ವಿಜಯಪುರ: ಕಾಲುವೆಗಳ ಕ್ಲೋಜರ್ ಕಾಮಗಾರಿ ನಡೆಸಲು ನೀತಿ ಸಂಹಿತೆಯಿಂದ ವಿನಾಯಿತಿ ನೀಡಿ ಕಾಮಗಾರಿಗೆ ಅನುಮತಿ ನೀಡಬೇಕೆಂದು ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರಿಗೆ ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಲಾಲ್ ಬಹದ್ಧೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಲ್ಲಿ ಬೆಳೆದಿರುವ ಮುಳ್ಳು ಕಂಟಿಗಳು ಇನ್ನೀತರ ಗಿಡಗಂಟಿಗಳು ಹಾಗೂ ಹೂಳು ತುಂಬಿರುವುದರಿಂದ ಪ್ರತಿ ಬಾರಿಯು ಕಾಲುವೆಗಳಿಗೆ ನೀರು ಹರಿಸಿದಾಗ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪದೆ ಕೊನೆಯ ಭಾಗದ ರೈತರು ನೀರಿನಿಂದ ವಂಚಿತರಾಗುತ್ತಾರೆ. ಕಳೆದ ವರ್ಷವು ಕೂಡಾ ವಿವಿಧ ಕಾಲುವೆಗಳ ದುರಸ್ತಿಯ ಕ್ಲೋಜರ್ ಕಾಮಗಾರಿಯನ್ನು ಅನುದಾನದ ಕೊರತೆಯಿಂದ ಕಾಮಗಾರಿ ಮಾಡಲಿಲ್ಲ ಈ ಭಾರಿಯೂ ಕೂಡಾ ಕ್ಲೋಜರ್ ಕಾಮಗಾರಿ ಪ್ರಾರಂಭಿಸುವುದು ಅನುಮಾನವಾಗಿದೆ. ಈ ಭಾರಿ ಲೋಕಸಭಾ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆಯೆಂದು ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನೀತಿ ಸಂಹಿತೆ ಮುಗಿಯುವುದರೊಳಗಾಗಿ ಮಳೆಗಾಲ ಆರಂಭವಾಗುತ್ತದೆ. ಇದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಪ್ರೀಲ್‌ನಲ್ಲಿ ಟೆಂಡರ್ ಕರೆದು ಜೂನ್ ವೇಳೆಗೆ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳಬೇಕು. ಕಾಲುವೆಯ ಕ್ಲೋಜರ್ ಕಾಮಗಾರಿಗೆ ನೀತಿ ಸಂಹಿತೆಯಿಂದ ಚುನಾವಣಾ ಆಯೋಗ ವಿನಾಯಿತಿ ನೀಡಬೇಕು.
ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಮಗಾರಿ ಪ್ರಾರಂಭಿಸಬೇಕಿತ್ತು. ಈ ಭಾರಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದ ನೀರನ್ನು ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲಿಲ್ಲ. ಆ ಸಂದರ್ಭದಲ್ಲಿ ಕಾಮಗಾರಿ ಪ್ರಾರಂಭಿಸಲು ಸಾಕಷ್ಟು ಸಮಯಾವಕಾಶವಿತ್ತು. ಆಗಲು ಕಾಮಗಾರಿ ಕೈಗೊಳ್ಳಲಿಲ್ಲ. ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಪ್ರಸ್ತಾವನೆ ಕಳಿಸಿದ್ದೇವೆಂದು ಹೇಳಿದ್ದಾರೆ. ಈ ಮೊದಲು ಅಂದರೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಪ್ರಸ್ತಾವನೆ ಕಳುಹಿಸಿದ್ದರೆ. ಕಾಮಗಾರಿಗೆ ಅನುಕೂಲವಾಗುತ್ತಿತ್ತು. ಅಧಿಕಾರಿಗಳ ವಿಳಂಬನೀತಿ ಗಮನಿಸಿದರೆ ಕ್ಲೋಜರ್ ಕಾಮಗಾರಿ ನಡೆಸುವ ಇಚ್ಛಾಸಕ್ತಿ ಅಧಿಕಾರಿಗಳಿಗೆ ಇಲ್ಲದಿರುವುದು ಕಂಡುಬರುತ್ತದೆ. ಕಳೆದ ವರ್ಷ ಕ್ಲೋಜರ್ ಕಾಮಗಾರಿ ನಡೆಯದ ಕಾರಣ ಎರಡು ವರ್ಷಗಳಿಂದ ಬಹುತೇಕ ಕಾಲುವೆಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ ಮತ್ತು ಜಾಲಿಗಿಡಗಳು ಬೆಳೆದು ಕಾಲುವೆಗೆ ನೀರು ಹರಿಸಿದಾಗ ಸರಾಗವಾಗಿ ನೀರು ಮುಂದೆ ಸಾಗದೇ ಇರುವುದರಿಂದ ಕಾಲುವೆಯ ಕೊನೆಯ ಅಂಚಿನವರೆಗೆ ನೀರು ತಲುಪದೇ ಕೊನೆಯ ಭಾಗದ ರೈತರಿಗೆ ಜಮೀನುಗಳಗೆ ನೀರು ತಲುಪಿಲ್ಲ. ಹೀಗಾಗಿ ಬೆಳೆಗಳಿಗೆ ನೀರು ಇಲ್ಲದೇ ಹಾಳಾಗಿದೆ. ಕೊನೆ ಅಂಚಿನ ರೈತರಿಗೆ ಕಾಲುವೆ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಚುನಾವಣಾಧಿಕಾರಿಗಳು ಕ್ಲೋಜರ್ ಕಾಮಗಾರಿ ನಡೆಸಲು ನೀತಿ ಸಂಹಿತ ಅಡ್ಡಿಯಾಗದಂತೆ ಕಾಮಗಾರಿ ನಡೆಸಲು ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಹೋರಾಟಗಾರರಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಳಿಕೋಟಿ ತಾ. ಅಧ್ಯಕ್ಷರಾದ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷರಾದ ಹೊನಕೇರಪ್ಪ ತೆಲಗಿ, ಶೆಟ್ಟಪ್ಪ ಲಮಾಣಿ, ಪ್ರಲ್ಹಾದ ನಾಗರಾಳ, ವಿಠ್ಠಲ ಬಿರಾದಾರ, ರಾಮಣ್ಣಗೌಡ ಹಾದಿಮನಿ, ಶಿವಣ್ಣಗೌಡ ತುಳಸಗೇರಿ, ಮಲ್ಲಣ್ಣಗೌಡ ದೇವರೆಡ್ಡಿ, ಲಾಲಸಾಬ ಹಳ್ಳೂರ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

