3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚನೆ | ಮುಂದಿನ ವಿಚಾರಣೆ ಏಪ್ರಿಲ್ 9ಕ್ಕೆ ಮುಂದೂಡಿಕೆ
ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಮಯಗಳ ಅನುಷ್ಠಾನಕ್ಕೆ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಸಿಎಎ ಜಾರಿಗೆ ತಡೆ ನೀಡುವ ಯಾವುದೇ ಮಧ್ಯಂತರ ಆದೇಶ ನೀಡಲು ಮಂಗಳವಾರ ನಿರಾಕರಿಸಿದೆ.
2024ರ ಪೌರತ್ವ ತಿದ್ದುಪಡಿ ನಿಯಮಗಳ ಜಾರಿಯನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಸಮಂಜಸವಾದ ಸಮಯವನ್ನು ನೀಡಬೇಕು ಎಂದು ಒತ್ತಿಹೇಳಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 9 ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಎಎ ಅನುಷ್ಠಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 20 ಅರ್ಜಿಗಳಿಗೆ ಉತ್ತರ ನೀಡಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಪೀಠಕ್ಕೆ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ-2019ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡುವ ತನಕ ಸಿಎಎ ನಿಯಮಗಳ ಜಾರಿಗೆ ತಡೆ ನೀಡಬೇಕು ಎಂದು ಅರ್ಜಿಗಳಲ್ಲಿ ಕೋರಲಾಗಿದೆ.

