ಶೇ.೧೦೦ ಮತದಾನದ ಗುರಿ :ಜಿಪಂ ಸಿಇಓ ರಿಶಿ ಆನಂದ
ವಿಜಯಪುರ: ಜಿಲ್ಲೆಯಲ್ಲಿ ಶೇ.೧೦೦ರಷ್ಟು ಮತದಾನ ಚಲಾಯಿಸುವ ಗುರಿಯುನ್ನು ಹೊಂದಲಾಗಿದೆ. ಮತದಾನ ಮಾಡುವಂತೆ ಜಾಗೃತಿ ಮೂಡಿಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಸಮನ್ವಯದಿಂದ ಸಹಕರಿಸಿ ಗುರಿ ತಲುಪುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.
ಸೋಮುವಾರ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಚುನವಣೆ-೨೦೨೪ರ ಹಿನ್ನೆಲೆಯಲ್ಲಿ ಮತದಾನದ ಜಾಗೃತಿ ಕುರಿತು ಭಿತ್ತಿಪತ್ರಗಳು, ಬ್ಯಾನರ್ ಗಳು, ಪೋಸ್ಟರ್ ಗಳು, ಸರ್ಕಾರಿ ಕಛೇರಿಗಳಲ್ಲಿ ರವಾನೆಯಾಗುವ ಪತ್ರಗಳ ಮೇಲೆ ಮುದ್ರಿಸಲು ಶೀಲುಗಳು ಹಾಗೂ ಇತರೆ ಸಾಮಗ್ರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಕರ್ತವ್ಯವನ್ನು ನಿಭಾಯಿಸೋಣ. ಹಾಗೆಯೇ ಪ್ರಸ್ತುತ ವರ್ಷ ಲೋಕಸಭಾ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷವಾಗಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಇದೇ ವೇಳೆ ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿಗಳಾದ ಸಿ. ಆರ್ ಮುಂಡರಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಜಿ.ಪಂ ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು “ಚುನಾವಣಾ ಪರ್ವ ದೇಶದ ಗರ್ವ”, “ಮತದಾನ ನಮ್ಮೆಲ್ಲರ ಹಕ್ಕು”, “ಮತದಾನ ಮಾಡಿದವನೇ ಮಹಾಶೂರ”, “ಮಾಡಿ ಮಾಡಿ ಮೇ ೭ರಂದು ಮತದಾನ ಮಾಡಿ”, “ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿಗಳಾದ ಬಿ. ಎಸ್.ಮೂಗನೂರಮಠ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

