೮೦೦ ಮೀಟರ್ ರನ್ನಿಂಗ್ ಮಾಡಿ ಮತದಾನ ಜಾಗೃತಿ ಮೂಡಿಸಿದ ಜಿ.ಪಂ ಸಿಇಓ ರಿಶಿ ಆನಂದ
ವಿಜಯಪುರ: ಒಂದು ದೇಶದ ಶಕ್ತಿಶಾಲಿ ಸಂಪನ್ಮೂಲ ಎಂದರೆ ಅದು ಯವಶಕ್ತಿ. ದೇಶಕ್ಕೆ ಯುವಕರ ಕೊಡುಗೆ ಅತ್ಯಂತ ಮಹತ್ವದಾಗಿದೆ. ದೇಶದ ಭವಿಷ್ಯ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಯುವಕರು ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕ ಹಾಗೂ ಮುಕ್ತವಾಗಿ ಮತದಾನ ಮಾಡುವ ಮೂಲಕ ಸದೃಡ ದೇಶ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ನಗರದ ಡಾ. ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮುವಾರ ಕ್ರೀಡಾ ಇಲಾಖೆಯ ಯುವ ಕ್ರೀಡಾಪಟುಗಳೊಂದಿಗೆ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟವನ್ನು ಗೆಲ್ಲಬೇಕಾದರೆ ಹೇಗೆ ಸತತ ಪರಿಶ್ರಮ ಪಡುತ್ತೇವೆಯೋ ಹಾಗೆ ಸ್ವಚ್ಚ ಹಾಗೂ ನ್ಯಾಯಸಮ್ಮತ ಆಡಳಿತ ನಿರ್ಮಾಣವಾಗಲು ಯೋಗ್ಯ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಯುವಶಕ್ತಿ ಮುಂದಾಗಬೇಕು. ಅದಲ್ಲದೇ ತಮ್ಮ ಕುಟುಂಬ, ನೆರೆಹೊರೆಯವರಿಗೆ ಮತದಾನದ ಮಹತ್ವ ತಿಳಿಸಿ ಕಡ್ಡಾಯ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದರು.
ಮತದಾನ ಮಾಡುವ ಮೂಲಕ ನಿಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಮೊಟ್ಟಮೊದಲ ಬಾರಿಗೆ ಮತದಾನ ಮಾಡುತ್ತಿರುವ ನೀವು ಯಾವುದೇ ಭಯವಿಲ್ಲದೆ, ನಿರ್ಭೀತರಾಗಿ ಮತದಾನ ಮಾಡಿ. ನೀವಷ್ಟೇ ಅಲ್ಲದೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ನಿಮ್ಮ ಸ್ನೇಹಿತರಿಗೂ ಕೂಡ ಚುನಾವಣೆ ದಿನದಂದು ಮತದಾನ ಮಾಡಲು ಪ್ರೇರೇಪಣೆ ನೀಡಬೇಕು ಹಾಗೂ ಎಲ್ಲ ಮತದಾರರಿಗೆ ನೀವು ಮಾದರಿಯಾಗಬೇಕು ಎಂದು ಕಿವಿಮಾತುಗಳನ್ನು ಹೇಳಿದರು.
ನಂತರ ಸಿಇಓ ರವರು ಎಲ್ಲ ಕ್ರೀಡಾಪಟುಗಳೊಂದಿಗೆ ಕ್ರೀಡಾಂಗಣದಲ್ಲಿ ೮೦೦ ಮೀಟರ್ ರನ್ನಿಂಗ್ ಮಾಡುವ ಮೂಲಕ ಎಲ್ಲಾ ಕ್ರೀಡಾಪಟುಗಳಿಗೆ ಮಾದರಿಯಾದರು ಮತ್ತು ಕ್ರೀಡಾಪಟುಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಎಲ್ಲ ಕ್ರೀಡಾಪಟುಗಳು ಅತ್ಯಂತ ಉತ್ಸಾಹ ಮತ್ತು ಆಸಕ್ತಿಯಿಂದ ಸಿಇಓ ರವರೊಂದಿಗೆ ಬೆರೆತು ರನ್ನಿಂಗ್ ನಲ್ಲಿ ಭಾಗವಹಿಸಿದರು. ಇದೇ ರೀತಿ ಎಲ್ಲರೂ ಅತ್ಯಂತ ಉತ್ಸಾಹದಿಂದ ಹಾಗೂ ಸಂತಸದಿಂದ ಮತದಾನದ ದಿನದಂದು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಬಳಿಕ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್. ಮುಂಡರಗಿ ಮಾತನಾಡಿದರು.
ಈ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ರಾಜೇಶ್ ಪವಾರ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಕ್ಷಿ ಹಿರೇಮಠ ರವರು ಮತದಾನದ ಜಾಗೃತಿ ಕುರಿತ ಗೀತೆಗಳನ್ನು ಹಾಡುವ ಮೂಲಕ ಎಲ್ಲ ಕ್ರೀಡಾಪಟುಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಬಿ. ಎಸ್. ಮೂಗನೂರಮಠ, ವಿಜಯಪುರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್. ಜಿ. ಲೋಣಿ, ಜಿಲ್ಲಾ ಎನ್.ಎಸ್.ಎಸ್ ಘಟಕದ ನೊಡೆಲ್ ಅಧಿಕಾರಿಗಳಾದ ಪ್ರಕಾಶ ರಾಠೋಡ, ಜಿಲ್ಲ ಸ್ವೀಪ್ ಸಮಿತಿಯ ರಾಯಭಾರಿ ಸಹನಾ ಕುಡಿಗನೂರ, ಜಿಲ್ಲೆಯ ಅಥ್ಲೆಟಿಕ್ ಕ್ರೀಡಾಕೂಟಗಳ ಕೋಚ್ ಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿ ಮತು ಸಿಬ್ಬಂದಿಯವರು, ಕ್ರೀಡಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

