ಬಸವನಬಾಗೇವಾಡಿ: ರಾಜ್ಯಕ್ಕೆ ಒಳ್ಳೆಯದು ಆಗಬೇಕು, ನೀರಾವರಿ ಯೋಜನೆ ಜಾರಿಯಾಗಬೇಕೆಂಬ ಸದುದ್ದೇಶದೊಂದಿಗೆ ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ವಿನಃ ವಿಲೀನಗೊಳಿಸಿಲ್ಲ. ಮೇ. ೭ ರಂದು ನಡೆಯಲಿರುವ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರನ್ನು ಬಹುಮತದೊಂದಿಗೆ ನಮ್ಮ ಕಾಯಕರ್ತರು ಆಯ್ಕೆ ಮಾಡಲು ಕಾರ್ಯತತ್ಪರಾಗಬೇಕೆಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಮಾದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಪಕ್ಷದ ಸಿದ್ದಾಂತ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಪಕ್ಷವು ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಈ ವಿಷಯ ತಿಳಿಸುವ ಉದ್ದೇಶದಿಂದ ಈ ಪೂರ್ವಭಾವಿ ಸಭೆ ಕರೆಯಲಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಸಭೆ ಆಯೋಜನೆ ಮಾಡಲಾಗುತ್ತದೆ ಎಂದರು.
ನಾನು ಎಲ್ಲ ಸಮಾಜ ಬಾಂಧವರೊಂದಿಗೆ ಭಾವನಾತ್ಮಕವಾದ ಸಂಬಂಧ ಹೊಂದಿದ್ದೇನೆ. ಕಳೆದ ೧೫ ವರ್ಷಗಳಿಂದ ದೇವರಹಿಪ್ಪರಗಿ ಮತಕ್ಷೇತ್ರದ ಜನರು ನನ್ನೊಂದಿಗೆ ಇದ್ದಾರೆ. ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಮತಕ್ಷೇತ್ರದ ಜನರ ಆಶೀರ್ವಾದದೊಂದಿಗೆ ಶಾಸಕನಾಗಿರುವೆ. ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಯಾವ ಸಮಾಜಕ್ಕೂ ಅನ್ಯಾಯ ಮಾಡದೇ ಕ್ಷೇತ್ರದ ಅಭಿವೃದ್ಧಿ ಸದಾ ಬದ್ಧ. ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ನಾನು ಅಲ್ಪಸಂಖ್ಯಾತರ ಮತಗಳನ್ನು ಪಡೆದುಕೊಂಡು ಈಗ ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡರೊಬ್ಬರೂ ಹೇಳಿಕೆ ನೀಡಿರುವುದು ಸರಿಯಲ್ಲ. ನಾನು ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಸಮಾಜ ಬಾಂಧವರೊಂದಿಗೆ ಉತ್ತಮವಾದ ಸಂಬಂಧ ಇಟ್ಟುಕೊಂಡಿದ್ದೇನೆ. ಎಲ್ಲ ಸಮಾಜ ಬಾಂಧವರ ಮತಗಳನ್ನು ಪಡೆದುಕೊಂಡು ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂಬುವದನ್ನು ಅವರು ಅರಿತುಕೊಳ್ಳಬೇಕೆಂದರು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲರನ್ನು ಸಮಾಧಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶಾಸಕ ಅವರ ಹೆಸರು ಕೆಡಿಸಲು ವಿರೋಧ ಪಕ್ಷದವರು ಏನು ಹೇಳಿದರು ಅದನ್ನು ಗಮನಿಸಿದೇ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದ ಅವರು, ಬಿಜೆಪಿ ಪಕ್ಷವು ಉತ್ತರಕರ್ನಾಟಕದ ಭಾಗದಲ್ಲಿ ಒಂದು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷಕ್ಕೆ ಒಂದು ಸ್ಥಾನ ನೀಡಬೇಕಾಗಿತ್ತು. ಇದರ ಬಗ್ಗೆ ನನಗೆ ಅಸಮಾಧಾನವಿದೆ ಎಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಸುನೀತಾ ಚವ್ಹಾಣ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಕೊನೆ ಗಳಿಗೆಯಲ್ಲಿ ಇದು ಕೈ ತಪ್ಪಿದೆ. ಈ ಕುರಿತು ಎಲ್ಲರಿಗೂ ನೋವಿದೆ. ಪಕ್ಷದ ಸಿದ್ದಾಂತಕ್ಕೆ ಎಲ್ಲರೂ ತಲೆಬಾಗಲೇಬೇಕು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸುನೀತಾ ಚವ್ಹಾಣ ಅವರು ಸ್ಪರ್ಧೆ ಮಾಡಿದ್ದರು. ಆಗ ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಸುನೀತಾ ಚವ್ಹಾಣ ಅವರು ಪರಾಭವಗೊಳ್ಳಬೇಕಾಯಿತು. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಿಯಾಜ ಎಲಿಗಾರ ಮಾತನಾಡಿ, ಬಿಜೆಪಿ ಪಕ್ಷವು ಇಡೀ ದೇಶದಲ್ಲಿ ಎಲ್ಲಿಯೂ ಒಂದು ಸ್ಥಾನವನ್ನು ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರು ಟಿಕೆಟ್ ನೀಡಿಲ್ಲ. ಇದನ್ನು ಮುಸ್ಲಿಂ ಬಾಂಧವರು ಅರಿತುಕೊಳ್ಳಬೇಕಿದೆ. ಜೆಡಿಎಸ್ ಪಕ್ಷವು ಯಾವಾಗಲು ಅಲ್ಪಸಂಖ್ಯಾತರ ಪರವಿದೆ ಎಂದರು.
ಮಡುಸಾವುಕಾರ ಬಿರಾದಾರ, ಬಸನಗೌಡ ಬಿರಾದಾರ, ಬಾಬು ನದಾಫ, ಎ.ಡಿ.ಮುಲ್ಲಾ ಮಾತನಾಡಿದರು. ವೇದಿಕೆಯಲ್ಲಿ ಸಚೀನಗೌಡ ಪಾಟೀಲ, ವಿಶ್ವನಾಥ ನಾಡಗೌಡ, ಗುರುನಗೌಡ ಪಾಟೀಲ,ಅನಿಲ ಪಾಟೀಲ, ಪಾವೆಡಪ್ಪ ಹವಾಲ್ದಾರ, ಕೇಶು ರಾಠೋಡ, ಸಂಗಮೇಶ ಹಳ್ಳೂರ, ಕಾಶೀಂ ನಾಯ್ಕೋಡಿ ಇತರರು ಇದ್ದರು.
ಸಾಯಬಣ್ಣ ಬಾಗೇವಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಸವರಾಜ ಬಾಗೇವಾಡಿ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಿಲ್ಲ, ಮೈತ್ರಿ ಮಾತ್ರ :ಶಾಸಕ ರಾಜುಗೌಡ
Related Posts
Add A Comment

