ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೇವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಸಂಜೆ ಅಪಾರ ಭಕ್ತರ ಜಯಘೋಷದೊಂದಿಗೆ ಸಡಗರ, ಸಂಭ್ರಮದಿಂದ ರಥೋತ್ಸವ ಜರುಗಿತು.
ರಥೋತ್ಸವದಂಗವಾಗಿ ಪೂರ್ವಭಾವಿಯಾಗಿ ವಿವಿಧ ವಾದ್ಯಮೇಳದೊಂದಿಗೆ ಬ್ಯಾಕೋಡ ಗ್ರಾಮಸ್ಥರು ರಥಕ್ಕೆ ಕಳಸ ಏರಿಸಿದರು. ಸೋಲವಾಡಗಿ ಗ್ರಾಸ್ಥರು ಎತ್ತಿನ ಗಾಡಿಯಲ್ಲಿ ಮೆರವಣಿಗೆಯೊಂದಿಗೆ ಆಗಮಿಸಿ ರಥದ ಮಿಣಿ ಕಟ್ಟಿದರು. ಅಗಸಬಾಳ ಗ್ರಾಮಸ್ಥರು ಬೆಳ್ಳಿ-ಛತ್ರಿ ಛಾಮರ ತೆಗೆದುಕೊಂಡು ಬಂದರು. ಬ್ಯಾಕೋಡ ಗ್ರಾಮದಿಂದ ಕಳಸದ ಮೆರವಣಿಗೆ ಆಗಮಿಸಿತು.
ವಿವಿಧ ಶ್ರೀಗಳ ಸಾನಿಧ್ಯದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತ ಸಮೂಹ ಜಯಘೋಷದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮನಾಥ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ನಡೆದ ರಥೋತ್ಸವದ ಸಮಯದಲ್ಲಿ ಭಕ್ತರು ಜೈ ಸೋಮನಾಥೇಶ್ವರ, ಜೈ ಶಿವಪ್ಪ ಮುತ್ಯಾ ಎಂಬ ಘೋಷಣೆಗಳನ್ನು ಹಾಕಿದರು. ಉತ್ತತ್ತಿ, ಬಾಳೆಹಣ್ಣು, ಕಬ್ಬಿನ ಜಲ್ಲೆ, ಹೂ-ಹಣ್ಣುಗಳನ್ನು ಎಸೆದು ಧನ್ಯತಾಭಾವ ಅನುಭವಿಸಿದರು. ರಥೋತ್ಸವದಲ್ಲಿ ಜ್ಙಾನಯೋಗಿ ಸಿದ್ದೇಶ್ವರ ಭಾವಚಿತ್ರ, ಜೋಡೆತ್ತು ಉಳಿಸಿ ಅಭಿಯಾನ ಗಮನ ಸೆಳೆದವು.
ವಿಜಯಪುರ, ಬಾಗಲಕೋಟ, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಪ್ರಮಾಣದ ಭಕ್ತರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು. ರಾತ್ರಿ ೧೦.೩೦ ಗಂಟೆಗೆ ಗಂಗೆ-ಗೌರಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ವಿವಿಧ ಕಲಾವಿದರಿಂದ ನೃತ್ಯ, ಸಂಗೀತ, ರಸಮಂಜರಿ ಕಾರ್ಯಕ್ರಮ ಜರುಗಿದವು.
ಟ್ರಾಫಿಕ್ ಸಮಸ್ಯೆಃ ಜಾಯವಾಡಗಿ ಗ್ರಾಮದ ಈ ದೇವಸ್ಥಾನದ ಮುಂಭಾಗ ವಿಜಯಪುರ-ಮುದ್ದೇಬಿಹಾಳ ಮುಖ್ಯ ರಸ್ತೆ ಹಾಯ್ದುಹೋಗುವದರಿಂದಾಗಿ ಈ ರಸ್ತೆಯಲ್ಲಿ ಅಪಾರ ಜನದಟ್ಟಣೆ ಇದ್ದ ಕಾರಣದಿಂದಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವಲ್ಲಿ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.
ದನಗಳ ಜಾತ್ರೆ,ವಿವಿದ ಕಸರತ್ತಿನ ಸ್ಪರ್ಧೆಗಳುಃ ಜಾತ್ರಾಯಂಗವಾಗಿ ಬುಧವಾರ ದನಗಳ ಜಾತ್ರೆ ಮತ್ತು ಮಾರಾಟ ನಡೆದವು. ಭಾರವಾದ ಚೀಲ ಎತ್ತುವ ಸ್ಪರ್ಧೆ ಹಾಗೂ ಭಾರವಾದ ಚೀಲ ಸಾಗ ಹೊತ್ತುಕೊಂಡು ಹೋಗುವ ಸ್ಪರ್ಧೆ ಜರುಗಿದವು. ರಾತ್ರಿ ಕಂಬಾಗಿಯ ಜೈ ಹನುಮಾನ ಹರದೇಶಿ ಗೀ ಗೀ ಪದ ಕಲಾ ಮೇಳ ಹಾಗೂ ಹಂದಿಗುಂದಿಯ ದುರ್ಗಾದೇವಿ ನಾಗೇಶಿ ಗೀ ಗೀ ಪದ ಕಲಾ ಮೇಳದಿಂದ ವಾದಿ-ಪ್ರತಿವಾದಿ ಗೀ ಗೀ ಪದಗಳು ಜರುಗಿದವು.
Subscribe to Updates
Get the latest creative news from FooBar about art, design and business.
Related Posts
Add A Comment

