ಅಫಜಲಪುರ: ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ನೀರನ್ನು ಬ್ಯಾರೇಜ್‌ನ ಕೆಳಭಾಗಕ್ಕೆ ಹರಿಸಬೇಕೆಂದು ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಸೊನ್ನ ಬ್ಯಾರೇಜ್ ನಲ್ಲಿ ತಕ್ಕಮಟ್ಟಿಗೆ ನೀರು ಇದೆ, ಅಲ್ಲದೇ ನಾರಾಯಣಪುರ ಜಲಾಶಯದಿಂದ ನೀರು ಹರಿಸಲಾಗಿದೆ. ಹೀಗಿದ್ದರೂ ಕೂಡ ನದಿ ಪಾತ್ರದ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಜನ ಜಾನುವಾರುಗಳಿಗೆ ನೀರು ಬೇಕು. ಇಂತಹ ಭೀಕರ ಬರಗಾಲದ ಸಮಯದಲ್ಲಿ ಜನಸಾಮಾನ್ಯರು ಕುಡಿಯುವ ನೀರು ಬೇಕೆಂದು ೧೯ ದಿನಗಳಿಂದ ಗುಡ್ಡೇವಾಡಿ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಯಾರೊಬ್ಬರೂ ಅವರ ಕಷ್ಟ ಕೇಳುತ್ತಿಲ್ಲ ಕೂಡಲೇ ಅಧಿಕಾರದಲ್ಲಿದ್ದವರು ಜನರ ಸಮಸ್ಯೆಗೆ ಸ್ಪಂದಿಸಿ ನೀರು ಹರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಹೋರಾಟಗಾರ ಸಿದ್ದರಾಮ ದಣ್ಣೂರ, ಅಶೋಕ ಹೂಗಾರ ಮಾತನಾಡುತ್ತಾ ನೀರಿಲ್ಲದೆ ಖಾಲಿಯಾಗಿರುವ ಭೀಮಾ ನದಿಯಲ್ಲಿ ನಾವು ಕಳೆದ ೧೯ ದಿನಗಳಿಂದ ನೀರಿಗಾಗಿ ಧರಣಿ ಕುಳಿತಿದ್ದೇವೆ. ಜವಾಬ್ದಾರಿ ಇರುವ ಶಾಸಕರು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಕೇಳುವ ಸೌಜನ್ಯತೆ ತೋರಿಸಿಲ್ಲ. ನಾವು ದೂರವಾಣಿ ಕರೆ ಮಾಡಿದರೆ ಸೌಜನ್ಯಕ್ಕೆ ಕರೆ ಸ್ವಿಕರಿಸಿ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಈಗ ನಮಗೆ ಭೀಮಾ ನದಿಗೆ ನೀರು ಹರಿಸಬೇಕೆನ್ನುವುದು ಪ್ರಮುಖ ಒತ್ತಾಯವಾಗಿದೆ. ಭೀಮಾ ನದಿಗೆ ನಾರಾಯಣಪೂರ ಜಲಾಶಯದಿಂದ ನೀರುಹರಿಸಲಾಗಿದೆ. ಹೀಗಾಗಿ ಸೊನ್ನ ಬ್ಯಾರೇಜ್‌ನಿಂದ ಕೆಳಭಾಗದ ದೇವಲ ಗಾಣಗಾಪೂರದ ವರೆಗೆ ನೀರು ಹರಿಸಬೇಕು. ಅಲ್ಲಿಯತನಕ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ೧೯ ದಿನಗಳ ಕಾಲ ನದಿಯಲ್ಲಿ ಧರಣಿ ಕುಳಿತರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಕಷ್ಟ ಕೇಳಲು ಬಂದಿಲ್ಲ ಹೀಗಾಗಿ ನಾವೇ ಪಟ್ಟಣದಲ್ಲಿ ರಸ್ತಾ ರೋಖೋ ಮಾಡಿ ಪ್ರತಿಭಟನೆ ಮಾಡಲು ಬಂದಿದ್ದೇವೆ. ಈಗಲಾದರೂ ಶಾಸಕರು, ಅಧಿಕಾರಿಗಳು ಎಚ್ಚೆತ್ತು ನೀರು ಹರಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಚಾಂದಕವಟೆ ಮಾತನಾಡುತ್ತಾ ರೈತರು, ಜನಸಾಮಾನ್ಯರು, ಮಹಿಳೆಯರು ನದಿಯಲ್ಲಿ ೧೯ ದಿನ ಧರಣಿ ಕುಳಿತಿದ್ದಾರೆ, ಪಟ್ಟಣಕ್ಕೆ ಬಂದು ರಸ್ತೆ ರೋಖೋ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಹೋರಾಟ ಮಾಡಿಯೇ ಸೌಲಭ್ಯ ಪಡೆಯಬೇಕೆ? ಜವಾಬ್ದಾರಿ ಇರುವವರ ಕರ್ತವ್ಯವಾದರೂ ಏನು? ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದಿದ್ದರೆ ಜನ ಚುನಾವಣೆಗಳನ್ನು ಬಹಿಷ್ಕಾರ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಹೀಗಾಗಿ ಜಿಲ್ಲಾಡಳಿತ, ತಾಲೂಕು ಆಡಳಿತದವರು ಸಭೆ ನಡೆಸಿ ಬ್ಯಾರೇಜ್ ಕೆಳ ಭಾಗದವರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡುತ್ತಾ, ಗುಡ್ಡೆವಾಡಿ ಗ್ರಾಮದಲ್ಲಿ ನೀರಿಗಾಗಿ ಧರಣಿ ಕುಳಿತಿರುವ ಕುರಿತು ನಮಗೆ ಮಾಹಿತಿ ಇದೆ. ಇದನ್ನು ನಾನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಪ್ರತಿಭಟನಾ ಕಾರರು ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಯಾರು ಬೇಡ ಎನ್ನುವುದಿಲ್ಲ ಆದರೆ ಅಕ್ರಮ ಮರಳು ಮಾಫಿಯಾ ನಡೆದಿದೆ, ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಆಧಾರ ರಹಿತ ಆರೋಪ ಮಾಡಬೇಡಿ. ಸೊನ್ನ ಬ್ಯಾರೇಜ್‌ಗೆ ನೀರು ಬಂದಿದೆ ಇನ್ನೂ ಆರು ದಿನಗಳ ಕಾಲ ನೀರು ಹರಿದು ಬರಲಿದೆ. ಅದಾದ ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಆರ್‌ಸಿ ಅವರ ಗಮನಕ್ಕೆ ತಂದು ಅವರು ಸಭೆ ನಡೆಸಿ ನಂತರ ನೀರು ಬಿಡಬೇಕಾ ಬೇಡವಾ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭೋಜಪ್ಪ ಕೊಳ್ಳೂರ, ಲಕ್ಷ್ಮಿಕಾಂತ ಕುಮಸಗಿ, ಸಿದ್ದಣ್ಣ ಚಿಕ್ಕವಲಗಿ, ರಾಜು ಬಡದಾಳ, ಯಲ್ಲಾಲಿಂಗ ನೆಲೋಗಿ, ಶರಣಪ್ಪ ಮ್ಯಾಕೇರಿ, ದತ್ತುಗೌಡ ಪಾಟೀಲ, ರುಕ್ಮೂದ್ದಿನ ಮುಲ್ಲಾಸಾಬ, ಗೌಡಪ್ಪಗೌಡ ಪಾಟೀಲ, ಭಾಗಪ್ಪ ಕೊಳ್ಳೂರ, ಸಿದ್ದಪ್ಪ ಗುಡೆದ, ಶ್ರೀಶೈಲಸಾಹುಕಾರ ಅಮ್ಮಣ್ಣಿ, ಶಿವಕಾಂತ ಸಿಂಗೆ, ಯಶ್ವಂತರಾಯಗೌಡ ಹರನಾಳ, ಲಕ್ಷ್ಮಣಗೌಡ ಮೋನಟಗಿ, ಅಣ್ಣಾರಾಯಗೌಡ ಹುಲ್ಲೂರ, ಶಿವಶಂಕರ ಕುಮಸಗಿ ಸೇರಿದಂತೆ ಗುಡ್ಡೆವಾಡಿ, ಕಲ್ಲೂರ, ಘತ್ತರಗಾ ಸೇರಿದಂತೆ ಅನೇಕ ಗ್ರಾಮಗಳ ಮಹಿಳೆಯರು ಬಿಂದಿಗೆ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
ಸೊನ್ನ ಬ್ಯಾರೆಜ್ ಕೆಳಭಾಗಕ್ಕೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆ
Related Posts
Add A Comment

