ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಬ್ರಾಹಿಂಪುರದಲ್ಲಿ ಶ್ರೀ ಮರಗಮ್ಮ ದೇವಿ ಜಾತ್ರೆ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಜಾತ್ರೆಗೂ ಮೊದಲು ಒಂದು ತಿಂಗಳು ವಾರ ಹಿಡಿಯಲಾಗಿತ್ತು. ಈ ಅವಧಿಯಲ್ಲಿ ಪ್ರತೀ ಮಂಗಳವಾರ, ಶುಕ್ರವಾರ ವಾಡಿಕೆಯಂತೆ ನೀರು ನೀಡಿ, ನೈವೇದ್ಯ ಸಮರ್ಪಣೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ದೇವಿಯ ಆರಾಧನೆ ಮಾಡಲಾಯಿತು. ಕೊನೆಯ ವಾರವಾದ ಮಂಗಳವಾರ ಅದ್ಧೂರಿಯಿಂದ ದೇವಿಯ ಜಾತ್ರೆ ನಡೆಯಿತು.
ಜಾತ್ರೆಯ ದಿನ ಮರಗಮ್ಮ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಯ ಗದ್ದುಗೆಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಇಬ್ರಾಹಿಂಪುರ ಸೇರಿದಂತೆ ಸುತ್ತಲಿನ ವಿವಿಧ ಬಡಾವಣೆಗಳಿಂದ ಸಹಸ್ರಾರು ಜನ ಭಕ್ತರು ಮರಗಮ್ಮ ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಿರಂತರ ಅನ್ನದಾಸೋಹ ನಡೆಯಿತು. ಸಂಜೆ ವಿವಿಧ ವಾದ್ಯವೈಭವದೊಂದಿಗೆ ಮರಗಮ್ಮ ದೇವಿ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ಮರಗಮ್ಮ ದೇವಿ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಾಯ್ದು ಮರಗವ್ವನ ಕಟ್ಟೆಗೆ ಭೇಟಿ ನೀಡಿ ಮರಳಿ ದೇವಸ್ಥಾನಕ್ಕೆ ಅಗಮಿಸಿ ಸಂಪನ್ನಗೊಂಡಿತು.
ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು. ಎಲ್ಲರೂ ದೇವಿಗೆ ನೀರು ನೀಡಿ, ಹೂವು- ಹಣ್ಣು- ಕಾಯಿ ಸಮರ್ಪಿಸಿ ನಮಿಸುತ್ತ ಭಕ್ತಿಭಾವ ಮೆರೆದರು.
ಜಾತ್ರೆಯ ಅಂಗವಾಗಿ ಮರಗಮ್ಮ ದೇವಿ ದೇವಸ್ಥಾನ ಕಟ್ಟಡಕ್ಕೆ ಸುಣ್ಣಬಣ್ಣ ಬಳಿದು ವಿದ್ಯುತ್ ದೀಪಾಲಂಕಾರ ಮಾಡಿ ದೇವಸ್ಥಾನದ ಮುಂಭಾಗದಲ್ಲಿ ಶಾಮೀಯಾನ ಹಾಕಲಾಗಿತ್ತು.
ಪ್ರತೀ ವರ್ಷದಂತೆ ಈ ಸಲವೂ ಮರಗಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಯಾವುದೇ ಅಡೆತಡೆಯಿಲ್ಲದೇ ನಿರ್ವಿಘ್ನವಾಗಿ ನಡೆಯಿತು. ಹರಕೆ ಹೊತ್ತ ಭಕ್ತರು ಕುರಿ-ಕೋಳಿ(ಹುಂಜ)ಗಳನ್ನು ದೇವಸ್ಥಾನದ ಆವರಣದಲ್ಲಿ ದೇವಿಗೆ ಬಲಿಕೊಟ್ಟು ತಮ್ಮ ಹರಕೆ ತೀರಿಸಿದರು.
ಮರಗಮ್ಮ ದೇವಿ ದೇವಸ್ಥಾನ ಸೇವಾ ಸಮಿತಿಯ ಪ್ರಮುಖರಾದ ಅಶೋಕ ಭಜಂತ್ರಿ (ಬಾಗೇವಾಡಿ), ರವೀಂದ್ರ ಜಾಧವ, ಅಶೋಕ ಭಜಂತ್ರಿ, ಬಸು ಬಾಗೇವಾಡಿ, ವಿಜಯ ಭಜಂತ್ರಿ, ಶಂಕರ ಬಾಗೇವಾಡಿ, ಸುರೇಶ ಭಜಂತ್ರಿ (ಯಡ್ರಾಮಿ), ನಂದು ಭಜಂತ್ರಿ, ಬಾಬು ಭಜಂತ್ರಿ, ಆನಂದ ಭಜಂತ್ರಿ, ಬಾಬು ಭಜಂತ್ರಿ (ಚಿನಮಳಿ) ಸೇರಿದಂತೆ ಅನೇಕ ಯುವಕರು ಜಾತ್ರೆಯ ಯಶಸ್ವಿಗೆ ಶ್ರಮಿಸಿದರು.