ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ
ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ರವಿವಾರ ನಗರದ ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿ ಆದಿಲ್ ಶಾಹಿ ಕಾಲದಲ್ಲಿ ನಗರಕ್ಕೆ ನೀರು ಪೂರೈಸಲಾಗುತ್ತಿದ್ದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಬೆಳಿಗ್ಗೆ ಬೇಗಂ ತಾಲಾಬ್ ಕೆರೆಗೆ ಭೇಟಿ ನೀಡಿದ ಅವರು, ಅಲ್ಲಿ 400 ವರ್ಷಗಳ ಹಿಂದೆ ಆದಿಲ್ ಶಾಹಿ ಕಾಲದಲ್ಲಿ ಪೈಪಲೈನ್ ಮೂಲಕ ನಗರದ ಸುಮಾರು 10 ಲಕ್ಷ ಜನಸಂಖ್ಯೆಗೆ ಕುಡಿಯಲು ನೀರು ಪೂರೈಸಲು ನಿರ್ಮಿಸಲಾಗಿರುವ ವ್ಯವಸ್ಥೆಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಗಚ್ಚು ತಂತ್ರಜ್ಞಾನ ಬಳಸಿ ತಯಾರಿಸಲಾದ ಡೆಲಿವರಿ ಚೇಂಬರ್ ಮತ್ತು ನೀರು ಸ್ಥಗಿತಗೊಳಿಸಲು ಅಳವಡಿಸಲಾಗಿರುವ ಸಾಗವಾನಿ ಕಟ್ಟಿಗೆಯಿಂದ ನಿರ್ಮಿಸಲಾಗಿರುವ ಗೇಟು ವಾಲ್ವ್ ವೀಕ್ಷಿಸಿದರು. ಅಲ್ಲಲ್ಲಿ ತುಂಬಿರುವ ಹೂಳನ್ನು ತೆಗೆದು ಸ್ವಚ್ಚಗೊಳಿಸಿ ದುರಸ್ಥಿ ಮಾಡುವಂತೆ ಸಚಿವರು ಪೌರಾಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ಆದಿಲ್ ಶಾಹಿ ಕಾಲದಲ್ಲಿ ಗುರುತ್ವಾಕರ್ಷಣ ಶಕ್ತಿಯ ಮೇಲೆ ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯನ್ನೂ ಪರಿಶೀಲಿಸಿದರು. ಅಲ್ಲದೇ, ಸುಮಾರು ಒಂದು ಕಿ. ಮೀ. ವರೆಗೆ ತೆರಳಿ ಈ ವ್ಯವಸ್ಥೆಯ 4 ಡೆಲಿವರಿ ಚೇಂಬರ್ ವೀಕ್ಷಿಸಿದರು. ಒಂದು ಕಡೆ 50 ಅಡಿ ಮತ್ತೋಂದು ಕಡೆ ಸುಮಾರು 90 ಅಡಿ ಆಳದಲ್ಲಿ ಕೊಳವೆ ಮಾರ್ಗಗಳಲ್ಲಿ ನೀರು ಸರಬರಾಜು ಆಗುತ್ತಿರುವುದನ್ನು ಗಮನಿಸಿದರು. ಈ ಐತಿಹಾಸಿಕ ವ್ಯವಸ್ಥೆಯ ಮೂಲಕ ವಿಜಯಪುರ ನಗರಕ್ಕೆ ಕುಡಿಯಲು ನೀರು ಪೂರೈಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುವಂತೆ ಸಚಿವರು ಸ್ಥಳದಲ್ಲಿ ಉಪಸ್ಛಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಕರೆಜ್ ವ್ಯವಸ್ಥೆಯ ಕುರಿತೂ ಗಮನ ಹರಿಸಿದ ಸಚಿವರು, ಐತಿಹಾಸಿಕ ನೀರು ಪೂರೈಕೆ ವ್ಯವಸ್ಥೆ ಮತ್ತು ಕರೆಜ್ ವ್ಯವಸ್ಥೆ ಪ್ರವಾಸಿಗರನ್ನು ಸೆಳೆಯುತ್ತವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಿಯಾ ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಐತಿಹಾಸಿಕ ನೀರು ಸರಬರಾಜು ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ವಿಜಯಪುರ ಜಿಲ್ಲೆಯ ಅಧಿಕಾರಿಗಳು ಬೆಂಗಳೂರಿಗೆ ಬಂದು ತಮ್ಮನ್ನು ಭೇಟಿ ಮಾಡಲಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಸಚಿವರನ್ನು ಎಂ. ಬಿ. ಪಾಟೀಲ ಅವರು ಕೋರಿದರು.
ಈ ಸಂದರ್ಭದಲ್ಲಿ ಇತಿಹಾಸ ತಜ್ಞರಾದ ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಎಚ್. ಜಿ. ದಡ್ಡಿ, ಉಪಮೇಯರ್ ದಿನೇಶ ಹಳ್ಳಿ, ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಾದ ಜಗದೀಶ ರಾಠೋಡ, ಗೋವಿಂದ ರಾಠೋಡ, ಕಾರ್ಯನಿರ್ವಾಹಕ ಅಭಿಯಂತರ ನಾಗರಾಳ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಮಾಜಿ ಕಾರ್ಪೋರೇಟರ್ ಅಬ್ದುಲ್ ರಜಾಕ್ ಹೊರ್ತಿ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

