ಪೊಲೀಸರ ಮೇಲೆ ಕಲ್ಲು, ಕಂಟ್ರಿ ಪಿಸ್ತೂಲ್ ನಿಂದ ಆರೋಪಿಗಳು ದಾಳಿ | ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಿನ್ನೆಯಷ್ಟೇ (ಜು.೧೪) ನಗರದಲ್ಲಿ ನಡೆದ ಸುಶೀಲ್ ಕಾಳೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಕಲ್ಲು, ಕಂಟ್ರಿ ಪಿಸ್ತೂಲ್ ನಿಂದ ಆರೋಪಿಗಳು ದಾಳಿ ನಡೆಸಿದಾಗ ಪೊಲೀಸರು ಪ್ರತಿಯಾಗಿ ಆರೋಪಿಗಳಿಬ್ಬರ ಮೇಲೆ ಗುಂಡು ಹಾರಿಸಿದ್ದು, ಅವರ ಕಾಲುಗಳಿಗೆ ಗಾಯಗಳಾದ ಘಟನೆ ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇಟ್ಟಂಗಿಹಾಳ ರಸ್ತೆಯಲ್ಲಿ ನಡೆದಿದೆ.
ಆಕಾಶ ಕಲ್ಲವ್ವಗೋಳ (24), ಸುಭಾಸ ಬಗಲಿ (20) ಗಾಯಗೊಂಡ ಆರೋಪಿಗಳು.
ಇಬ್ಬರು ಆರೋಪಿಗಳಿಗೆ ಕಾಲಿಗೆ ಗುಂಡು ತಗಲಿದ್ದು, ಆರೋಪಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಸುಶೀಲ್ ಕಾಳೆ ಕೊಲೆ ಆರೋಪಿಗಳು ಇಟ್ಟಂಗಿಹಾಳ ರಸ್ತೆ ಕಡೆಗೆ ಇರುವ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗ
ಆರೋಪಿಗಳು ಪೊಲೀಸರ ಮೇಲೇ ಕಲ್ಲು ತೂರಾಟ ನಡೆಸಿ, ತಮ್ಮ ಬಳಿ ಇದ್ದ ಕಂಟ್ರಿ ಪಿಸ್ತೂಲ್ ನಿಂದ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ.
ಆಗ ಆತ್ಮ ರಕ್ಷಣೆಗಾಗಿ ಪೊಲೀಸ್ ಇನಸ್ಪೆಕ್ಟರ್ ಪ್ರದೀಪ ತಳಕೇರಿ ಆರೋಪಿಗಳ ಕಾಲಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಆರೋಪಿಗಳಿಬ್ಬರ ಕಾಲಿಗೆ ತಲಾ ಒಂದು ಗುಂಡು ತಗುಲಿದೆ.
ಗಾಯಗೊಂಡ ಆರೋಪಿಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ನಗರದ ಎಸ್.ಎಸ್. ರಸ್ತೆಯ ಎಸ್. ಎಸ್. ಕಾಂಪ್ಲೆಕ್ಸ್ ನ ಅಮರವರ್ಷಿಣಿ ಸಹಕಾರಿ ಬ್ಯಾಂಕಿನಲ್ಲಿ ಸುಶೀಲ ಕಾಳೆ ಮೇಲೆ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿದ್ದರು.
ಈ ಸಂಬಂಧ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
