ಜಾನಪದ ಸಂಭ್ರಮ | ಕಜಾಪ ವಡವಡಗಿ ವಲಯ ಘಟಕ ಉದ್ಘಾಟನೆ | ಗೋನಾಳ ಅಭಿಮತ
ಬಸವನಬಾಗೇವಾಡಿ: ಜಾನಪದ ಸಂಸ್ಕೃತಿಯು ಆಚಾರ-ವಿಚಾರ, ನೀತಿ-ನಿಯಮ, ನಂಬಿಕೆ – ಸಂಪ್ರದಾಯ, ಮಾತು -ಹರಟೆ, ಮತ್ತು ಆಚರಣೆಗಳ ಮೂಲಕ ಮೌಖಿಕ ಪರಂಪರೆಯ ಮೂಲಕ ಜನರ ಒಳಿತಿಗಾಗಿ ಉಳಿದುಕೊಂಡಿವೆ. ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ ಇಡಿ ಜಗತ್ತಿಗೆ ಮಾದರಿಯಾಗಿವೆ ಎಂದು ಕನ್ನಡ ಜಾನಪದ ಪರಿಷತ್ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎ ಆರ್ ಮುಲ್ಲಾ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಜಾಯವಾಡಗಿಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಬಸವನಬಾಗೇವಾಡಿ ಹಾಗೂ ಸೋಮನಾಥ ವ ಶಿವಪ್ಪ ಮುತ್ಯಾನ ಜಾತ್ರಾ ಸಮಿತಿ ಸಹಯೋಗದಲ್ಲಿ “ಜಾನಪದ ಸಂಭ್ರಮ” ಹಾಗೂ ” ಕ ಜಾ ಪ ವಡವಡಗಿ ವಲಯ ಘಟಕ” ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಡಾ ಎಸ್ ಬಾಲಾಜಿ ಮತ್ತು ಜಿಲ್ಲೆಯಲ್ಲಿ ಬಾಳನಗೌಡ ಪಾಟೀಲರ ನೇತೃತ್ವದಲ್ಲಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಭರದಿಂದ ಸಾಗುತ್ತಿದೆ. ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವನಬಾಗೇವಾಡಿ ತಾಲೂಕು ಕ ಜಾ ಪ ಅಧ್ಯಕ್ಷ ದೇವೇಂದ್ರ ಗೋನಾಳ, ಜಾನಪದ ಕಲಾವಿದರು ಈ ದೇಶದ ಸನಾತನ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಸುತ್ತಾ, ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಾವಿದರಿಗೆ ಸರಕಾರ ಸಹಾಯ,ಸವಲತ್ತು ಮತ್ತು ಗೌರವ ನೀಡಬೇಕೆಂದು ಹೇಳಿದರು.
ನಿಡಗುಂದಿ ತಾಲೂಕು ಕ ಜಾ ಪ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ ವಲಯ ಘಟಕದ ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡಿ ಜಾನಪದ ಸಂಸ್ಕೃತಿ ಜೀವಂತವಾಗಿಡಲು ಹಳ್ಳಿಗಳು ಕಾರಣಿಭೂತವಾಗಿವೆ.ಅದಕ್ಕಾಗಿ ಕ ಜಾ ಪ ವಲಯ ಘಟಕ ಸ್ಥಾಪನೆ ಮಾಡುತ್ತಿದ್ದೇವೆ. ಈ ಮೂಲಕ ಜಾನಪದ ಉಳಿಸಿ ಬೆಳೆಸಲು ಸಹಕಾರಿಯಾಗುತ್ತಿದೆ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಂಚಾಲಕ ಪ್ರೊ ಗುರುರಾಜ ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ತಿನ ಕಾರ್ಯ ಚಟುವಟಿಕೆ ತಿಳಿಸಿದರು. ಹಿರೇಮುರಾಳ ವಲಯ ಅಧ್ಯಕ್ಷ ಗಿರೀಶಗೌಡ ಪಾಟೀಲ ಮತ್ತು ಜಾನಪದ ಚಿಂತಕ ಕಾಶಿನಾಥ ಅಗಸಬಾಳ ಮಾತನಾಡಿದರು.
ವೇದಿಕೆಯಲ್ಲಿ ಜಾತ್ರಾ ಸಮಿತಿಯ ಬಸನಗೌಡ ಪಾಟೀಲ, ಶರಣಗೌಡ ನರಸಲಗಿ, ಪರಸಪ್ಪ ಪೂಜಾರಿ,ಶರಣಗೌಡ ಪಾಟೀಲ, ಮುದಕನಗೌಡ ಕಾಶಿನಕುಂಟಿ ಮತ್ತಿತರರು ಉಪಸ್ಥಿತರಿದ್ದರು. ವಲಯ ಘಟಕದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಪರಿಷತ್ತಿನ ಪದಪತ್ರ ನೀಡಲಾಯಿತು.
ವಲಯ ಘಟಕದ ನೂತನ ಅಧ್ಯಕ್ಷ ಮಹಾಂತಗೌಡ ಗೌಡರ ಸ್ವಾಗತಿಸಿದರು.ಪ್ರಭುಸ್ವಾಮಿ ಹಿರೇಮಠ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭಜನಾಪದ, ಡೊಳ್ಳಿನಪದ, ಸಂಪ್ರದಾಯ ಪದ, ಗೀಗೀಪದ ಪ್ರದರ್ಶನ ನಡೆಯಿತು.

