ಕೊಳವೆಬಾವಿಯಲ್ಲಿ ಬಿದ್ದ ಮಗು ರಕ್ಷಣೆ | ಸತತ ೨೧ ಗಂಟೆಗಳ ರಕ್ಷಣಾ ಕಾರ್ಯಾಚರಣೆ | ಮುಗಿಲು ಮುಟ್ಟಿದ ಹರ್ಷೋದ್ಘಾರ

ಇಂಡಿ: ಬುಧವಾರ ಸಂಜೆ ೫ ಗಂಟೆಯ ಸುಮಾರಿಗೆ ಅಪ್ಪ ಕೊರೆರಿಸಿದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ ಇವನನ್ನು ರಕ್ಷಿಸುವಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಯಶಸ್ವಿಯಾಗಿದೆ.
ಸತತ ೨೧ ಗಂಟೆಯ ಕಾರ್ಯಾಚರಣೆ ಬಳಿಕ ಸಾತ್ವಿಕ್ ಸಾವು ಗೆದ್ದು ಮೃತ್ಯುಂಜಯನಾಗಿ ಹೊರಬಂದಿದ್ದಾನೆ.
ಕಾರ್ಯಾಚರಣೆಯಲ್ಲಿ ಹೈದ್ರಾಬಾದದ ೨೧ ಜನರ ಎನ್‌ಡಿಆರ್‌ಎಫ್ ತಂಡ, ಬೆಳಗಾಂವ ಮತ್ತು ಕಲಬುರಗಿಯಿಂದ ಬಂದ ೨೫ ಜನರ ಎಸ್‌ಡಿಆರ್‌ಎಫ್ ತಂಡ, ೫೦ ಜನ ಪೋಲಿಸರು, ೨೦ ಜನ ಗೃಹ ರಕ್ಷಕದಳದ ಸಿಬ್ಬಂದಿ ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡು ಆಹೋರಾತ್ರಿ ನಡೆಸಿದ ಸತತ ಪ್ರಯತ್ನದ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿ ಗುರುವಾರ ಮಧ್ಯಾಹ್ನ ೧.೪೪ಕ್ಕೆ ಮಗುವನ್ನು ಜೀವಂತವಾಗಿ ಹೊರತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಲಚ್ಯಾಣದ ವೃಷಭಲಿಂಗೇಶ್ವರ ಶ್ರೀಗಳು, ಜನತಾದಳದ ಬಿ.ಡಿ.ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ತಾಪಂ ಇಓ ನೀಲಗಂಗಾ ಬಬಲಾದ, ಟಿಎಚ್‌ಒ ಅರ್ಚನಾ ಕುಲಕರ್ಣಿ, ಚಿಕ್ಕಮಕ್ಕಳ ತಜ್ಞ ಡಾ. ವಿಪುಲ್ ಕೋಳೆಕರ ಮತ್ತಿತರಿದ್ದರು.
ವಿಷಯ ತಿಳಿದು ಜಿಲ್ಲೆಯ ನಾನಾ ಕಡೆಗಳಿಂದ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಆಗಮಿಸಿದ ಸಾವಿರಾರು ಜನರು ಮಗುವನ್ನು ಹೊರಗೆ ತರುತ್ತಿದ್ದಂತೆ ಸಿದ್ದಲಿಂಗ ಮಹಾರಾಜ ಕಿ ಜೈ ಎಂದು ಜಯಘೋಷ ಹಾಕಿ ಹರ್ಷ ವ್ಯಕ್ತಪಡಿಸಿದರು.
ಮಗು ಸಾತ್ವಿಕ್ ೨೧ಗಂಟೆಗಳ ದೀರ್ಘ ಕಾಲ ಕೊಳವೆಬಾವಿಯಲ್ಲಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದರೂ ಬದುಕಿ ಬಂದದ್ದು ಲಚ್ಯಾಣ ಸಿದ್ದಲಿಂಗ ಮಹಾರಾಜರ ಪವಾಡವೇ ಸರಿ ಎಂಬುದು ನೆರೆದ ಜನತೆಯ ಅಭಿಮತವಾಗಿತ್ತು.

