ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅವಳಿ ಜಿಲ್ಲೆಯ ನೂರಾರು ರೈತರು ಹಾಗೂ ರೈತ ಮಹಿಳೆಯರು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿರುವ ಪವಿತ್ರ ಪಂಚಗಂಗಾ ಕ್ಷೇತ್ರದಲ್ಲಿ ಗಂಗಾಪೂಜೆಯನ್ನು ಭಕ್ತಿ ಭಾವದಿಂದ ನೆರವೇರಿಸಿದರು.
ಪಂಚಗಂಗಾ ತೀರ್ಥದಲ್ಲಿ ಜಲದೇವತೆಗೆ ಬಾಗೀನ ಅರ್ಪಿಸಿ, ಉದ್ಭವಲಿಂಗ ಹಾಗೂ ಶ್ರೀ ಕೃಷ್ಣನ ಮೂರ್ತಿಗೆ ಮಂತ್ರಪಠಣದೊಂದಿಗೆ ಉಡಿತುಂಬಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಕೆ. ಬೆಳ್ಳುಬ್ಬಿ, “ಲಕ್ಷಾಂತರ ಎಕರೆ ಜಮೀನುಗಳಿಗೆ ಹಾಗೂ ಸಕಲ ಜೀವ ರಾಶಿಗಳಿಗೆ ಜೀವಧಾರೆ ನೀಡುವ ಕೃಷ್ಣಾ ನದಿಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪಶ್ಚಿಮ ಘಟ್ಟದಲ್ಲಿ ಸಮರ್ಪಕ ಮಳೆಯಾದರೆ ಕೃಷ್ಣಾ ನದಿ ತುಂಬಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜನತೆಗೆ ಸದಾ ಅನುಕೂಲವಾಗುತ್ತದೆ” ಎಂದು ಹೇಳಿದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, “೨೫ ವರ್ಷಗಳಿಂದ ರೈತರ ಪರವಾಗಿ ಕೃಷ್ಣಾಮಾತೆಗೆ ಬೆಳ್ಳುಬ್ಬಿ ಅವರು ಪೂಜೆ ಸಲ್ಲಿಸುತ್ತಿರುವ ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಸಾಗಿಸಲು ಯುವಕರು ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ, ಕೊಲ್ಹಾರ, ಬಳೂತಿ, ಹಣಮಾಪೂರ, ಮಟ್ಟಿಹಾಳ, ಉಪ್ಪಲದಿನ್ನಿ, ಮಸೂತಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಹಾಗೂ ಜನಪದ ಕಲಾವಿದರು ಭಾಗವಹಿಸಿದ್ದರು.
ಕಲ್ಲಿನಾಥದೇವರು ದಿಗಂಬರೇಶ್ವರಮಠ, ಕೈಲಾಸನಾಥ ಶೀಲವಂತಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲನಗೌಡ ಬಿರಾದಾರ, ಡಿ.ಜೆ. ಬಿರಾದಾರ, ಮಲ್ಲು ಕಲಾದಗಿ, ವಿಜಯ ಪೂಜಾರಿ, ಚಂದ್ರಶೇಖರ ಬೆಳ್ಳುಬ್ಬಿ, ಚಂದ್ರಶೇಖರಯ್ಯ ಗಣಕುಮಾರ, ಡಾ.ರಾಚಯ್ಯ ಮಠ, ಹಣಮಂತ ಕೊಠಾರಿ, ವೀರಭದ್ರಪ್ಪ ಬಾಗಿ, ರಾಮಣ್ಣ ಉಪ್ಪಲದಿನ್ನಿ, ಅಖಿಲಗೌಡ ಪಾಟೀಲ, ಜಗದೀಶ ಸುನಗದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

