ಬಸವನಬಾಗೇವಾಡಿ ತಾಲ್ಲೂಕಿನ ಟಕ್ಕಳಕಿ ಶಾಖಾ ಕಾಲುವೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನ ಟಕ್ಕಳಕಿ ಶಾಖಾ ಕಾಲುವೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ರಾಮಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಟಕ್ಕಳಕಿ ಶಾಖಾ ಕಾಲುವೆಯ ಅಲ್ವಸ್ವಲ್ಪ ಕಾಮಗಾರಿ ಕಳೆದ ಹಲವಾರು ತಿಂಗಳಿಂದ ಬಾಕಿಯಿದೆ. ಇದರಿಂದ ಬೇಸಿಗೆಯಲ್ಲಿ ಆ ಭಾಗದ ಕೆರೆಗಳ ಭರ್ತಿ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಯಾವುದೇ ಅಧಿಕಾರಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಅಲ್ಪ ಸ್ವಲ್ಪ ಕಾಮಗಾರಿ ಪೂರ್ಣಗೊಳಿಸಲು ಇರುವ ತೊಂದರೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಇಲ್ಲದಿದ್ದರೇ ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಗೋವಿಂದ ರಾಠೋಡ ಮಾತನಾಡಿದರು.
ಕಳಸದ ಭೇಟಿ:
ನಂತರ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಆವರಣದಲ್ಲಿ ಕರವೇ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಯುಕೆಪಿಯ ಪುನರ್ವಸತಿ ಇಲಾಖೆಯ ಮಹಾವ್ಯವಸ್ಥಾಪಕ ರಮೇಶ ಕಳಸದ ಭೇಟಿ ನೀಡಿ, ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಕಾಲುವೆಯ ಭೂಸ್ವಾಧೀನದ ಹೆಚ್ಚುವರಿ ಅವಾರ್ಡ್ ಗಾಗಿ ಪ್ರಕ್ರಿಯೆ ಆರಂಭಗೊಂಡಿದೆ. ಶೀಘ್ರವೇ ಭೂಸ್ವಾಧೀನ ಮಾಡಿಕೊಂಡು ಕೆಬಿಜೆಎನ್ ಎಲ್ ಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು. ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯ ಹಲವು ಸಿಬ್ಬಂದಿ ರೈತರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ವಿನಾಃ ಕಾರಣ ವಿಳಂಬ ಧೋರಣೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿಯ ಹೆಸರು ನೀಡಿ ಲಿಖಿತ ಮನವಿ ಸಲ್ಲಿಸಿದರೆ ಸತ್ಯಾಸತ್ಯತೆಯ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

