– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಪರಿಣಾಮ ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಗ್ರಾಮದಿಂದ ಎರಡು ಕಿಲೋ ಮೀಟರ್ ಅಂತರದಲ್ಲಿರುವ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಹರಿಸಿದರೆ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಹಸೀಲ್ದಾರ, ತಾಪಂ ಕಚೇರಿ ಎದುರು, ಹಾಗೂ ರಾಜ್ಯ ಬಿಜ್ಜಳ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಪರಿಣಾಮ ಅಧಿಕಾರಿಗಳು ಕೊನೆಗೂ ಬಾಂದಾರಕ್ಕೆ ನೀರು ಹರಿಸಲು ಒಪ್ಪಿದ ಪರಿಣಾಮ ಬಾಂದಾರಕ್ಕೆ ನೀರು ಬಂದ ಹಿನ್ನೆಲೆಯಲ್ಲಿ ಗ್ರಾಮದ ನೀರಿನ ಸಮಸ್ಯೆ ಪರಿಹಾರ ಸಿಕ್ಕಿದ್ದರಿಂದಾಗಿ ಗ್ರಾಮಸ್ಥರಲ್ಲಿ ಹರ್ಷ ಮನೆ ಮಾಡಿದೆ.
ಕಾನ್ನಾಳ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಾಕಷ್ಟು ಸಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪ್ರತಿಭಟನೆ ಹಾದಿ ಹಿಡಿದು ಗ್ರಾಮದಿಂದ ೨ ಕಿಲೋ ಮೀಟರ್ ದೂರವಿರುವ ಮುಳವಾಡ ಏತ ನೀರಾವರಿಯ ಕಾಲುವೆಯಿಂದ ಗ್ರಾಮದವರೆಗೂ ಪೈಪ್ ಲೈನ್ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಿದ್ದರು. ಕಾಲುವೆಯಿಂದ ಬಾಂದಾರದವರೆಗೂ ಪೈಪ್ಲೈನ್ ಅನ್ನು ಗ್ರಾಮಸ್ಥರು ಹಣ ಸಂಗ್ರಹಿಸಿ ಮಾಡಿರುವುದು ವಿಶೇಷ.
ಈ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದ ಪರಿಣಾಮ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಎರಡು ಕೊಳವೆಬಾವಿ ಕೊರೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೊಲ-ಗದ್ದೆಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು. ಗ್ರಾಮದ ಬಾಂದಾರ ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎರಡು ಕೊಳವೆ ಬಾವಿಗಳಿರುವದರಿಂದಾಗಿ ಬಾಂದಾರಕ್ಕೆ ನೀರು ಬಂದರೆ ಕೊಳವೆಬಾವಿಗೆ ಅಂತರ್ಜಲ ಮಟ್ಟ ಬರುವುದರಿಂದಾಗಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣುವ ಜೊತೆಗೆ ಜಾನುವಾರುಗಳಿಗೂ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೋರಾಟದ ಹಾದಿ ಮುಂದಾದ ಪರಿಣಾಮ ಇದೀಗ ಕೊಳವೆ ಬಾವಿಯಲ್ಲಿ ನೀರು ಬರುತ್ತಿರುವುದರಿಂದಾಗಿ ಗ್ರಾಮಸ್ಥರು ಖುಷಿಯಾಗಿದ್ದಾರೆ.
ನಮ್ಮ ಗ್ರಾಮಸ್ಥರ ಹೋರಾಟ ಫಲವಾಗಿ ಅಧಿಕಾರಿಗಳು ಕಾಲುವೆಯಿಂದ ಬಾಂದಾರಕ್ಕೆ ನೀರು ಬಿಟ್ಟಿರುವದರಿಂದಾಗಿ ಗ್ರಾಮದ ಕುಡಿಯುವ ನೀರಿಗೆ ಪರಿಹಾರ ಸಿಕ್ಕಿದೆ. ಬಾಂದಾರಕ್ಕೆ ನೀರುವ ಬಂದಿರುವುದರಿಂದಾಗಿ ಬಾಂದಾರದ ಪಕ್ಕದಲ್ಲಿರುವ ಕೊಳವೆಬಾವಿಗೆ ನೀರು ಬಂದಿರುವದರಿಂದಾಗಿ ಗ್ರಾಮಕ್ಕೆ ಇದರಿಂದ ನೀರು ಬಿಡಲಾಗುತ್ತಿದೆ. ಬಾಂದಾರದಲ್ಲಿ ನೀರು ಇರುವದರಿಂದಾಗಿ ಜಾನುವಾರುಗಳಿಗೆ ಕುಡಿಸಲು ಅನುಕೂಲವಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಗ್ರಾಮದ ರಾಜಶೇಖರ ಸಜ್ಜನ, ಶಿವನಗೌಡ ತಂಗಡಗಿ, ಎಸ್.ಎಂ.ಸಜ್ಜನ, ಎಚ್.ಡಿ.ಅತ್ತಾರ, ರಾಯಪ್ಪ. ಮೇಲಿನಮನಿ, ಬಸಯ್ಯ ತೆಗ್ಗಿನಮಠ, ಯಲ್ಲಪ್ಪ ಬಸರಕೋಡ, ಇತರರು ಹೇಳಿದರು.
ಮುಳವಾಡ ಏತನೀರಾವರಿ ಕಾಲುವೆಯ ಒಂದು ಭಾಗವನ್ನು ಜೆಸಿಬಿಯಿಂದ ಒಡೆಯಿಸಿ ಕಾನ್ನಾಳ ಬಾಂದಾರಕ್ಕೆ ನೀರುವ ಹರಿಸಲಾಗಿದೆ. ಇದೀಗ ಬಾಂದಾರಕ್ಕೆ ನೀರು ಬಂದಿರುವದರಿಂದಾಗಿ ಕೊಳವೆ ಬಾವಿ ಮೂಲಕ ಗ್ರಾಮಕ್ಕೆ ನೀರು ಬಿಡಲಾಗುತ್ತಿದೆ ತಾಲೂಕಿನ ಮನಗೂಳಿ, ಉಕ್ಕಲಿ, ಸಂಕನಾಳ, ಕುದರಿಸಾಲವಾಡಗಿ, ವಡವಡಗಿ, ಮಣ್ಣೂರ ಕೆರೆಗಳನ್ನು ಕಾಲುವೆ ಮೂಲಕ ನೀರು ತುಂಬಿಸಲಾಗಿದೆ. ಇವು ಶೇ.50-60 ರಷ್ಟು ಭರ್ತಿಯಾಗಿರುವದರಿಂದ ಯಾವ ಗ್ರಾಮದಲ್ಲಿಯೂ ಸಧ್ಯಕ್ಕೆ ನೀರಿನ ಸಮಸ್ಯೆ ತಲೆದೋರಿಲ್ಲ. ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವದು ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಅಖಂಡ ಬಸವನಬಾಗೇವಾಡಿಯಲ್ಲಿ ಅರೇಶಂಕರ ಗ್ರಾಮ ಸೇರಿದಂತೆ 19 ಗ್ರಾಮ, ಕಣಕಾಲ ಸೇರಿದಂತೆ 11 ಗ್ರಾಮ, ತೆಲಗಿ ಸೇರಿದಂತೆ 32 ಗ್ರಾಮ, ಮನಗೂಳಿ ಸೇರಿದಂತೆ 35 ಗ್ರಾಮ,ಇಂಗಳೇಶ್ವರ ಸೇರಿದಂತೆ 40 ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಬಹುಹಳ್ಳಿ ಕುಡಿಯುವ ಯೋಜನೆಯಿಂದ ನೀರು ಪೂರೈಕೆ ಆಗುತ್ತಿದೆ.ಅರೇಶಂಕರ ಕೆರೆಯಿಂದ ಮಾತ್ರ ಅದಕ್ಕೆ ಸಂಬಂಧಿಸಿದ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತದೆ. ಈ ಕೆರೆಗೆ ಆಲಮಟ್ಟಿ ಜಲಾಶಯದಿಂದ 202 ಮಿಲಿಯನ್ ಕ್ಯೂಬಿಕ್ ಪೀಟ್ ನೀರು ತುಂಬಿಸಲಾಗಿದೆ. ಇದರಿಂದ ಈ ಭಾಗದ ಗ್ರಾಮಗಳಿಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಉಳಿದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಕೃಷ್ಣಾ ನದಿಯ ಹಿನ್ನೀರಿನಿಂದ ನೀರು ಪೂರೈಕೆಯಾಗುತ್ತದೆ. ಈ ಗ್ರಾಮಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ವಿದ್ಯುತ್ ಸಮಸ್ಯೆ, ಪೈಪ್ ದುರಸ್ತಿ ಸಂದರ್ಭದಲ್ಲಿ ಮಾತ್ರ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವ್ಹಿ.ಬಿ.ಗೊಂಗಡಿ ಮಾಹಿತಿ ನೀಡಿದರು.

