ವಿಜಯಪುರ: ಯಾವುದೇ ಕೊಳವೆಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳಿಯ ಆಡಳಿತದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ವಿ ಸಿ ಹಾಲ್ ನಲ್ಲಿ ಶುಕ್ರವಾವಾರ ಕಂದಾಯ, ಶಾಲಾ ಶಿಕ್ಷಣ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಇಂಡಿ ತಾಲೂಕಿನ ಲಚ್ಯಾಣ ತೋಟದ ಕೊಳವೆಬಾವಿಯಲ್ಲಿ ಸಿಲುಕಿದ್ದ ಮಗುವಿನ ಪ್ರಕರಣ ಭವಿಷ್ಯದಲ್ಲಿ ಮರುಕಳಿಸದಿರಲು ಗ್ರಾಮ, ಪಟ್ಟಣ ನಗರ ಯಾವುದೇ ಪ್ರದೇಶದಲ್ಲಾದರೂ ಕೊಳವೆಬಾವಿ ಕೊರೆಯವ ಮುನ್ನ ರೈತರು, ಸಾರ್ವಜನಿಕರಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಮತ್ತು ಸಫಲ/ವಿಫಲವಾದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವ ವ್ಯವಸ್ಥೆಯಾಗಬೇಕು ಎಂಬುದರ ಕುರಿತು ಸ್ಥಳಿಯ ಆಡಳಿತಾಧಿಕಾರಿಗಳು ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಈಗಾಗಲೇ ಕೊಳವೆಬಾವಿಗಳ ಸುರಕ್ಷತೆ ಕುರಿತಂತೆ ಸರಕಾರದ ಸುತ್ತೋಲೆ ಇದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಗ್ರಾಮ ಪಂಚಾಯತ್ ಅಧಿಕಾರಿ, ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಸರಕಾರದ ಈ ಸುತ್ತೋಲೆಯ ನಿರ್ದೇಶನಗಳನ್ನು ಪಾಲಿಸದೇ ಕರ್ತವ್ಯಲೋಪವೆಸಗಿ ಯಾವುದೇ ಅವಘಡ ಜರುಗಿದಲ್ಲಿ ಅಂತಹ ಅಧಿಕಾರಿಗಳನ್ನು ನೇರಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ದ ಇಲಾಖಾ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಒಂದು ವಾರದೊಳಗಾಗಿ ಜಿಲ್ಲೆಯಲ್ಲಿರುವ ಸರಕಾರಿ ಕೊಳವೆಬಾವಿಗಳ ಮಾಹಿತಿಯನ್ನು ನೀಡಬೇಕು, ಚಾಲ್ತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಕುರಿತ ಅಂಕಿ ಸಂಖ್ಯೆಗಳ ನಿಖರವಾದ ಮಾಹಿತಿಯನ್ನು ನೀಡುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರಪೇಕ್ಷಣಾಪತ್ರ ಪಡೆಯದ ಕೊಳವೆಬಾವಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಬಾರದೆಂದು ಸೂಚಿಸಿದರು.
ಗುರುವಾರದಂದು ನಡೆದ ಎಸ್ ಎಸ್ ಎಲ್ ಸಿ ತೃತೀಯ ಭಾಷಾ ಪತ್ರಿಕೆಗೆ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿ ಕೊಡಲಾಗಿದೆ ಎಂಬ ದೂರು ಬರಲಾಗಿದ್ದು, ಈ ಕುರಿತಂತೆ ಸಂಬಂಧಪಟ್ಟವರ ವಿರುದ್ದ ಈಗಾಗಲೇ ಶಿಸ್ತು ಕ್ರಮ ಜರುಗಿಸಿದ್ದು, ಶನಿವಾರದಂದು ನಡೆಯುವ ದ್ವೀತಿಯ ಭಾಷಾ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆಗೆ ಜಿಲ್ಲೆಯ ಎಲ್ಲಾ ೧೨೭ ಪರೀಕ್ಷಾ ಕೇಂದ್ರಗಳಿಗೂ ಚಾಲ್ತಿಯಲ್ಲಿರುವ ಸಿ ಸಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯವಾಗಬೇಕು. ನಕಲು ಮಾಡುವ ವಿದ್ಯಾರ್ಥಿಗಳನ್ನು ಅಮಾನತ್( ಡಿಬಾರ್) ಹಾಗೂ ನಕಲು ಪೂರೈಸುವ, ಸಹಕರಿಸುವವರ ವಿರುದ್ದ ಎಫ್ ಐ ಆರ್ ಮಾಡುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಕ್ಕೆ ಸಮರ್ಪಕವಾಗಿ ನೀರಿನ ಟ್ಯಾಂಕರಗಳನ್ನು ಕಳುಹಿಸಿ ಜವಾಬ್ದಾರಿಯಿಂದ ಕೆಲಸಮಾಡಬೇಕು. ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವದರಿಂದ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮೀತಿಯಿಂದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

