ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಸಿಂದಗಿ: ಜಾನಪದ ಸಂಸ್ಕೃತಿಯ ಮುಖ್ಯ ಶಕ್ತಿಯೇ ಭಾವೈಕ್ಯತೆ. ಜಾನಪದ ಕಲೆಗಳು ಉಳಿಸಿ ಬೆಳೆಸುವ ಕಾಲ ಇಂದು ಕಡಿಮೆಯಾಗುತ್ತಿದೆ. ಜಾನಪದ ಉಳಿದರೆ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದು ಹಿರಿಯ ಸಾಹಿತಿ ಬಿ.ಆರ್.ಪೋಲಿಸಪಾಟೀಲ ಹೇಳಿದರು.
ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಕನ್ನಡ ಸಂಘದಿಂದ ಹಮ್ಮಿಕೊಂಡ ಕನ್ನಡ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಭಾವೈಕ್ಯತೆ ನಮ್ಮ ರಕ್ತದಲ್ಲಿ ಇದೆ, ಆದರೆ ರಾಜಕೀಯ ವ್ಯವಸ್ಥೆಯಿಂದ ಅದು ದೂರವಾಗುತ್ತಿದೆ. ಎಲ್ಲಿಯವರೆಗೆ ರಾಜಕಾರಣವನ್ನು, ರಾಜಕೀಯ ವ್ಯಕ್ತಿಗಳಿಂದ ಆದಷ್ಟೂ ನಾವೇಲ್ಲರೂ ದೂರವಿರುತ್ತೇವೆ ಅಲ್ಲಿಯವರೆಗೂ ಭಾವೈಕ್ಯತೆ ಜೀವಂತವಾಗಿರುತ್ತದೆ. ಭಗವಂತನು ನೀಡಿದ ಪ್ರಕೃತಿಯನ್ನು ನಾವೂ ಉಳಿಸುವದಿಲ್ಲವೋ ನಮ್ಮ ಪ್ರಕೃತಿಯು ಸರಿಯಾಗಿ ಇರುವುದಕ್ಕೂ ಸಾಧ್ಯವಿಲ್ಲ ಎಂದ ಅವರು ವಿನಯವಿಲ್ಲದ ಶಿಕ್ಷಣ ವ್ಯರ್ಥವಾದ ಶಿಕ್ಷಣ ಶಿಕ್ಷಕರಾಗುವವರು ಮೊದಲು ತಾಯಿಯಾಗಬೇಕು. ಕ್ಷಮಾಗುಣ, ಸಮಾಧಾನ, ಕರುಣಾಮಯಿಯಾದ ಗುಣಗಳನ್ನು ಶಿಕ್ಷಕರಾದವರು ಬೆಳೆಸಿಕೊಳ್ಳಬೇಕು. ಶಿಕ್ಷಕರು ವಿಶೇಷವಾದ ಸೃಜನಾತ್ಮಕವಾದ ಜ್ಞಾನವನ್ನು ಪಡೆದುಕೊಂಡು ಮಕ್ಕಳನ್ನು ಕ್ರೀಯಾಶೀಲರನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಉದ್ಘಾಟಿಸಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ.ನಂದಿಕೋಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಪ್ರೋ ಬಿ.ಆರ್.ಪೋಲಿಸಪಾಟೀಲ ಅವರು ಲಾವಣಿ , ತತ್ವಪದ ಗೀತೆಗಳನ್ನು ಹಾಡಿ ಪ್ರಶಿಕ್ಷಣಾರ್ಥಿಗಳಿಗೆ ನೀತಿ ಪಾಠ ಬೋಧಿಸಿದರು.
ವೇದಿಕೆ ಮೇಲೆ ಕನ್ನಡ ಸಂಘದ ಅಧ್ಯಕ್ಷ ದಾನಯ್ಯ ಮಠಪತಿ, ಕಾರ್ಯದರ್ಶಿ ಟಿಪ್ಪುಸುಲ್ತಾನ ಮನಗೂಳಿ ಇದ್ದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಎಮ್.ಎಮ್.ಪಡಶೆಟ್ಟಿ, ಕೆ.ಎಚ್.ಸೋಮಾಪೂರ, ಡಾ.ಶರಣಬಸವ ಜೋಗೂರ, ಎನ್.ಬಿ.ಪೂಜಾರಿ, ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ರೇವಣಸಿದ್ದ ಹಾಲಕೇರಿ, ಚನ್ನಬಸವರಾಜ ಕತ್ತಿ, ವಿದ್ಯಾ ಮೋಗಲಿ, ಡಾ.ಕವಿತಾ ರಾಠೋಡ ಸೇರಿದಂತೆ ಇತರರು ಇದ್ದರು.
ಪ್ರಶಿಕ್ಷಣಾರ್ಥಿ ಸಾವಿತ್ರಿ ಹೂಗಾರ ತಂಡದಿಂದ ಪ್ರಾರ್ಥನೆ, ಐಶ್ವರ್ಯ ಹೊಸಮನಿ ನಿರೂಪಿಸಿದರು, ಪ್ರೋ ದಾನಯ್ಯ ಮಠಪತಿ ಸ್ವಾಗತಿಸಿದರು, ಪವಿತ್ರಾ ಬೋನಾಳ ವಂದಿಸಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಅತಿಥಿಗಳನ್ನು ಜಾನಪದ ಸೊಗಡಿನ ಶೈಲಿಯಲ್ಲಿ ಮಹಾವಿದ್ಯಾಲಯದ ಮಹಾದ್ವಾರದಿಂದ ಡೊಳ್ಳು ಮೇಳದೊಂದಿಗೆ ಪ್ರಶಿಕ್ಷಣಾರ್ಥಿಗಳು ಸ್ವಾಗತಿಸಿದ್ದು ವಿಶೇಷವಾಗಿತ್ತು.

