“ಪ್ರಭುದ್ಧ ಮನಸ್ಸು, ಪ್ರಭುದ್ಧ ಸಮಾಜ”- ವಿವೇಕಾನಂದ. ಎಚ್.ಕೆ, ಬೆಂಗಳೂರು
ಒಂದು ಆಶ್ಚರ್ಯಕರ ಸಂಗತಿಯನ್ನು ಕೆಲವರು ಗಮನಿಸಿರಬೇಕು. ಅನೇಕ ಸಾಮಾಜಿಕ ಜಾಲತಾಣಗಳ ಸಾಮಾನ್ಯ ಜನ ಮತ್ತು ಪ್ರಾಣಿ, ಪಕ್ಷಿ, ಪರಿಸರ ಪ್ರೇಮಿಗಳು ಗುಬ್ಬಚ್ಚಿ ದಿನದಂದು ಭಾವುಕರಾಗಿ ಗುಬ್ಬಚ್ಚಿಯನ್ನು ನೆನೆಯುತ್ತಿದ್ದಾರೆ. ಹೆಚ್ಚು ಕಡಿಮೆ ವಿ ಮಿಸ್ ಯು ಗುಬ್ಬಚ್ಚಿ ಎಂದು ಗುಬ್ಬಚ್ಚಿಯ ಆ ಚಿಲಿಪಿಲಿ ಧ್ವನಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ..
ಒಂದು ರೀತಿಯ ಭಾವನಾತ್ಮಕ ಅಲೆಗಳನ್ನು ಗುಬ್ಬಚ್ಚಿ ದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಹೃದಯಗಳು ಎಬ್ಬಿಸಿದ್ದು ಕಂಡು ಬರುತ್ತಿದೆ. ಒಂದಷ್ಟು ಜನ ಗುಬ್ಬಚ್ಚಿ ಕುರಿತ ಕವಿತೆಗಳು, ಲೇಖನಗಳು, ಭಾವನಾತ್ಮಕ ಸನ್ನಿವೇಶಗಳು, ಮನೆಯೊಳಗಿನ ಗುಬ್ಬಚ್ಚಿಯ ಗೂಡು ಕಟ್ಟುವಿಕೆಯ ನೆನಪುಗಳು, ವೈಜ್ಞಾನಿಕ ಲೇಖನಗಳು ಮತ್ತು ಅದು ಬಹುತೇಕ ನಗರ ಪ್ರದೇಶಗಳಲ್ಲಿ ಅವು ಮರೆಯಾಗುತ್ತಿರುವ ನೋವು ಎಲ್ಲವನ್ನು ಅಕ್ಷರಗಳ ಮುಖಾಂತರ ವ್ಯಕ್ತಪಡಿಸುತ್ತಿದ್ದಾರೆ..
ನಿಜಕ್ಕೂ ಸಾಮಾನ್ಯ ಜನರ ಮನಸ್ಸಿನ ಮೂಲೆಯಲ್ಲಿ ಕಾಡುತ್ತಿರುವ ಈ ಗುಬ್ಬಚ್ಚಿಯ ಜೀವಸಂಕುಲದ ಬಗೆಗಿನ ತುಡಿತವೇ ಮನುಷ್ಯ ಇನ್ನು ಎಲ್ಲೋ ಜೀವಂತವಾಗಿದ್ದಾನೆ ಎಂಬ ಭಾವನೆ ಮೂಡಿಸುತ್ತದೆ. ದೂರದಿಂದ ಈ ಕ್ಷಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದನ್ನು ವಿಶ್ಲೇಷಿಸಿದರೆ ಇದೊಂದು ಸಣ್ಣ ವಿಷಯವೆನಿಸಬಹುದು. ಆದರೆ ಆಳಕ್ಕೆ ಇಳಿದಾಗ ಗುಬ್ಬಚ್ಚಿ ಮರೆಯಾಗುತ್ತಿರುವ ಸನ್ನಿವೇಶ ಭಾವ ಜೀವಿಗಳ ಜೀವಂತಿಕೆಯ ಒಂದು ಸಾಂಕೇತಿಕ ಉದಾಹರಣೆಯಾಗಿದೆ..
ಅಷ್ಟೇ ಸೂಕ್ಷ್ಮವಾಗಿ ಅವಲೋಕಿಸಿ ನೋಡಿದರೆ, ಯಾವುದೇ ಒಬ್ಬ ರಾಜಕಾರಣಿಯ ಬಾಯಲ್ಲಿ, ಒಬ್ಬ ಅಧಿಕಾರಿಯ ಮನಸ್ಸಿನಲ್ಲಿ, ಒಬ್ಬ ಧಾರ್ಮಿಕ ಮುಖಂಡನ ಉಪನ್ಯಾಸದಲ್ಲಿ, ದೊಡ್ಡ ದೊಡ್ಡ ಪತ್ರಕರ್ತರ ಸಮೂಹದಲ್ಲಿ, ಬೃಹತ್ ಉದ್ಯಮ ವ್ಯಾಪಾರಿಗಳ ಅಥವಾ ವೃತ್ತಿ ನಿರತರಲ್ಲಿ, ಈ ಗುಬ್ಬಚ್ಚಿ ದಿನದ ಬಗ್ಗೆ ಹೇಳಿಕೊಳ್ಳುವಂಥ ಯಾವುದೇ ಶುಭಾಶಯಗಳಾಗಲಿ, ಪಶ್ಚಾತಾಪವಾಗಲಿ, ಕನವರಿಕೆಯಾಗಲಿ ಕಾಣಲೇ ಇಲ್ಲ. ಅಪರೂಪದಲ್ಲಿ ಯಾರೋ ಒಬ್ಬಿಬ್ಬರು ಈ ಬಗ್ಗೆ ಬರೆದಿರಬಹುದು ಅಥವಾ ಮಾತನಾಡಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಅವರೆಲ್ಲ ಬಹಳ ಹಿಂದೆಯೇ ಕಳೆದು ಹೋಗಿದ್ದಾರೆ..
ಆದರೆ ಸಾಮಾಜಿಕ ಜಾಲತಾಣದ ಸಾಮಾನ್ಯ ಮನುಷ್ಯರು ಗುಬ್ಬಚ್ಚಿಗಳ ಬಗ್ಗೆ, ಆ ಮೂಲಕ ತಾವು ಕಳೆದುಕೊಳ್ಳುತ್ತಿರುವ ಜೀವಸಂಕುಲದ ಬಗ್ಗೆ, ಮನಮಿಡಿಯ ಭಾವಗಳನ್ನು ವ್ಯಕ್ತಪಡಿಸುವಿಕೆ ಎಲ್ಲೋ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತಿದೆ..
ಈ ಸಮಾಜ ನಿಜಕ್ಕೂ ಜನಸಾಮಾನ್ಯರಿಂದಾಗಿ ಇನ್ನೂ ಸ್ವಲ್ಪ ನಾಗರಿಕವಾಗಿ ಉಳಿದಿದೆಯೇ ಹೊರತು ಯಾವುದೇ ದೊಡ್ಡ ಶ್ರೀಮಂತ, ಜನಪ್ರಿಯ, ಅಧಿಕಾರಸ್ತ ವ್ಯಕ್ತಿಗಳಿಂದಲ್ಲ. ಎಷ್ಟೋ ಜನ ಸಿನಿಮಾ ಧಾರವಾಹಿ ನಟ ನಟಿಯರು ಈ ಸಮಾಜದಿಂದ, ಈ ಪ್ರಕೃತಿಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಆದರೆ ಅವರ್ಯಾರು ಈ ಪುಟ್ಟ ಗುಬ್ಬಚ್ಚಿಯ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ..
ಇರಲಿ ಬಿಡಿ, ಈಗ ಮುಖ್ಯವಾಗಿ ಈ ಗುಬ್ಬಚ್ಚಿ ದಿನದಂದು ವೈಯಕ್ತಿಕವಾಗಿ ನನಗೆ ಅನಿಸುತ್ತಿರುವುದು, ಹೇಗೆ ಆ ಚಿಲಿಪಿಲಿ ಗುಟ್ಟುವಿಕೆಯ ಗುಬ್ಬಚ್ಚಿಗಳು ಈ ಪರಿಸರದಿಂದ ನಿಧಾನವಾಗಿ ವಿನಾಶದ ಅಂಚಿನತ್ತ ಸಾಗುತ್ತಿದೆಯೋ, ಅದೇ ರೀತಿ ಮಾನವೀಯ ಮೌಲ್ಯಗಳು ಸಹ ವಿನಾಶದ ಅಂಚಿಗೆ ಬಂದು ನಿಂತು ವ್ಯಾಪಾರದ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ನಮ್ಮೊಳಗಿನ ಪ್ರೀತಿ, ಗೆಳೆತನ, ಕರುಣೆ, ಕ್ಷಮಾಗುಣ, ತಾಳ್ಮೆ, ಸಹಕಾರ, ಸಂಯಮ, ಸಭ್ಯತೆ, ತ್ಯಾಗ, ಕೌಟುಂಬಿಕ ಸಂಬಂಧಗಳು ಗುಬ್ಬಚ್ಚಿಗಳಂತೆ ಮರೆಯಾಗಿ ಕೆಲವೇ ವರ್ಷಗಳಲ್ಲಿ ಅದನ್ನು ಮತ್ತೆ ಪಶ್ಚಾತಾಪದ ದೃಷ್ಟಿಯಿಂದ ನೆನಪಿಸಿಕೊಳ್ಳುವ ದಿನಗಳು ಬರಲೂಬಹುದು..
ಸಾಮಾನ್ಯ ಜನ ಈ ಸ್ಪರ್ಧಾತ್ಮಕ ವ್ಯಾಪಾರಿ ಕಾರ್ಪೊರೇಟ್ ಜಗತ್ತಿಗೆ ಮರುಳಾಗದೆ, ಹಣ ಅಧಿಕಾರ ಪ್ರಚಾರಗಳೇ ಬದುಕಿನ ಯಶಸ್ವಿ ಸೂತ್ರಗಳು ಎಂಬುದನ್ನು ಧಿಕ್ಕರಿಸಿ, ಬದುಕೆಂಬುದು ಪ್ರಕೃತಿಯೊಂದಿಗಿನ ಒಡನಾಟವೇ ಹೊರತು ಅದು ಬುದ್ಧಿಶಕ್ತಿಯ ಕೃತಕ ನಿರ್ಮಿತ ವಸ್ತುಗಳ ವಿಜೃಂಭಣೆಯಲ್ಲ, ದೇಹ ಮನಸ್ಸುಗಳು ಈ ಪರಿಸರದಿಂದ ಸೃಷ್ಟಿಯಾದ ಜೀವನದ ಒಂದು ಭಾಗವೇ ಹೊರತು ಅದನ್ನು ಹೊರತು ಪಡಿಸಿದ ಎಲ್ಲವೂ ಅಭಿವೃದ್ಧಿಯ ಹೆಸರಿನ ವಿನಾಶ ಎಂಬುದು ಸಾಮಾನ್ಯ ಜನಕ್ಕೆ ಮನವರಿಕೆಯಾಗಬೇಕಾಗಿದೆ..
ಈ ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಕೆಲವೇ ವರ್ಗಗಳು ದುರುಪಯೋಗಪಡಿಸಿಕೊಂಡುಅದರ ದುಷ್ಪರಿಣಾಮಗಳನ್ನು ಮಾತ್ರ ಸಾಮಾನ್ಯ ಜನ ಅನುಭವಿಸುವಂತೆ ಮಾಡಿದೆ. ಈಗ ನಾವು ಈ ಕಾರ್ಪೊರೇಟ್ ಜಗತ್ತಿನ ದುರಾಸೆಯ ವಂಚನೆಯ ಜಾಲದೊಳಗೆ ಬೀಳದೆ, ನಮ್ಮತನವನ್ನು, ನಮ್ಮ ಬದುಕನ್ನು, ನಮ್ಮ ನೆಲವನ್ನು, ನಮ್ಮ ಜೊತೆಗಾರರನ್ನು, ನಮ್ಮ ಕುಟುಂಬದವರನ್ನು, ಉಳಿಸುವ, ಬೆಳೆಸುವ, ನಿಟ್ಟಿನಲ್ಲಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ..
ಗುಬ್ಬಚ್ಚಿಗಳಂತೆ ಮಾನವೀಯ ಮೌಲ್ಯಗಳು ಸಹ ಮರೆಯಾಗುವ ಮುನ್ನ ದಯವಿಟ್ಟು ಕನಿಷ್ಠ ಪ್ರಮಾಣದಲ್ಲಿಯಾದರೂ ನಮ್ಮೊಳಗಿನ ಎಲ್ಲ ಮಾನವೀಯ ಮೌಲ್ಯಗಳನ್ನು ಮತ್ತೆ ಪುನಶ್ಚೇತನಗೊಳಿಸಿಕೊಂಡು ಬದುಕಿನ ಸಾರ್ಥಕತೆಯೆಡೆಗೆ ಮುನ್ನಡೆಸೋಣ. ಕೊಳ್ಳುಬಾಕ ಸಂಸ್ಕೃತಿ ನಮ್ಮನ್ನು ಗುಲಾಮಗಿರಿಗೆ, ಜೀತಕ್ಕೆ ಮತ್ತೊಮ್ಮೆ ಕೊಂಡೊಯ್ಯದಿರಲಿ..
ಗಾಳಿ ಬೆಳಕು ನೀರು ಎಲ್ಲಕ್ಕೂ ಹಣ ತೆರುತ್ತಿದ್ದೇವೆ. ಆದರೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಗುಬ್ಬಚ್ಚಿಯ ದಿನ ಒಂದು ಸಾಂಕೇತಿಕ ಮಾತ್ರ. ವಿನಾಶದ ಅಂಚಿನಲ್ಲಿರುವ ಪರಿಸರವನ್ನು ಇನ್ನಷ್ಟು ದೀರ್ಘಕಾಲದವರಿಗೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು..
– ವಿವೇಕಾನಂದ. ಎಚ್.ಕೆ, ಬೆಂಗಳೂರು