ಮೋರಟಗಿ ಚೆಕ್ ಪೋಸ್ಟ್ ಗೆ ಡಿಸಿ, ಎಸ್ ಪಿ ಭೇಟಿ | ಸಿಬ್ಬಂದಿಗೆ ಸೂಚನೆ
ಮೋರಟಗಿ: ಈ ಭಾಗದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಮುಲಾಜಿಲ್ಲದೆ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆ ಗ್ರಾಮದ ಬಳಿ ಗಡಿಭಾಗದಲ್ಲಿ ನಿರ್ಮಿಸಲಾದ ಚೆಕ್ ಪೋಸ್ಟ್ ಗೆ ಗುರುವಾರ ಸಂಜೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟ ಕಡೆಯ ಚೆಕ್ ಪೋಸ್ಟ್ ಇದಾಗಿದೆ. ಸಿಬ್ಬಂದಿ ಕಟ್ಟೆಚ್ಚರ ವಹಿಸಿ ವಾಹನಗಳನ್ನು ಪರಿಶೀಸಬೇಕು.
ಚುನಾವಣೆ ಸಮೀಪಿಸಿದಾಗ ದಾಖಲೆ ರಹಿತ ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಣೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಚಾಲಕರು ನೆಪ ಹೇಳಿ ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೇಳಿ ಪಾರಾಗಲು ಯತ್ನಿಸುತ್ತಾರೆ. ರಾತ್ರಿ ವೇಳೆ ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕು. ಪ್ರತಿ ವಾಹನದ ನಂಬರ್ ಪ್ಲೇಟ್ ಪರಿಶೀಲಿಸಿ, ವಾಹನ ಎಲ್ಲಿಂದ ಬಂತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಕಡ್ಡಾಯವಾಗಿ ಬರೆದುಕೊಳ್ಳಬೇಕು. ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ದಾಖಲೆ ಇಲ್ಲದೆ ಯಾವುದೇ ಬೆಲೆ ಬಾಳುವ ವಸ್ತು ಸಿಕ್ಕರೂ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಚೆಕ್ ಪೋಸ್ಟ್ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಚೆಕ್ ಪೋಸ್ಟ್ ಗಳಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳ ಕಾರ್ಯವೈಖರಿ ಹಾಗೂ ಸಿಬ್ಬಂದಿ ಮೂಲ ಸೌಕರ್ಯ ಪರಿಶೀಲಿಸಿದರು. ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ, ಡಿವೈಎಸ್ಪಿ ಎಚ್.ಜಗದೀಶ್, ಚುನಾವಣೆ ಅಧಿಕಾರಿ ವಿನಾಯಕುಮಾರ ಪಾಟೀಲ, ಸಿಂದಗಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಸೀಲ್ದಾರ್ ಮಹಾದೇವ ಸಣಮುರಿ, ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಕಂದಾಯ ನಿರೀಕ್ಷಕ ಆರ್.ಐ.ಮಕಾನದಾರ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಸಾಳುಂಕೆ, ಪಿಡಿಒ ಸೈಫನಸಾಬ ಸಿಂದಗಿ, ವಿಶ್ವನಾಥ ವಾಲಿಕಾರ, ದವಲತ್ರಾಯ ರಮಗಾ, ಪೊಲೀಸ್ ಸಿಬ್ಬಂದಿ ನಿಂಗಣ್ಣ ಪೂಜಾರಿ, ಭೀಮು ಲಮಾಣಿ ಇತರರು ಇದ್ದರು.

