ಆಲಮಟ್ಟಿ: ಹಿಂದೂಗಳ ಹೊಸ ವರ್ಷ ಯುಗಾದಿ. ಹೀಗಾಗಿ ಯುಗಾದಿ ಅಮವಾಸ್ಯೆಯ ದಿನ ದೇವರುಗಳ ಪಲ್ಲಕ್ಕಿಗಳನ್ನು ಕೃಷ್ಣೆಯಲ್ಲಿ ಸ್ನಾನ ಮಾಡಿಸುವುದು ನೂರಾರು ವರ್ಷಗಳ ಸಂಪ್ರದಾಯ.
ಹೀಗಾಗಿ ಸೋಮವಾರ, ಬೆಳಿಗ್ಗೆಯಿಂದಲೇ ಅವಳಿ ಜಿಲ್ಲೆಯ ನಾನಾ ಕಡೆಯಿಂದ ನೂರಾರು ದೇವ, ದೇವತೆಗಳ ಪಲ್ಲಕ್ಕಿಗಳು ಆಲಮಟ್ಟಿಯತ್ತ ಬಂದವು.
ಕೆಲವರು ನಡೆದುಕೊಂಡೇ ಪಲ್ಲಕ್ಕಿಯನ್ನು ಹೊತ್ತು ತಂದರೆ, ಇನ್ನೂ ಕೆಲವರು ಟ್ಯಾಕ್ಟರ್, ಎತ್ತಿನ ಬಂಡಿ, ನಾನಾ ವಾಹನಗಳಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುತ್ತಿರುವುದು ಕಂಡು ಬಂತು.
ನೂರಾರು ಪಲ್ಲಕ್ಕಿಗಳ ಸಮಾಗಮವೇ ಆಲಮಟ್ಟಿಯ ಕೃಷ್ಣಾ ತೀರದಲ್ಲಿ ಜರುಗಿತು.
ನದಿಯ ಎರಡೂ ದಂಡೆಯ ಮೇಲೆ, ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ, ಕಳಸದ ಮೆರವಣಿಗೆ, ಡೊಳ್ಳು ಕುಣಿತ, ಶಂಖ ಊದುವುದು, ಹಲಗೆ ವಾದನ ಮಾರ್ದನಿಸಿ, ಭಕ್ತಿಯ ಭಾವುಕತೆಯಲ್ಲಿ ತೇಲಿಸಿದವು.
ವಿವಿಧ ಕಡೆಗಳಿಂದ ಬಂದ ಭಕ್ತರು ತಾವು ಮೊದಲ ನದಿಯಲ್ಲಿ ಮಿಂದು, ವ ಬಳಿಕ ಗಂಗಾ ಪೂಜೆ ನೆರವೇರಿಸಿದರು., ಮಡಿಯಲ್ಲಿಯೇ ಪಲ್ಲಕ್ಕಿ, ದೇವರ ಪರಿಕರಗಳು, ಉತ್ಸವ ಮೂರ್ತಿ, ಮುಖವಾಡಗಳು, ಆಭರಣಗಳನ್ನು ಶುಚಿಗೊಳಿಸಿ, ನಂತರ ಅಲಂಕರಿಸಿ ಪೂಜಿಸಿದರು. ಕೆಲವರು ಕಂಬಳಿ ಹಾಸಿ ಪಲ್ಲಕ್ಕಿಯನ್ನಿಟ್ಟು ಪೂಜೆ ಸಲ್ಲಿಸಿದರು.
ದೇವರು:
ಹನುಮಂತ, ಕರಿದೇವರು, ಪರಮಾನಂದ, ಅಂಬಾಭವಾನಿ, ರೇಣಕಾ ದೇವಿ, ಲಕ್ಷ್ಮಿ, ಶಿವ, ಪಾರ್ವತಿ, ದುರ್ಗವ್ವ, ದ್ಯಾಮವ್ವ, ಶೆಟಗೆವ್ವಾ, ಅಮೋಘ ಸಿದ್ಧ, ಬನಶಂಕರಿ, ಚಂದ್ರಮ್ಮಾ, ಬಸವೇಶ್ವರ, ಮರಗಮ್ಮ, ಮಾಳಿಂಗರಾಯ, ಬೀರಲಿಂಗೇಶ್ವರ, ಮಡಿವಾಳಪ್ಪ, ಹುಚ್ಚಯ್ಯಸ್ವಾಮಿ, ವೆಂಕಟಪ್ಪ, ವೀರೇಶ್ವರ, ಮಲ್ಲಯ್ಯ.. ಹೀಗೆ ಅನೇಕ ದೇವರುಗಳನ್ನು ಆಲಮಟ್ಟಿಗೆ ಕರೆತಂದು ಸ್ನಾನ ಮಾಡಿಸಿದರು.
ನದಿ ತೀರದಲ್ಲಿಯೇ ಕಲ್ಲುಗಳನ್ನಿಟ್ಟು ಒಲೆ ಹೂಡಿ ಹೋಳಿಗೆ ಸೇರಿ ನಾನಾ ಸಿಹಿ ಪದಾರ್ಥ ತಯಾರಿಸಿ ನೇವೇದ್ಯೆ ತೋರಿಸಿ, ಪ್ರಸಾದ ಸ್ವೀಕರಿಸುವ ದೃಶ್ಯವೂ ಕಂಡು ಬಂತು. ಮಧ್ಯಾಹ್ನ ಪ್ರಖರ ಬಿಸಿಲಿನ ಮಧ್ಯೆಯೂ ಪಲ್ಲಕ್ಕಿಗಳ ದರ್ಶನ ರಾರಾಜಿಸುತ್ತಿತ್ತು. ನಂತರ ಬಹುತೇಕ ಪಲ್ಲಕ್ಕಿಗಳನ್ನು ಕೃಷ್ಣಾ ತೀರದ ಚಂದ್ರಮ್ಮಾ ದೇವಸ್ಥಾನದ ಆವರಣದೊಳಗೆ ಇಟ್ಟು ಅಲ್ಲಿಯೂ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
Subscribe to Updates
Get the latest creative news from FooBar about art, design and business.
Related Posts
Add A Comment

