ಬಸವನಬಾಗೇವಾಡಿ: ಇಂದಿನ ಜನಾಂಗಕ್ಕೆ ಹಂಡೆ ಅರಸರ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಹಂಡೆ ಅರಸರ ಕುಲತಿಲಕ, ಬಳ್ಳಾರಿಯ ನವನಿರ್ಮಾಪಕ ಹಂಡೆ ಅರಸ ಹನುಮಪ್ಪನಾಯಕ ಜಯಂತ್ಯೋತ್ಸವವನ್ನು ಪ್ರತಿವರ್ಷ ಏ.೯ ರಂದು ರಾಜ್ಯ ಸರ್ಕಾರದಿಂದ ಆಚರಿಸುವಂತೆ ಆಗಬೇಕೆಂದು ಅಖಿಲ ಕರ್ನಾಟಕ ವೀರಶೈವರ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.
ತಾಲೂಕಿನ ವಡವಡಗಿ ಗ್ರಾಮದ ನಂದಿಮಠದ ಆವರಣದಲ್ಲಿ ಅಖಿಲ ಕರ್ನಾಟಕ ವೀರಶೈವರ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ, ಕಲಬುರಗಿಯ ಚಾಲುಕ್ಯ ಸಂಸ್ಕ್ರತಿ ಅಧ್ಯಯನ ಪೀಠ, ಸಂಘದ ಜಿಲ್ಲಾ, ತಾಲೂಕು, ಗ್ರಾಮ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಂಡೆ ಅರಸ ಹನುಮಪ್ಪನಾಯಕನ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕಲಬುರಗಿಯ ಚಾಲುಕ್ಯ ಸಂಸ್ಕ್ರತಿ ಅಧ್ಯಯನ ಪೀಠವು ಹಂಡೆ ಪಾಳೆಗಾರರ ಇತಿಹಾಸ ಪರಂಪರೆ ಸೇರಿದಂತೆ ಹಂಡೆ ಅರಸರ ಇತಿಹಾಸದ ಮೇಲೆ ಸಾಕಷ್ಟು ಕೃತಿಗಳನ್ನು ಹೊರತರುವ ಮೂಲಕ ಹಂಡೆ ಅರಸರ ಇತಿಹಾಸವನ್ನು ದಾಖಲೀಕರಣ ಮಾಡಿದೆ. ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜನಿಸಿದ ಹನುಮಪ್ಪನಾಯಕನು ಬಳ್ಳಾರಿ ಸೇರಿ ಇತರೆಡೆ ಕೋಟೆ, ಕೊತ್ತಲಗಳನ್ನು ಕಟ್ಟಿದ ಇತಿಹಾಸವಿದೆ. ಇಂತಹ ಧೀಮಂತ ಇತಿಹಾಸಪುರುಷನ ಇತಿಹಾಸ ಎಲ್ಲೆಡೆ ಪಸರಿಸುವಂತಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಹಂಡೆ ಹನುಮಪ್ಪನಾಯಕನ ಜಯಂತಿಯನ್ನು ಆಚರಿಸಲು ಮುಂದಾಗಬೇಕೆಂದರು.
ಚಾಲುಕ್ಯ ಸಂಸ್ಕ್ರತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಸಮಾಜಮುಖಿ, ಶಿಕ್ಷಣಮುಖಿ ಕೆಲಸ ಮಾಡಿದ ಹಂಡೆವಜೀರ ಸಮಾಜ ಬಾಂಧವರ ಸಾಮಾಜಿಕ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶ ಹೊಂದಿದೆ. ಈಗಾಗಲೇ ಸಮಾಜದ ಇತಿಹಾಸವನ್ನು ದಾಖಲು ಮಾಡಲಾಗುತ್ತಿದೆ. ಮೊದಲ ಬಾರಿಗೆ ಬಸವನಬಾಗೇವಾಡಿಯಲ್ಲಿ ನಮ್ಮ ಸಮಾಜದ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಸಮಾಜದ ಇತಿಹಾಸದ ಸಂಶೋಧನೆ ಮಾಡಬೇಕೆಂಬ ಕ್ಷೇತ್ರಕಾರ್ಯ ಆರಂಭವಾಯಿತು. ಈಗಾಗಲೇ ನಮ್ಮ ಸಮಾಜದ ಕುರಿತು ಮೂರು ಪಿಎಚ್ಡಿ ಪ್ರಬಂಧಗಳು ಹೊರಬರುವ ಅನೇಕ ಕೃತಿಗಳು ಹೊರಬಂದಿವೆ. ಇತಿಹಾಸ ಅರಿತುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ರಾಜ್ಯ ಸಂಘದ ಉಪಾಧ್ಯಕ್ಷ ಎಸ್.ಜಿ.ಪಾಟೀಲ ಮಾತನಾಡಿ, ನಮ್ಮ ಸಂಘದಿಂದ ೧೦ ವರ್ಷಕೊಮ್ಮೆ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಸಲ ಬರುವ ನವೆಂಬರ್ ತಿಂಗಳಲ್ಲಿ ಮುದ್ದೇಬಿಹಾಳದಲ್ಲಿ ಆಯೋಜನೆ ಮಾಡಲಾಗುತ್ತಿದೆ. ನಮ್ಮ ಸಮಾಜದ ಎಲ್ಲ ಕಾರ್ಯಗಳಿಗೆ ಅನೇಕರು ಸಹಕಾರ ನೀಡಿದ್ದಾರೆ ಎಂದರು.
ನೆಲ್ಲೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ಎನ್.ಪಾಟೀಲ ಮಾತನಾಡಿದರು.
ಶಿಕ್ಷಕ ವೈ.ಎಸ್.ಗಂಗಶೆಟ್ಟಿ ಹಂಡೆಹನುಮಪ್ಪನಾಯಕ ಕುರಿತು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ವೀರಸಿದ್ದ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಬಿರಾದಾರ, ಬಸವರಾಜ ಡೆಂಗಿ ಮಾತನಾಡಿದರು.
ಸಾನಿಧ್ಯವನ್ನು ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ನಾಗಭೂಷಣ ಶಾಸ್ತ್ರೀಜಿ ವಹಿಸಿದ್ದರು.
ವೇದಿಕೆಯಲ್ಲಿ ರಾಜಶೇಖರ ಮ್ಯಾಗೇರಿ, ಬಾಪುಗೌಡ ಬ್ಯಾಕೋಡ, ಪ್ರೇಮಕುಮಾರ ಮ್ಯಾಗೇರಿ, ಅವ್ವಣ್ಣಗೌಡ ಗ್ವಾತಗಿ, ಶಂಕರಗೌಡ ರಾಯಗೊಂಡ, ಸಂಗಮೇಶ ಕರಭಂಟನಾಳ, ಸಂಗನಗೌಡ ಯಂಕಂಚಿ, ಪ್ರಭುಗೌಡ ಬೆಳ್ಳಿ, ಎಂ.ಬಿ.ಪಾಟೀಲ, ನಾಗರಾಜ ತಂಗಡಗಿ, ಎಸ್.ಎಸ್.ಪಾಟೀಲ, ಹನಮಂತರಾಯಗೌಡ ಪಾಟೀಲ, ಲಲಿತಾ ಬಿರಾದಾರ, ಪೂರ್ಣಿಮಾ ಹೆಬ್ಬಾಳ, ಶಿವಣ್ಣ ಬ್ಯಾಕೋಡ, ಮಲ್ಲಿಕಾರ್ಜುನ ಹಡಪದ, ಶರಣು ಬಡಿಗೇರ, ಬಾಬು ಬಗಲಿ, ರಮೇಶ ಕಟಗೂರ,ಸಿದ್ದನಗೌಡ ಪಾಟೀಲ, ಎಸ್.ಎಸ್.ಅವರಾದಿ, ಮಡಿವಾಳಪ್ಪಗೌಡ ಬಿರಾದಾರ ಇತರರು ಇದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಆರ್.ಎಸ್.ಪಾಟೀಲ ಸ್ವಾಗತಿಸಿದರು. ದೇವೇಂದ್ರ ಗೋನಾಳ ನಿರೂಪಿಸಿದರು. ಪ್ರಭಾಕರ ಖೇಡದ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಂಡೆಹನುಮಪ್ಪನಾಯಕ ಭಾವಚಿತ್ರದ ಮೆರವಣಿಗೆ ಕುಂಭಮೇಳ, ವಿವಿಧ ವಾದ್ಯಮೇಳದೊಂದಿಗೆ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

