ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪುಟ್ಟ ಹಳ್ಳಿಯಲ್ಲಿ ಸೋಮು ಎಂಬ ಹತ್ತು ವರ್ಷದ ಚುರುಕಾದ ಹುಡುಗನಿದ್ದನು. ಅವನಿಗೆ ಅಜ್ಜಿಯೆಂದರೆ ಪಂಚಪ್ರಾಣ. ಅಜ್ಜಿಯ ಬಳಿ ಅವಳ ಮದುವೆಯ ಸಮಯದಲ್ಲಿ ಅವಳ ತಂದೆ ಕೊಟ್ಟಿದ್ದ ಒಂದು ಅಪರೂಪದ, ಹೊಳೆಯುವ ಮುತ್ತಿನ ಮೂಗುತಿ ಇತ್ತು. ಅಜ್ಜಿಗೆ ಅದು ಜಗತ್ತಿನಲ್ಲೇ ಅತ್ಯಂತ ಪ್ರೀತಿಯ ವಸ್ತುವಾಗಿತ್ತು. ಒಂದು ದಿನ ಮಧ್ಯಾಹ್ನ, ಅಜ್ಜಿ ಅಂಗಳದಲ್ಲಿ ಕುಳಿತು ಹರಟುತ್ತಿದ್ದಾಗ ಆ ಮೂಗುತಿಯಲ್ಲಿದ್ದ ಮುತ್ತು ಕಳಚಿ ಎಲ್ಲಿಯೋ ಬಿದ್ದುಹೋಯಿತು. ಅಜ್ಜಿಗೆ ತುಂಬಾ ಬೇಸರವಾಯಿತು. ಕಣ್ಣೀರು ಹಾಕುತ್ತಾ ಅಂಗಳದಲ್ಲೆಲ್ಲಾ ಹುಡುಕತೊಡಗಿದಳು. ವಯಸ್ಸಾಗಿದ್ದರಿಂದ ಅವಳಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.
ಅಜ್ಜಿಯ ಕಣ್ಣೀರು ನೋಡಲಾಗದ ಸೋಮು, “ಅಜ್ಜಿ ನೀನು ಯೋಚನೆ ಮಾಡಬೇಡ, ನಾನು ಹುಡುಕಿ ತರುತ್ತೇನೆ” ಎಂದು ಅಂಗಳಕ್ಕೆ ಓಡಿದನು. ಅಂಗಳ ತುಂಬಾ ಒಣಗಿದ ಎಲೆಗಳು, ಸಣ್ಣ ಕಲ್ಲುಗಳು ಮತ್ತು ಮಣ್ಣು ತುಂಬಿತ್ತು. ಸೋಮು ಗಂಟೆಗಟ್ಟಲೆ ಮಣ್ಣನ್ನೆಲ್ಲಾ ಜಾಲಾಡಿದನು, ಎಲೆಗಳನ್ನೆಲ್ಲಾ ಎತ್ತಿ ನೋಡಿದನು. ಆದರೆ ಆ ಪುಟ್ಟ ಮುತ್ತು ಎಲ್ಲೂ ಕಾಣಿಸಲಿಲ್ಲ. ಸೂರ್ಯ ಮುಳುಗುತ್ತಾ ಬಂದಿದ್ದರಿಂದ ಬೆಳಕು ಕಡಿಮೆಯಾಗುತ್ತಿತ್ತು. ಸೋಮು ದಣಿದು, ಹತಾಶನಾಗಿ ಮಣ್ಣಿನಲ್ಲೇ ಕುಳಿತುಬಿಟ್ಟನು. ಅವನಿಗೆ ಅನಿಸಿತು—ನಾನು ಎಷ್ಟು ಜೋರಾಗಿ, ಗಡಿಬಿಡಿಯಿಂದ ಹುಡುಕುತ್ತಿದ್ದೇನೋ, ಅಷ್ಟೇ ಧೂಳು ಎದ್ದು ಮುತ್ತು ಮತ್ತಷ್ಟು ಮರೆಯಾಗುತ್ತಿದೆ. ಸೋಮು ಒಂದು ದೀರ್ಘ ಉಸಿರು ತಗೆದುಕೊಂಡು, ಒಮ್ಮೆ ಕಣ್ಣು ಮುಚ್ಚಿ ತನ್ನ ಮನಸ್ಸನ್ನು ಶಾಂತಗೊಳಿಸಿಕೊಂಡನು. ಗಾಬರಿಯನ್ನು ಬಿಟ್ಟು, ನಿಧಾನವಾಗಿ ಕಣ್ಣು ಬಿಟ್ಟು ಅಂಗಳವನ್ನು ಪ್ರೀತಿಯಿಂದ ನೋಡಿದನು. ಗಾಳಿಯ ಹರಿವು ನಿಂತು, ಎದ್ದಿದ್ದ ಧೂಳೆಲ್ಲಾ ಕೆಳಗೆ ಕುಳಿತಿತು.
ಆಗ, ಸೂರ್ಯನ ಕೊನೆಯ ಕಿರಣವೊಂದು ಅಂಗಳದ ಮೂಲೆಯಲ್ಲಿದ್ದ ಒಂದು ಒಣಗಿದ ಎಲೆಯ ಕೆಳಗೆ ಬಿದ್ದಿತು. ಅಲ್ಲಿ ಏನೋ ಒಂದು ಚೂರು ಹೊಳೆಯಿತು! ಸೋಮು ನಿಧಾನವಾಗಿ ಹೋಗಿ ಆ ಎಲೆಯನ್ನು ಎತ್ತಿದಾಗ, ಅಲ್ಲಿ ಆ ಸುಂದರವಾದ ಮುತ್ತು ನಗುತ್ತಾ ಕುಳಿತಿತ್ತು. ಸೋಮು ಓಡಿಹೋಗಿ ಮುತ್ತನ್ನು ಅಜ್ಜಿಯ ಕೈಗಿಟ್ಟನು. ಅಜ್ಜಿ ಆನಂದಬಾಷ್ಪ ಸುರಿಸುತ್ತಾ ಅವನನ್ನು ಅಪ್ಪಿಕೊಂಡಳು. ಆಗ ಸೋಮು ನಗುತ್ತಾ ಅಂದನು, “ಅಜ್ಜಿ, ನಾವು ಯಾವುದನ್ನಾದರೂ ಕಳೆದುಕೊಂಡಾಗ ಆತುರದಿಂದ, ಗಾಬರಿಯಿಂದ ಹುಡುಕಿದರೆ ಅದು ಸಿಗಲ್ಲ. ನಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಂಡು ನೋಡಿದಾಗ, ಕಳೆದುಹೋದ ವಸ್ತು ತಾನಾಗಿಯೇ ಬೆಳಕಿಗೆ ಬರುತ್ತದೆ!”
ಕಥೆಯ ನೀತಿ

ಜೀವನದಲ್ಲಿ ವಸ್ತುಗಳಾಗಲಿ, ನೆಮ್ಮದಿಯಾಗಲಿ ಅಥವಾ ದಾರಿಯಾಗಲಿ ಕಳೆದುಹೋದಾಗ ಕೋಪ ಅಥವಾ ಆತಂಕದಿಂದ ಹುಡುಕಬಾರದು. ಮನಸ್ಸು ಶಾಂತವಾಗಿದ್ದಾಗ ಮಾತ್ರ ನಮಗೆ ಸರಿಯಾದ ದಾರಿ ಮತ್ತು ಉತ್ತರ ಗೋಚರಿಸುತ್ತದೆ.
ಕನ್ನಡಿ ಒಡೆದ ಮೇಲೆ
‘ಕೈಲಿದ್ದಾಗ ಕಾಣದ ಕನ್ನಡಿ, ಕಳೆದುಕೊಂಡ ಮೇಲೆ ಹುಡುಕಿದರೆ ಸಿಗದು!’ ಎನ್ನುವ ನುಡಿ ಕಳೆದುಕೊಂಡ ಸಮಯ ಮತ್ತು ಅವಕಾಶಗಳ ಮೇಲೆ ಬೆಳಕು ಚೆಲ್ಲುತ್ತದೆ. ನಮ್ಮಲ್ಲಿ ಬಹುತೇಕ ಜನರಿಗೆ ಸಮಯದ ಬಗ್ಗೆ ಉದಾಸೀನತೆ ನಮ್ಮ ಬಳಿ ಬಹಳಷ್ಟು ಸಮಯ ಇರುವಂತೆ ವರ್ತಿಸುತ್ತೇವೆ. “ಇಂದಿನ ದಿನ ನನ್ನದು” ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ನಾವು ಪ್ರಕೃತಿ ನಮಗೆ ಕೊಟ್ಟ ಅತ್ಯುತ್ತಮ ಉಡುಗೊರೆಗಳನ್ನು ನಿರ್ಲಕ್ಷಿಸುತ್ತಾ ಸಾಗುತ್ತೇವೆ. ಆದರೆ ನೆನಪಿಡಿ, ಕಾಲ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ. ಬೆಳಕಿದ್ದಾಗ ಕತ್ತಲೆಯ ಭಯವಿರುವುದಿಲ್ಲ, ಕೈಯಲ್ಲಿ ದುಡ್ಡಿದ್ದಾಗ ಬಡತನದ ನೆನಪಾಗುವುದಿಲ್ಲ. ಹಾಗೆಯೇ, ನಮ್ಮ ಬದುಕಿನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ನಮ್ಮ ಸುತ್ತಲಿರುವ ಅಮೂಲ್ಯವಾದ ಸತ್ಯಗಳು ನಮಗೆ ಕಾಣುವುದೇ ಇಲ್ಲ. ಕಣ್ಣೆದುರೇ ಇರುವ ಕನ್ನಡಿಯ ಬೆಲೆ ತಿಳಿಯದೆ, ಅದು ಒಡೆದು ಚೂರಾದ ಮೇಲೆ ಅದರ ಬಿಂಬವನ್ನು ಹುಡುಕಲು ಹೊರಡುವುದು ಇಂದಿನ ಆತ್ಯಾಧುನಿಕ ಯಂತ್ರಗಳ ಜೊತೆ ಬಾಳುತ್ತಿರುವ ಮಾನವನ ಅತಿ ದೊಡ್ಡ ಮೂರ್ಖತನ. ಕಳೆದುಕೊಂಡ ಮೇಲೆ ಕಣ್ಣೀರಿಡುವುದಕ್ಕಿಂತ, ಕೈಲಿದ್ದಾಗಲೇ ಕಾಯ್ದುಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ. ಹಾಗಾದರೆ ಅಂತಹ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳುವುದು ಹೇಗೆ? ತಿಳಿಯೋಣ ಬನ್ನಿ.
ಸೀಮಿತ ಸಮಯ
ನಾವು ದಿನವೂ ಹೇಳುವ ಸಾಮಾನ್ಯ ಸುಳ್ಳು: “ನನಗೆ ಸಮಯ ನೋಡಲೂ ಸಮಯವಿಲ್ಲ.! ಆದರೆ ನೆನಪಿಡಬೇಕಾದದ್ದು ಎಲ್ಲರಿಗೂ ಸಮಯ ದಿನಕ್ಕೆ ೨೪ ಗಂಟೆಗಳು. ಯಾರಿಗೂ ಹೆಚ್ಚಿಲ್ಲ. ಯಾರಿಗೂ ಕಡಿಮೆ ಇಲ್ಲ. ನಮಗೂ, ಸಾಧನೆ ತೋರುವ ಸಾಧಕರಿಗೂ ದೇವರು ಕೊಟ್ಟಿದ್ದು ದಿನಕ್ಕೆ ಅದೇ ೨೪ ಗಂಟೆಗಳನ್ನು ಮಾತ್ರ. ನಾವು ಸಮಯವನ್ನು ಕೊಲ್ಲುತ್ತಿದ್ದೇವೆ ಎಂದುಕೊಳ್ಳುತ್ತೇವೆ, ಆದರೆ ನಿಜವಾಗಿ ಸಮಯ ನಮ್ಮನ್ನು ಕೊಲ್ಲುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಕ್ರೋಲ್ ಮಾಡುತ್ತಾ ಕಳೆಯುವ ಪ್ರತಿಯೊಂದು ನಿಮಿಷವೂ ನಮ್ಮ ಯಶಸ್ಸಿನ ಹಾದಿಯಿಂದ ನಮ್ಮನ್ನು ದೂರ ತಳ್ಳುತ್ತಿದೆ. ಹೋದ ಸಮಯ ಹಣ ಕೊಟ್ಟರೂ ವಾಪಸ್ ಬರಲ್ಲ.”ನಮ್ಮ ಸಮಯ ಸೀಮಿತವಾಗಿದೆ, ಅದನ್ನು ಬೇರೆಯವರ ಜೀವನವನ್ನು ಬದುಕುವ ಮೂಲಕ ವ್ಯರ್ಥ ಮಾಡಬೇಡಿ.” ಎಂದಿದ್ದಾರೆ ಸ್ಟೀವ್ ಜಾಬ್ಸ್ ಸಮಯವೆಂಬುದು ಹರಿಯುವ ನದಿಯಂತೆ ಅದೆಂದೂ ಹಿಂದಕ್ಕೆ ಹರಿಯದು. ಅದೊಂದು ಮರಳಿ ಬಾರದ ಸಾಗರದ ಅಲೆ! ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ. ಅವರು ಸಮಯಪಾಲನೆಗೆ ಇನ್ನೊಂದು ಹೆಸರಾಗಿದ್ದರು. ಒಂದು ನಿಮಿಷ ತಡವಾಗಿ ಬಂದರೂ ಆ ದಿನದ ಸಂಬಳವನ್ನು ಕಡಿತಗೊಳಿಸಲು ಹೇಳುತ್ತಿದ್ದರು. ಕಳೆದುಕೊಂಡ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ, ಪ್ರತಿಯೊಂದು ಕ್ಷಣವನ್ನೂ ದೇಶದ ಪ್ರಗತಿಗೆ ಬಳಸಿದ ಮಹಾನ್ ಚೇತನ ಅವರು. ಅವರಂತೆ ಸಮಯದ ಮೌಲ್ಯವನ್ನು ತಿಳಿದು ನಡೆಯಬೇಕು.
ಸಂಬಂಧಗಳು

ಇನ್‌ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ. ಕೋಟ್ಯಂತರ ರೂಪಾಯಿ ಸಂಪತ್ತಿದ್ದರೂ ಅವರು ಇಂದಿಗೂ ತಮ್ಮ ಹಳೆಯ ಸ್ನೇಹಿತರನ್ನು, ತಮಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರನ್ನು ಮರೆತಿಲ್ಲ. ಸಂಬಂಧಗಳು ಕೈಲಿದ್ದಾಗ ಗೌರವಿಸಬೇಕು ಎಂಬುದಕ್ಕೆ ಇವರ ಸರಳತೆಯೇ ಸಾಕ್ಷಿ.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಹೆತ್ತವರು, ಹಿರಿಯರು, ಪಕ್ಕದಲ್ಲಿರುವ ಸ್ನೇಹಿತರಿಗಿಂತ ಮೊಬೈಲ್ ಪರದೆಯ ಮೇಲಿರುವ ‘ಲೈಕ್ಸ್’ ಮುಖ್ಯವಾಗಿಬಿಟ್ಟಿವೆ. ಕೋಪ ಸದಾ ಮೂಗಿನ ತುದಿಯ ಮೇಲೆ ಕುಳಿತಿರುತ್ತದೆ. ಅಹಂಕಾರ ತನ್ನ ಶಕ್ತಿಯನ್ನು ತೋರಿಸಲು ಮುಂದಾಗುತ್ತದೆ. ಈ ಎಲ್ಲ ಕೆಡುಕಗಳ ಪರಿಣಾಮವಾಗಿ ಕೇವಲ ಸಣ್ಣ ಸಣ್ಣ ತಪ್ಪು ತಿಳುವಳಿಕೆಯಿಂದಾಗಿ ವರ್ಷಗಳ ಕಾಲ ಜೊತೆಗಿದ್ದ ಸುಂದರ ಸಂಬಂಧವನ್ನು ಒಂದೇ ಕ್ಷಣದಲ್ಲಿ ಕತ್ತರಿಸಿಬಿಡುತ್ತೇವೆ. ಅವರು ನಮ್ಮಿಂದ ಶಾಶ್ವತವಾಗಿ ದೂರ ಹೋದ ಮೇಲೆ ಅಥವಾ ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಹಳೆಯ ಮೆಸೇಜ್ ನೋಡಿ ಕಣ್ಣೀರು ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಅಹಂಕಾರ ಬಿಟ್ಟು ಇಷ್ಟಪಟ್ಟವರನ್ನು ಉಳಿಸಿಕೊಳ್ಳುವುದು ಸೋಲಲ್ಲ, ಅದು ಜೀವನದ ಅತಿ ದೊಡ್ಡ ಗೆಲುವು.”ನಾವು ಜನರನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನಲ್ಲ. ಆದರೆ ಇಂದು ವಸ್ತುಗಳನ್ನು ಪ್ರೀತಿಸಿ, ಜನರನ್ನು ಬಳಸಿಕೊಳ್ಳಲಾಗುತ್ತಿದೆ.”
ಆರೋಗ್ಯ
ನಾವು ಸದಾ ಹೀಗೆ ಆರೋಗ್ಯದಿಂದ ಇರುತ್ತೇವೆಂದು ನಂಬಿ ಆರೋಗ್ಯದ ಬಗೆಗೆ ನಿರ್ಲಕ್ಷ್ಯ ತೋರುತ್ತೇವೆ. ನಿರ್ಲಕ್ಷ್ಯದ ಫಲವಾಗಿ ಅಂತಿಮ ಬಿಲ್ ಬಂದಾಗಲೇ ನಮಗೆ ಆರೋಗ್ಯದ ಬೆಲೆ ತಿಳಿಯುವುದು. ಆಸ್ಪತ್ರೆಯ ಬೆಡ್ ಮೇಲೆ ಮಲಗಿದಾಗ ಅಥವಾ ಕೈತುಂಬಾ ಟ್ಯಾಬ್ಲೆಟ್‌ಗಳನ್ನು ಹಿಡಿದಾಗ ಆರೋಗ್ಯವನ್ನು ಅದೆಷ್ಟು ಲಘುವಾಗಿ ಪರಿಗಣಿಸಿದೆ ಎಂಬುದು ಅರ್ಥವಾಗುತ್ತದೆ. ಆರೋಗ್ಯವಾಗಿರುವಾಗಲೇ ಯೋಗ, ಧ್ಯಾನ, ಉತ್ತಮ ಆಹಾರ ಕ್ರಮ ಪಾಲಿಸುವುದು ಬುದ್ಧಿವಂತಿಕೆ. ಅದೇ ರೀತಿ, ಅವಕಾಶಗಳು ಸದಾ ನಮ್ಮ ಬಾಗಿಲು ತಟ್ಟುವುದಿಲ್ಲ. ಸೋಮಾರಿತನದಿಂದ ಅಥವಾ “ನಾಳೆ ಮಾಡಿದರಾಯಿತು” ಎಂಬ ಮುಂದೂಡುವ ಹವ್ಯಾಸದಿಂದ ಸಿಕ್ಕ ಅವಕಾಶವನ್ನು ಕಳೆದುಕೊಂಡು, ನಂತರ “ನನ್ನ ಹಣೆಬರಹವೇ ಇಷ್ಟೇ” ಎಂದು ಸಮಾಜವನ್ನು ದೂಷಿಸುವುದು ಮೂರ್ಖತನ.”ಆರೋಗ್ಯವೇ ಭಾಗ್ಯ.” ಅದನ್ನು ಕಳೆದುಕೊಂಡ ಮೇಲೆ ಪ್ರಪಂಚದ ಎಲ್ಲಾ ಐಶ್ವರ್ಯವೂ ಶೂನ್ಯ ಅಥ್ಲೀಟ್ ವಿಲ್ಮಾ ರುಡಾಲ್ಫ್ ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ “ಇವಳು ಇನ್ನೆಂದೂ ನಡೆಯಲು ಸಾಧ್ಯವಿಲ್ಲ” ಎಂದ ವೈದ್ಯರ ಮಾತನ್ನು ಸುಳ್ಳಾಗಿಸಿ, ಕಠಿಣ ಪರಿಶ್ರಮದಿಂದ ಒಲಿಂಪಿಕ್ಸ್ನಲ್ಲಿ ೩ ಚಿನ್ನದ ಪದಕ ಗೆದ್ದರು. ಕೈಲಿದ್ದ ಆರೋಗ್ಯ ಕೈಕೊಟ್ಟರೂ, ಸಿಕ್ಕ ಸಣ್ಣ ಅವಕಾಶವನ್ನು ಕಳೆದುಕೊಳ್ಳದೆ ಹೋರಾಡಿ ಗೆದ್ದರು.
ಕೊನೆ ಮಾತು
ನಿಮ್ಮ ಜೀವನದ ರೀಲ್ ಬದಲಾಯಿಸಿ! ಇದು ಕೇವಲ ಓದಿ ಮರೆಯುವ ತತ್ವೋಪದೇಶವಲ್ಲ; ನಿಮ್ಮ ದಿನನಿತ್ಯದ ಬದುಕಿನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದರೆ ಬದುಕು ಯಶಸ್ಸಿನತ್ತ ಕರೆದೊಯ್ಯುತ್ತದೆ.


