ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಲ್ಲಿ ೨೫೦ಕ್ಕೂ ಹೆಚ್ಚು ಗುಂಟಾ ಪ್ಲಾಟ್‌ಗಳ ಮಾರಾಟದಲ್ಲಿ ಉತಾರೆಗಳ ಮೂಲಕ ದೊಡ್ಡ ಪ್ರಮಾಣದ ಭ್ರಷ್ಟಾಚಾರವೆಸಗಿದ್ದು ಈಗ ಅಲ್ಲಿ ವಾಸವಿರುವ ಕುಟುಂಬಗಳಿಗೆ ಸೂಕ್ತ ಕಾನೂನು ಭದ್ರತೆ ಒದಗಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರೇಡ್-೨ ತಹಶೀಲ್ದಾರ್ ಎಂ.ಜಿ.ಬಿರಾದಾರರಿಗೆ ಕುಟುಂಬಸ್ಥರು ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಮಂಗಳವಾರ ಭೂಮಿ ಖರೀದಿಸಿದ ಕುಟುಂಬಗಳು ಮಾಲೀಕರು ಆಗಮಿಸಿ ಜಾಗೆಗಳ ಉತಾರೆಗಳಲ್ಲಿ ನಡೆದ ಅಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಧುರೀಣ ಪ್ರಕಾಶ ಗುಡಿಮನಿ ಮಾತನಾಡಿ, ಪಟ್ಟಣದಲ್ಲಿ ೨೦೦೫ ಹಾಗೂ ೨೦೦೯-೧೦ರ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಇದ್ದು ಈ ಸಮಯದಲ್ಲಿ ೮ ಮತ್ತು ೯ರ ಪುಸ್ತಕದಲ್ಲಿ ಸರ್ವೇ ಸಂಖ್ಯೆ ೧೮/೪ರ ಕ್ಷೇತ್ರ ೪.೩೨ ಮತ್ತು ೧೮/೨ರ ಕ್ಷೇತ್ರ ೨.೧೨ರಲ್ಲಿ ಗುಂಟಾ ಪ್ಲಾಟ್‌ಗಳಾಗಿ ೨೫೦ ಕ್ಕೂ ಹೆಚ್ಚು ಉತಾರೆಗಳನ್ನು ದಾಖಲೆ ಮಾಡಿ ಬೇರೆಯವರ ಹೆಸರಲ್ಲಿ ಅಕ್ರಮವಾಗಿ ಖರೀದಿ ಹಾಕುವ ಮೂಲಕ ಮೋಸ ಮಾಡಲಾಗಿದೆ ಈ ರೀತಿಯಾಗಿ ಮತ್ತು ಬೇಕಾಬಿಟ್ಟಿ ಭೂಅಕ್ರಮ ಅವ್ಯಾಹತವಾಗಿ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ವಿನೋದ ನಾಶೀಮಠ ಮಾತನಾಡಿ, ಭೂಅಕ್ರಮಗಳಿಗೆ ಸಹಕರಿಸಿದ ಪಂಚಾಯಿತಿ ಹಾಗೂ ಸಬ್ ರಜಿಸ್ಟಾರ್ ಕಾರ್ಯಾಲಯದ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡು ಮುಂದೆ ಇಂಥ ಅಕ್ರಮಗಳು ಜರುಗದ ಹಾಗೇ ಕ್ರಮ ವಹಿಸಲು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಇರ್ಫಾನ ಬೇವೂರ, ಪ್ರಕಾಶ ಮೆಟಗಾರ, ಆನಂದ ದೇವೂರ, ದಾವಲಸಾಬ್ ಯರಗಲ್, ಶ್ರೀಶೈಲ ನೆಗಿನಾಳ, ಅನೀಲ ಹೊಸಮನಿ, ಶೋಭಾ ಹಿಪ್ಪರಗಿ, ಸುವರ್ಣ ಪಡಶೆಟ್ಟಿ, ಪಂಡಿತ ರಾಠೋಡ, ಬಾಸು ಡಾಲೇರ, ಹಣಮಂತ ವಾಲಿಕಾರ, ಪ್ರಕಾಶ ಮೆಟಗಾರ, ರವಿ ಧರಿ, ಭೀಮರಾಯ ಡಾಲೇರ, ಮಲ್ಲು ಯಲಗೋಡ ಇದ್ದರು.

