ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಸಚಿವ ಎಂ. ಬಿ. ಪಾಟೀಲ ಅವರಿಂದ ಚಾಲನೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಪಾಲ್ಗೋಂಡು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 250 ರಂಗೋಲಿ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ತಲಾ ಐದಾರು ವೈದ್ಯಕೀಯ ವಿದ್ಯಾರ್ಥಿಗಳು ತಂಡದ ರೂಪದಲ್ಲಿ ತಮ್ಮ ವೈದ್ಯಕೀಯ ಪಠ್ಯಕ್ರಮಕ್ಕೆ ಸಂಬಂಧಿಸಿದ ರಂಗೋಲಿ ಚಿತ್ರಗಳನ್ನು ಬಿಡಿಸಿದರು. ಬಿ.ಎಲ್.ಡಿ.ಇ ವಿವಿಯ 24 ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕರು, 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಬನ್ನೆಲುಬಾಗಿ ನಿಂತಿದ್ದರು. ಒಟ್ಟು 50 ಸಾವಿರ ಚದುರ ಅಡಿ ಪ್ರದೇಶದಲ್ಲಿ 10 ಟನ್ ರಂಗೋಲಿ ಬಳಕೆಯಾಗುತ್ತಿದೆ. 10 ಅಡಿ ಉದ್ದ, 12 ಅಡಿ ಅಗಲ ಅಳತೆಯ 250 ರಂಗೋಲಿ ಚಿತ್ರಗಳನ್ನು ಬಿಡಿಸಲಾಯಿತು.
ಮಾನವನ ಶರೀರ, ಅಂಗಾಂಗಗಳು, ಕಾಯಿಲೆಗಳು, ಗುಣಲಕ್ಷಣಗಳು, ದುಶ್ಚಟಗಳ ಪರಿಣಾಮಗಳು, ಔಷಧೋಪಚಾರಗಳು, ಮುನ್ನೆಚ್ಚರಿಕೆ ಕ್ರಮಗಳು, ರೋಗಗಳ ನಿಯಂತ್ರಣ, ವ್ಯಾಯಾಮ, ಆಹಾರ ನಿಯಮತ ಸೇವನೆ, ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಪ್ರಾಥಮಿಕ ಚಿಕಿತ್ಸೆಗಳು, ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಸೇರಿದಂತೆ ಮನೋಸ್ಥೈರ್ಯ ಹೆಚ್ಚಳ, ಸ್ವಚ್ಛ ಪರಿಸರ, ಪ್ರಕೃತಿಯ ಸಂರಕ್ಷಣೆ, ಧ್ಯಾನ ಹೀಗೆ ಹಲವಾರು ವಿಷಯಗಳನ್ನು ರಂಗೋಲಿಯ ಮೂಲಕ ಚಿತ್ರಿಸಲಾಗಿತ್ತು.
ಕೈಯ್ಯಲ್ಲಿ ಪೆನ್ನು, ಕತ್ತಿನಲ್ಲಿ ಸ್ಟೆಥೋಸ್ಕೋಪ್ ಹಾಕಿಕೊಂಡು ಪಾಠ ಕೇಳುತ್ತ, ಪಠ್ಯಕ್ರಮಕ್ಕೆ ಅನುಗುಣವಾಗಿ ಪುಸ್ತಕಗಳಲ್ಲಿ ಚಿತ್ರ ಬಿಡಿಸುತ್ತ ಸದಾ ಅಧ್ಯಯನದಲ್ಲಿ ವ್ಯಸ್ಥರಾಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಮನೋಲ್ಲಾಸ ಹೆಚ್ಚಿಸುವ ಮತ್ತು ಜಗತ್ತಿನಲ್ಲಿಯೇ ವಿನೂನತ ದಾಖಲೆಗೆ ಸಾಕ್ಷಿಯಾಗುವ ಘಟನೆಯಲ್ಲಿ ತಾವೂ ಪಾಲುದಾರರು ಎಂಬ ಹೆಗ್ಗಳಿಕೆಗೆ ಸ್ಪೂರ್ತಿಯಾಯಿತು.
ಈ ಸ್ವಾಸ್ಷ್ಟ ಸಂತುಲನ ರಂಗೋಲಿ ಮಹೋತ್ಸವ ಗಿನ್ನೇಸ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ರ್ ನಲ್ಲಿ ಸೇರ್ಪಡೆಯತ್ತ ಮಹತ್ವದ ಹೆಜ್ಜೆಯಾಗಿದ್ದು, ಈ ಎಲ್ಲ ದಾಖಲೆ ಸಂಸ್ಥೆಗಳ ಅಧಿಕಾರಿಗಳು ಆನಲೈನ್ ಮೂಲಕ ಪ್ರತಿಕ್ಷಣದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ದಾಖಲೆ ಏಜೆನ್ಸಿಗಳಿಗೆ ವಿವಿ ಕುಲಾಧಿಪತಿಯೂ ಆಗಿರುವ ಎಂ. ಬಿ. ಪಾಟೀಲ ವಿಡಿಯೋ ಕಾಲ್ ಮೂಲಕ ಕಾರ್ಯಕ್ರಮದ ಮಾಹಿತಿ ವಿನಿಮಯ ಮಾಡಿಕೊಂಡಿರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕ ಕುಮಾರ ಚವ್ಹಾಣ, ಕಾರ್ಯಕ್ರಮ ಸಂಯೋಜಕಿ ಡಾ. ನಂದಿನಿ ಮುಚ್ಚಂಡಿ, ಡಾ. ರವಿ ಬಿರಾದಾರ, ಡಾ. ಉದಯಕುಮಾರ ನುಚ್ಚಿ, ಡಾ. ದಯಾನಂದ ಮುಂತಾದವರು ಉಪಸ್ಥಿತರಿದ್ದರು.


