ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಲ್ಲಿಕಾರ್ಜುನ ಲೋಣಿ ಭವಿಷ್ಯ
ವಿಜಯಪುರ: ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಗೆಲ್ಲಲಿದ್ದಾರೆ ಎಂದು ಮಲ್ಲಿಕಾರ‍್ಜುನ ಲೋಣಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.
ಮುಖಂಡರು, ಕಾರ‍್ಯಕರ‍್ತರು ಈ ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ತಮ್ಮ ಮೇಲೆ ವಿಶ್ವಾಸವಿಟ್ಟು, ಪಕ್ಷ ಈ ಮಹತ್ತರ ಜವಾಬ್ದಾರಿ ನೀಡಿದೆ. ಇದಕ್ಕೆ ಬದ್ಧವಾಗಿ ಶ್ರಮವಹಿಸಿ ಸಂಘಟನೆಯಲ್ಲಿ ತೊಡಗುವೆ. ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಡೆಸಿ, ಜನಾನುರಾಗಿಯಾಗಿದೆ. ಇದನ್ನು ಜನರಿಗೆ ನಮ್ಮ ಕಾರ‍್ಯಕರ‍್ತರು ತಿಳಿಸಬೇಕು ಎಂದರು.
ನಮ್ಮ ಪಕ್ಷದ ಲೋಕಸಭೆ ಅಭ್ಯರ್ಥಿ ಆಲಗೂರರು ಪ್ರಬುದ್ಧರಾಗಿದ್ದಾರೆ. ಇಷ್ಟು ದಿನ ಅವಿರತ ಶ್ರಮದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಅವರಂತೆ ತಾವು ಕೂಡ ಪಕ್ಷದ ಏಳ್ಗೆಗೆ ಶ್ರಮಿಸುವೆ ಎಂದು ಹೇಳಿದ ಲೋಣಿ, ಆಲಗೂರರ ಗೆಲುವು ನೂರಕ್ಕೆ ನೂರು ನಿಶ್ಚಿತವಾಗಿದೆ. ನಾವೆಲ್ಲ ಕಷ್ಟಪಟ್ಟರೆ ಎರಡು ಲಕ್ಷ ಮತಗಳಿಂದ ಅವರನ್ನು ಗೆಲ್ಲಿಸಬಹುದು ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಲೋಣಿಯವರ ನೇಮಕದಿಂದ ಪಕ್ಷ ಸಂಘಟನೆಗೆ ಇನ್ನಷ್ಟು ಶಕ್ತಿ ಬರಲಿದೆ. ಈ ಚುನಾವಣೆಯನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಬಿಜೆಪಿಯ ಸುಳ್ಳುಗಳನ್ನು ಜನರಿಗೆ ಮನದಟ್ಟು ಮಾಡಿಸಬೇಕು ಎಂದರು.
ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಮೂಲಕ ಜನಸಾಮಾನ್ಯರ ಮನ ಮುಟ್ಟಿದೆ, ಅವರ ಹೃದಯ ಗೆದ್ದಿದೆ. ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಪಕ್ಷ ಕೇಂದ್ರದಲ್ಲೂ ಅಧಿಕಾರ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಮುಖಂಡರಾದ ಎಂ.ಆರ್. ಪಾಟೀಲ, ಮುಖಂಡರಾದ ಹಮೀದ್ ಮುಶ್ರೀಫ್, ಗಂಗಾಧರ ಸಂಬಣ್ಣಿ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಚಂದ್ರಕಾಂತ ಶೆಟ್ಟಿ, ಮಹ್ಮದರಫೀಕ ಟಪಾಲ, ಆಜಾದ ಪಟೇಲ, ಮಹಾದೇವಿ ಗೋಕಾಕ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಉಪಮೇಯರ್ ದಿನೇಶ ಹಳ್ಳಿ, ಸ್ನೇಹಾ ಕಟ್ಟಿ, ವಿದ್ಯಾವತಿ ಅಂಕಲಗಿ, ಶಬ್ಬೀರ ಜಾಗಿರದಾರ, ಸಾಹೇಬಗೌಡ ಬಿರಾದಾರ, ಸುರೇಶ ಗೊಣಸಗಿ, ವಿಜಯಕುಮಾರ ಘಾಟಗೆ, ಐ.ಎಂ. ಇಂಡಿಕರ, ವಸಂತ ಹೊನಮೊಡೆ, ಜಾಕಿರ ಮುಲ್ಲಾ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಅಷ್ಫಾಕ ಮನಗೂಳಿ, ಅಮಿತ ಚವ್ಹಾಣ, ರಮೇಶ ಗುಬ್ಬೇವಾಡ, ನಿಂಗಪ್ಪ ಸಂಗಾಪೂರ, ರಾಜೇಶ್ವರಿ ಚೋಳಕೆ, ಬಾಪುಗೌಡ ಪಾಟೀಲ, ಶಂಕರಸಿಂಗ ಹಜೇರಿ, ಸುಭಾಷ ಗುಡಿಮನಿ, ಆನಂದ ಜಾಧವ, ಮಹ್ಮದಹನೀಫ್ ಮಕಾನದಾರ, ಬ್ಲಾಕ್ ಅಧ್ಯಕ್ಷರುಗಳಾದ ಆರತಿ ಶಹಾಪೂರ, ಗುರು ತಾರನಾಳ, ಜಾವಿದ ಮೊಮಿನ, ಸಂತೋಷ ಬಾಲಗಾಂವಿ, ಶ್ರೀದೇವಿ ಉತ್ಸಲಾರ ಅನೇಕರಿದ್ದರು.

