ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ |ಜೀವನಜಾಗೃತಿ ಸಂಗೋಷ್ಠಿ
ಕಲಕೇರಿ: ಮನಷ್ಯನ ಜೀವನ ಭಗವಂತನ ಬಳುವಳಿಯಾಗಿದ್ದು, ಬದುಕಿನುದ್ದಕ್ಕೂ ಸತ್ಯ ನ್ಯಾಯ ನೀತಿಯ ಪರಿಪಾಲನೆಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಜಾಗೃತಿಗೊಳಿಸಿಕೊಳ್ಳುವುದರೊಂದಿಗೆ ಸದಾ ಭಗವಂತನ ಚಿಂತನದಲ್ಲಿ ತೊಡಗಿಕೊಳ್ಳಬೇಕು, ನಮ್ಮ ಜೀವನವನ್ನು ಸುಂದರ ಮತ್ತು ಸಾರ್ಥಕಗೊಳಿಸಿಕೊಳ್ಳುವುದೇ ಜೀವನದ ಪರಮ ಗುರಿಯಾಗಿರಬೇಕು ಎಂದು ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಗ್ರಾಮದ ಶ್ರೀ ಜಗದಾರಾಧ್ಯ ಜಯಶಾಂತಲಿಗೇಶ್ವರ ಮಹಾಸಂಸ್ಥಾನಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಜೀವನಜಾಗೃತಿ ಸಂಗೋಷ್ಠಿ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಹುಟ್ಟಿದಾಗ ಉಸಿರು ಇರುತ್ತದೆ ಆದರೆ ಹೆಸರು ಇರುವುದಿಲ್ಲ, ನಾವು ಸತ್ತಾಗ ಹೆಸರು ಇರುತ್ತದೆ ಆದರೆ ಉಸಿರು ಇರುವುದಿಲ್ಲ. ಈ ಉಸಿರು ಮತ್ತು ಹೆಸರಿನ ಮಧ್ಯದ ನಮ್ಮ ಅಲ್ಪ ಜೀವನದಲ್ಲಿ ನಮ್ಮ ಸುಂದರ ಕಾರ್ಯಗಳ ಮೂಲಕ ಶ್ರೇಷ್ಠ ಬದುಕು ನಮ್ಮದಾಗಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಓಂಕಾರ ಧ್ವಜಾರೋಹಣ ನೆರವೇರಿಸಿದ ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮತ್ತು ಜೀವನಜಾಗೃತಿ ಸಂಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡೆಕಲ್ಲ ದುರುದುಂಡೇಶ್ವರ ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಪ್ರಾಣಿ ಪಕ್ಷಿಗಳು ತನ್ನತನವನ್ನು ಮರೆತಿಲ್ಲ, ಆದರೆ ಮನುಷ್ಯ ಮಾತ್ರ ನಾ ಎಂಬ ಅಹಂಕಾರ, ಸ್ವಾರ್ಥ ತುಂಬಿಕೊಂಡು ಮನುಷ್ಯತ್ವವನ್ನು ಮರೆತಿದ್ದರಿಂದ ಆತನಲ್ಲಿರುವ ಅರಿಷಡ್‌ವರ್ಗಗಳ ವಿಕೃತ ಕಾರ್ಯಗಳಿಂದ ಆತನ ಜೀವನವನ್ನು ಹಾಳು ಮಾಡುತ್ತಿವೆ. ಹಾಗಾಗಿ ತನ್ನನ್ನು ತಾನರಿವುದೇ ಜೀವನದ ಉದ್ದೇಶವಾಗಿಸಿಕೊಂಡು, ಸಂಪತ್ತು ಅಧಿಕಾರ ಶಾಶ್ವತವಲ್ಲ ಎನ್ನುವ ಅರಿವು ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಸತ್ಯ ಧರ್ಮದ ನೆಲೆಗಟ್ಟಿನಲ್ಲಿ ಚಿಕಿತ್ಸಕ ಬುದ್ಧಿಯ ಮೂಲಕ ಜೀವನವನ್ನು ಅರಿತು ನಡೆದಾಗ ಜೀವನ ಸುಂದರವಾಗುತ್ತದೆ, ಅಲ್ಲದೇ ಜೀವಾತ್ಮ ಪರಮಾತ್ಮನಾಗಲು ಸಾಧ್ಯ ಎಂದು ಹೇಳಿದರು.
ಬೆಳಿಗ್ಗೆ ಶ್ರೀ ಜಗದಾರಾಧ್ಯ ಜಯಶಾಂತಲಿಗೇಶ್ವರ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಂತರ ಗಣಾರಾಧನೆ ಹಾಗೂ ಅನ್ನಸಂತರ್ಪಣೆ ನಡೆಯಿತು, ಗದ್ದುಗೆಮಠದ ಮಡಿವಾಳೇಶ್ವರ ಶಿವಾಚಾರ್ಯರು, ಜಾಲಹಳ್ಳಿಮಠದ ರವಿಕಿರಣ ದೇವರು, ಚಬನೂರ ಹಿರೇಮಠದ ರಾಮಲಿಂಗಯ್ಯ ಮಹಾಸ್ವಾಮಿಗಳು ಸೇರಿದಂತೆ ಇತರರು ಇದ್ದರು.

