ವಿಜಯಪುರ: ಜಿಲ್ಲೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ (ತಿದ್ದುಪಡಿ) ವಿಧೇಯಕ ೨೦೨೪ರನ್ವಯ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷಾ ಬಳಕೆ ಅನುಷ್ಠಾನ ಕುರಿತಂತೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೆಯಕ-೨೦೨೨ನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹಾಗೂ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ (ತಿದ್ದುಪಡಿ) ವಿಧೇಯಕ ೨೦೨೪ರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಾ ಮಟ್ಟದಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಹಾಗೂ ಅನುಷ್ಠಾನಕ್ಕಾಗಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಸೇರಿದಂತೆ ತಾಲೂಕಿನ ಎಲ್ಲ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಮಿತಿ ಸದಸ್ಯರಾಗಿದ್ದು, ತಾಲೂಕಿನ ತಹಶೀಲ್ದಾರರು ಸಂಚಾಲಕರಾಗಿರುತ್ತಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕರು ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.
ತಾಲೂಕಾ ಮಟ್ಟದ ಸಮಿತಿ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿ, ಕನ್ನಡ ಬಳಕೆ ಕುರಿತು ಜಾಗೃತಿ ಮೂಡಿಸಿ ಸಮರ್ಪಕವಾಗಿ ಅನುಷ್ಠಾನಕ್ಕಾಗಿ ಕ್ರಮ ವಹಿಸಿ ತಾಲೂಕಾ ಮಟ್ಟದ ಸಮಿತಿ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಲಿಸಲಿದೆ. ಅದರಂತೆ ಜಿಲ್ಲಾ ಮಟ್ಟದ ಸಮಿತಿಯು ಸಹ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ರಾಜ್ಯಮಟ್ಟದ ಸಮಿತಿಗೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ಉದ್ಯಮಗಳು ಅಥವಾ ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಇತರ ಹಣಕಾಸು ಸಂಸ್ಥೆಗಳು ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು ಮತ್ತು ಸದರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು, ಜಿಲ್ಲೆಯ ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರುಗಳು, ಸೇರಿದಂತೆ ಜಿಲ್ಲೆಯಾದ್ಯಂತೆ ಅಳವಡಿಸಲಾಗಿರುವ ವಿವಿಧ ಸರ್ಕಾರಿ ಇಲಾಖೆಗಳ ಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಇರುವಂತೆ ನೋಡಿಕೊಳ್ಳಬೇಕು ತಿಳಿಸಿದ ಅವರು ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಕನ್ನಡ ಭಾಷಾ ಬಳಕೆ ಕುರಿತು ಸೂಕ್ತ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸಿ ಸಮರ್ಪಕವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ ಜಾರಿಗೆ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತ ಅರ್ಷದ್ ಶರೀಫ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರೀತಮ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಎಸ್.ಮುಂಡರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರಣ್‌ಕುಮಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

