಿದೆ
ವೃತ್ತಿಯಿಂದ ವೈದ್ಯ ಆಗಿದ್ದ ಡಾಕ್ಟರ್ ಅನುಪಮಾ ನಿರಂಜನ್ ಕ್ಯಾನ್ಸರ್ ರೋಗದಿಂದ ಪೀಡಿತರಾಗಿದರೂ ಸರಿಸುಮಾರು 20 ವರ್ಷಗಳ ಕಾಲ ಕ್ಯಾನ್ಸರ್ ಅನ್ನು ಹಿಮ್ಮೆಟ್ಟಿಸಿದ ಸಾಹಸಿ ಲೇಖಕಿ. ಅನೇಕ ವೈದ್ಯಕೀಯ ವಿಚಾರಗಳನ್ನು ತಮ್ಮ ಲೇಖನಗಳ ಮೂಲಕ ಸರಳವಾಗಿ ಜನರಿಗೆ ವಿವರಿಸುತ್ತಿದ್ದ ಅವರ ಪರಿ ಬಹಳ ಮೆಚ್ಚುಗೆ ಗಳಿಸಿತ್ತು. ಅವರ ತಾಯಿ ಮಗು ಎಂಬ ಕೃತಿ ಇಂದಿಗೂ ಬಹುತೇಕ ಎಲ್ಲರ ಮನೆಗಳಲ್ಲಿ ಇದೆ. ಪ್ರಗತಿಪರ ನಿಲುವುಗಳನ್ನು ಹೊಂದಿದ್ದ ಡಾಕ್ಟರ್ ಅನುಪಮ ನಿರಂಜನ್ ಅವರು ಒಂದು ಘಟನೆ ಮತ್ತು ಆನಂತರ, ಮಾಧವಿ, ಒಂದು ಗಿಣಿಯ ಕಥೆ, ದಿನಕ್ಕೊಂದು ಕಥೆ, ಕೇಳು ಕಿಶೋರಿ, ದಾಂಪತ್ಯ ಗೀತೆ ಎಂಬ ಕೃತಿಗಳನ್ನು ರಚಿಸಿ ಮಹಿಳೆಯರಲ್ಲಿ ವೈದ್ಯಕೀಯ ಕುರಿತಾದ ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ.
ಡಾಕ್ಟರ್ ವಸುಂದರ ಭೂಪತಿ ಅವರು ಕೂಡ ಅನೇಕ ವೈದ್ಯಕೀಯ ಲೇಖನಗಳನ್ನು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಉತ್ತಮ ವಿಮರ್ಶಕರೆಂದೇ ಹೆಸರಾದ ಕಮಲ ಹಂಪನ ಅವರು ಬಾಸಿಂಗ, ಬಂದಳ ಬಡವಗ್ನಿ, ಬಿತ್ತರ ಹಾಲಿನ ಬಟ್ಟಲು ಮುಂತಾದ ಕೃತಿಗಳನ್ನು ರಚಿಸಿದ್ದಾರೆ
ವಿಜಯಾ ಅವರು ‘ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ’ ಎಂಬಂತಹ ಬೀದಿ ನಾಟಕಗಳಲ್ಲಿ, ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ವಿಧಾನದಲ್ಲಿಯೇ ಇರುವ ತಾರತಮ್ಯಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದರು.. ಅವರ ಕುದಿ ಎಸರು ಮತ್ತು ಬೆಂದಕಾಳು ಎಂಬ ಆತ್ಮ ಕಥೆಗಳನ್ನು ಬರೆದಿದ್ದು ಮೊದಲ ಕೃತಿ ಅವರ ಜೀವನದ ನಿಷ್ಠುರ ಸತ್ಯಗಳನ್ನು
ಹೇಳಿದ್ದು ಆಕೆ ಪಟ್ಟ ಬವಣೆ ಹಲವು ದಿನಗಳ ನಿದ್ದೆಯನ್ನು ಕಸಿಯುತ್ತದೆ
ನಾವೆಂದೂ ಕಂಡಿರದ ಮುಸಲ್ಮಾನ ಸಮಾಜದ ಹೆಣ್ಣು ಮಕ್ಕಳ ಮೇಲೆ ಆಗುವ ಶೋಷಣೆ ಮತ್ತು ಅವರು ಅನುಭವಿಸುವ ನೋವುಗಳನ್ನು ಸಾರಾ ಅಬೂಬಕ್ಕರ್ ಅವರು ತಮ್ಮ ಕಥೆಗಳಲ್ಲಿ ತಂದರು. ಲೇಖಕಿ ವೈದೇಹಿಯವರು ಅತ್ಯಂತ ಸೂಕ್ಷ್ಮವಾದ ಸ್ತ್ರೀ ವಾದಿ ನೆಲೆಯ ಕೃತಿಗಳನ್ನು ರಚಿಸಿದರು. ಕ್ರೌ0ಚ ಪಕ್ಷಿಗಳು, ಅಸ್ಪೃಶ್ಯರು ಮುಂತಾದ ಕೃತಿಗಳನ್ನು ಅವರು ರಚಿಸಿದರು.
ಇನ್ನು ಬಾಹ್ಯಾಕಾಶ ವಿಜ್ಞಾನಿಯಾಗಿರುವ ನೇಮಿಚಂದ್ರ ಅವರು ಅನೇಕ ವೈಜ್ಞಾನಿಕ ಲೇಖನಗಳ ಜೊತೆ ಜೊತೆಗೆ ಜರ್ಮನಿಯ ಮಹಾಯುದ್ಧದ ಸಮಯದಲ್ಲಿ ಭಾರತಕ್ಕೆ ಬಂದು ನೆಲೆಸಿದ ಯಹೂದಿ ಜನರ ಕುರಿತಾಗಿ ಬರೆದ ಕಾದಂಬರಿ ‘ಯಾದೇ ವಷೆಂ ‘ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಹಿಟ್ಲರನ ಕ್ರೌರ್ಯ ಮತ್ತು ಕಾನ್ಸಂಟ್ರೇಷನ್ ಕ್ಯಾಂಪ್ ಗಳ ದುಸ್ಥಿತಿ, ಇತಿಹಾಸದ ಕ್ರೌರ್ಯದ ಪರಮಾವಧಿ ಯಾದ ಹಾಲೋಕಾಸ್ಟ್ ನಲ್ಲಿ ಬದುಕುಳಿದ ಸಂತ್ರಸ್ತರ ಕಣ್ಣೀರಿನ ಕಥೆಗಳ ನೋವು ಮನಸ್ಸನ್ನು ಕಲಕುತ್ತದೆ. ಅಷ್ಟೇನೂ ಸುಂದರ ನಲ್ಲದ ಪತಿ ಪತ್ನಿಯ ಜನ್ಮ ಭೂಮಿಯನ್ನು ನೋಡುವ, ತನ್ನವರನ್ನು ಭೇಟಿ ಮಾಡುವ ಆಕಾಂಕ್ಷೆಯನ್ನು ಈಡೇರಿಸಲು ತನ್ನೆಲ್ಲ ಹಣವನ್ನು ಖರ್ಚು ಮಾಡುವುದು, ವಿದ್ಯೆಯ ಗಂಧವೇ ಅರಿಯದ ಹೆಣ್ಣು ಮಗಳು ತನ್ನ ಮಾವನ ತಿಥಿ ಮಾಡಿದಂತೆಯೇ ತಮ್ಮ ಮನೆಯಲ್ಲಿ ಇರುವ ಅನಾಥ ಯಹೂದಿ ಹೆಣ್ಣು ಮಗಳ ತಂದೆಯ ಸಮಾಧಿಯನ್ನು ಪೂಜಿಸುವ ಮಾನವೀಯ ದೃಶ್ಯಗಳ ಚಿತ್ರಣ ಇಲ್ಲಿದೆ.. ವಿದ್ಯೆಯ ಗಂಧವೇ ಅರಿಯದ ಆ ಹೆಣ್ಣು ಮಗಳು ಮಾತುಗಳು ಯಾವುದೇ ತತ್ವ ಜ್ಞಾನಿಗಿಂತ ಕಡಿಮೆ ಇಲ್ಲ. ಇವೆಲ್ಲ ಆಕೆಯ ಬದುಕಿನ ಕಲಿಕೆಗಳು.
ಪೆರುವಿನ ಕಣಿವೆಯಲ್ಲಿ ಎಂಬ ಪ್ರವಾಸ ಕಥನ ಅತ್ಯಂತ ಬಡತನ ಪರಿಸ್ಥಿತಿಯಲ್ಲಿರುವ ದಕ್ಷಿಣ ಅಮೆರಿಕದ ಭೂಭಾಗದ ಕುರಿತಾದದ್ದಾದರೆ ಅದರಲ್ಲಿ ಬರುವ ವೈಜ್ಞಾನಿಕ ವಿವರಣೆಗಳು, ನಾಜ್ಕ ಲೈನ್ಗಳ ಕುರಿತಾದ ವಿವರಣೆ, ಕಾಡುಗಳ ಕುರಿತಾದ ಕುತೂಹಲ ಮತ್ತು ಎರಡು ದೇಶಗಳ ನಡುವಿನ ಗಡಿಯನ್ನು ಗುರುತಿಸುವ ಭೂ ರೇಖೆ ಒಂದು ಊರಿನ ಮಧ್ಯಭಾಗದಲ್ಲಿ ಹಾದು ಹೋಗಿರುವುದು ಮುಂತಾದ ಹಲವಾರು ವಿಷಯಗಳನ್ನು ತಿಳಿಸುತ್ತದೆ.

ಬದುಕಿನ ಹಲವಾರು ಏರಿಳಿತಗಳಲ್ಲಿ ಸಾಗುತ್ತಾ ಬದುಕನ್ನು ಬದಲಿಸುವ ಕುರಿತಾದ ‘ಬದುಕು ಬದಲಿಸಬಹುದು’ ಎಂಬ ಹಲವಾರು ಲೇಖನಗಳ, ಕಥೆಗಳ ಕೃತಿಗಳು ಮನಸ್ಸನ್ನು ಅರಳಿಸುತ್ತವೆ.
ಇನ್ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿಯಾಗಿರುವ ಪದ್ಮಶ್ರೀ ಪುರಸ್ಕೃತ ಸುಧಾ ಮೂರ್ತಿ ಅವರು ಬರೆದ ಸಾಮಾನ್ಯರಲ್ಲಿ ಅಸಾಮಾನ್ಯರು, ಅಜ್ಜಿ ಹೇಳಿದ ಕಥೆಗಳು ದ 3000 ಸ್ಟಿಚಸ್, ಮಹಾಶ್ವೇತೆ ಇನ್ನೂ ಹಲವಾರು ಕೃತಿಗಳು ಅತ್ಯಂತ ಮಹತ್ತರವಾಗಿದ್ದು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿವೆ.
ಹೀಗೆ ನೋಡುತ್ತಾ ಹೋದರೆ ಕನ್ನಡ ತಾಯಿಗೆ ಸಾಹಿತ್ಯದ ಪುಷ್ಪವನ್ನು ಅರ್ಪಿಸುತ್ತಿರುವ ಹಲವಾರು ಮಹಿಳಾಮಣಿಯರು ನಮಗೆ ಕಂಡುಬರುತ್ತಾರೆ.
ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಚಿ.ನ.ಮಂಗಳ, ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ ಮಲ್ಲಿಕಾ ಘಂಟಿ, ಶೋಷಿತ ಸಮುದಾಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಬಿ.ಟಿ. ಲಲಿತ ನಾಯಕ್, ಸ್ವತಃ ಶೋಷಣೆಗೊಳಗಾದರೂ ಸಾಮಾಜಿಕ ನಾಟಕಗಳನ್ನು ಕೃತಿಗಳನ್ನು ರಚಿಸಿದ ವಿಜಯಮ್ಮ, ಅಪಾರ ನೋವು ನಿಷ್ಟುರ ಸಹಿಸಿದ ಬೆಳಗೆರೆ ಜಾನಕಮ್ಮ, ಹಲವಾರು ಶತಕೋಟಿ ರೂಪಾಯಿಗಳ ಅತಿ ದೊಡ್ಡ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿದ ಸುಧಾ ಮೂರ್ತಿಯವರು ಕನ್ನಡ ತಾಯಿಯ ಸಾಹಿತ್ಯದ ಸರಕ್ಕೆ ಒಂದೊಂದೇ ಮುತ್ತುಗಳನ್ನು ಜೋಡಿಸಿದವರು.
ಅಂತಿಮವಾಗಿ ಒಂದು ಮಾತನ್ನು ಹೇಳಲೇಬೇಕು. 19 ನೇ ಶತಮಾನದ ಆದಿ ಭಾಗದಲ್ಲಿ ಫೆಮಿನ ಮಧ್ಯಭಾಗದಲ್ಲಿ ಫ್ಯಾಮಿನಿಸ್ಟ್ ಮತ್ತು ಕೊನೆಯ ಭಾಗದಲ್ಲಿ ಫೆಮಿನೈನ್ ಎಂಬ ಸಂಸ್ಕೃತಿ ಪಾಶ್ಚಾತ್ಯ ಜಗತ್ತಿನಲ್ಲಿ ಕಾಣಬರುತ್ತಿತ್ತು.
ಅಂತಹ ಫೆಮಿನ ಫೆಮಿನೈನ್ ಮತ್ತು ಫೆಮಿನಿಸ್ಟ್ ಎಂಬ ಮಹಿಳಾ ಪರ ಚಿಂತನೆಗಳು ನಮ್ಮ ದೇಶದಲ್ಲಿ 12ನೇ ಶತಮಾನದಲ್ಲಿಯೇ ನಾವು ವಚನಕಾರ್ತಿಯರಲ್ಲಿ ಕಂಡಿದ್ದೆವು ಎಂದರೆ ನಮ್ಮ ಕನ್ನಡ ಸಾಹಿತ್ಯದ ಅಗಾಧತೆಯನ್ನು ಅರ್ಥಮಾಡಿಕೊಳ್ಳಬಹುದು.
ಸಾಹಿತ್ಯದ ಸಾಗರಕ್ಕೆ ಸೇರುವ ನದಿಗಳು ಸಾವಿರಾರು. ಅಂತಹ ಸಾವಿರಾರು ನದಿಗಳಲ್ಲಿ ಹಲವರನ್ನು ನೆನಪಿಸಿಕೊಳ್ಳುವ ಗುರುತಿಸುವ ಅವರ ಕುರಿತು ಮಾಹಿತಿ ನೀಡುವ ಈ ಕಾರ್ಯದಲ್ಲಿ ಕೆಲವರ ಹೆಸರುಗಳು ಬಿಟ್ಟು ಹೋಗಿರಬಹುದು. ಆದರೆ ಉದ್ದೇಶಪೂರ್ವಕವಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ನೂರಾರು ಆಟಿಕೆಗಳ ಮಧ್ಯದಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂದು ಪುಟ್ಟ ಮಗುವಿನಲ್ಲಿ ಉಂಟಾಗುವ ಗೊಂದಲ ನನ್ನಲ್ಲೂ ಉಂಟಾಗಿದ್ದು ದಿಕ್ಕು ತಿಳಿಯದಂತಾಗಿತ್ತು. ಅಂತೆಯೇ ಆಯ್ದ ಕೆಲವು ಮಹಿಳಾ ಲೇಖಕರ ಕೊಡುಗೆಗಳನ್ನು ಇಲ್ಲಿ ಸ್ಮರಿಸಿದ್ದೇನೆ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ