ಕೊಲ್ಹಾರ: ಅಜ್ಞಾನದ ಕತ್ತಲೆಯಲ್ಲಿ ಮನಸ್ಸನ್ನು ಹುದುಗಿಸಿ ಎಣ್ಣೆ, ತುಪ್ಪದ ದೀಪ ಹಚ್ಚಿ ಡಾಂಭಿಕ ಭಕ್ತಿ ತೋರಿದರೆ ಆ ಭಗವಂತನ ಒಲುಮೆ ಅದೆಂದಿಗೂ ಆಗದು. ಎಣ್ಣೆ, ತುಪ್ಪದ ದೀಪಕ್ಕಿಂತ ಜ್ಞಾನದ ದೀಪ ಹೊತ್ತಿಸಿದಾಗ ಮಾತ್ರ ಮನುಷ್ಯನ ಬದುಕು ಸಾರ್ಥಕಗೊಳ್ಳುವುದೆಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಶ್ರೀಗಳು ಹೇಳಿದರು.
ಮಸೂತಿ ಗ್ರಾಮದಲ್ಲಿ ವೀರಭದ್ರೇಶ್ವರ ಮತ್ತು ಗ್ರಾಮದೇವತೆಯ ಜಾತ್ರಾ ನಿಮಿತ್ತವಾಗಿ ಮಾ.೨೮ ರಿಂದ ಆರಂಭಗೊAಡಿದ್ದ ಆಧ್ಯಾತ್ಮಕ ಪ್ರವಚನವನ್ನು ಭಾನುವಾರ ರಾತ್ರಿ ಮಂಗಲಗೊಳಿಸಿ ಅವರು ಮಾತನಾಡಿದರು.
ಅಕ್ಷರ ಕಲಿತ ಸುಶಿಕ್ಷಿತರಿಂದಲೇ ಇಂದು ಹೆಚ್ಚಿನ ಕುಕೃತ್ಯಗಳು ಸಮಾಜದಲ್ಲಿ ನಡೆಯುತ್ತಿವೆ. ಕಿಚಡಿ ಮಾಡುವ ಮುಗ್ಧ ಜನರಲ್ಲಿರುವ ಸಂಸ್ಕಾರ ಪಿಎಚ್‌ಡಿ ಕಲಿತ ವ್ಯಕ್ತಿ ಬಳಿ ಕಾಣುತ್ತಿಲ್ಲ. ಪದವಿಯೊಂದೇ ಬದುಕಿನ ಅಳತೆಗೋಲೆಂದು ತಿಳಿಯಬಾರದು. ಮಾನವೀಯ ಮೌಲ್ಯವನ್ನು ಗಾಳಿಗೆ ತೂರಿ, ಹೆತ್ತವರನ್ನು ತಿರುಗಿಯೂ ನೋಡದ ಮಕ್ಕಳು ಯಾವ ಪದವಿ, ಅದೆಷ್ಟು ಹಣ ಗಳಿಸಿದರೇನು ಫಲ.? ಎಲ್ಲವೂ ನಿರರ್ಥಕ ಎಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಆಧ್ಯಾತ್ಮ ಎಂಬುದು ಮಾರುಕಟ್ಟೆಯ ಸರಕಲ್ಲ. ಶಾಂತಚಿತ್ತರಾಗಿ ಬದುಕಿನ ಜಂಜಾಟದಿಂದ ಕೊಂಚ ಮುಕ್ತಿ ಪಡೆದು ಆಲಿಸುವ ಪ್ರವಚನ ನಿಮ್ಮ ವ್ಯಕ್ತಿತ್ವವನ್ನೇ ಬದಲಾಯಿಸುವ ದಿವ್ಯ ಶಕ್ತಿ ಈ ಆಧ್ಯಾತ್ಮಕ್ಕಿದೆ. ಆದರೆ ಅದು ಅಷ್ಟೊಂದು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ ಎಂದರು.
ಬೀಳಗಿಯ ಜಾನಪದ ಗಾರುಡಿಗ ಸಿದ್ದಪ್ಪ ಬಿದರಿ ಮಾತನಾಡಿ, ನವ ನಾಗರಿಕತೆಯ ನೆಪದಲ್ಲಿ ಸಂಸ್ಕಾರದಿಂದ ದೂರಾಗುತ್ತಿರುವ ಜನತೆಗೆ ಪ್ರವಚನ ಒಂದು ದಿವ್ಯ ಶಕ್ತಿಯಾಗಿದೆ ಎಂದರು. ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಚನಗೊಂಡ, ಪಿಕೆಪಿಎಸ್ ಅಧ್ಯಕ್ಷ ಕೆ.ವಿ. ಪಾಟೀಲ ಪ್ರಮುಖರಾದ ಎಸ್.ಎಸ್. ಗರಸಂಗಿ, ವಿಶ್ವನಾಥ ಹಿರೇಮಠ, ಶ್ರೀಶೈಲ ಹಂಗರಗಿ, ರಾಜು ಬಿಷ್ಟಗೊಂಡ, ಶ್ರೀಶೈಲ ಚನಗೊಂಡ, ಸಂತೋಷ ಬೀಳಗಿ, ಎಂ.ಸಿ. ಪಾಟೀಲ, ಶಂಕ್ರಪ್ಪ ಹಂಗರಗಿ, ನವೀನ ಸಾಲಳ್ಳಿ ಮತ್ತಿತರರು ಇದ್ದರು. ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

