ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳ ಲೋಕಾರ್ಪಣೆಗೊಳಿಸಿದ ಶಾಸಕ ಯತ್ನಾಳ ಅಭಿಮತ
ವಿಜಯಪುರ: ನಗರದಲ್ಲಿ ಯಾರು ಕೂಡ ಪತ್ರಾಸ್ ಮನೆಯಲ್ಲಿ ವಾಸ ಮಾಡಬಾರದು, ಪ್ರತಿಯೊಬ್ಬರೂ ಆರ್.ಸಿ.ಸಿ ಮನೆ ಹೊಂದಬೇಕು ಎಂಬುವುದು ನನ್ನ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಆಶ್ರಯ ಮನೆಗಳನ್ನು ನಿರ್ಮಿಸಲಾಗಿದ್ದು, ಹಲವು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಹಾನಗರ ಪಾಲಿಕೆ ವಾರ್ಡ್ ನಂ.14 ರ ಮಾಂಗಗಾರುಡಿ (ರಾಣಿ ಬಗೀಚ) ಕೊಳಗೇರಿ ಪ್ರದೇಶದಲ್ಲಿ ಶನಿವಾರ ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಅವಾಸ್ ಯೋಜನೆ ಸರ್ವರಿಗೂ ಸೂರು (ನ) ಯೋಜನೆಯಡಿ ನಿರ್ಮಿಸಲಾದ ಮನೆಗಳ ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ, ಫಲಾನುಭವಿಗಳಿಗೆ ಹಂಚಿಕೆ ಪತ್ರ ವಿತರಿಸಿ ಅವರು ಮಾತನಾಡಿದರು.
ಸ್ಲಂ ಪ್ರದೇಶಗಳಲ್ಲಿ ಈ ಹಿಂದೆ ಮಳೆ ಬಂದರೆ ಅಲ್ಲಿನ ಪರಿಸ್ಥಿತಿ ನೋಡಲಾಗುತ್ತಿರಲಿಲ್ಲ. ಈಗ ನಿರೀಕ್ಷೆ ಮೀರಿ ಬದಲಾಯಿಸಲಾಗಿದ್ದು, ಅತ್ಯುತ್ತಮ ಮನೆಗಳನ್ನು ನಿರ್ಮಿಸಿಕೊಂಡು ಖುಷಿಯಿಂದ ವಾಸ ಮಾಡುತ್ತಿದ್ದಾರೆ. ಸರಿ ಸುಮಾರು 10 ಸಾವಿರ ಮನೆಗಳನ್ನು ನಮ್ಮ ಸರ್ಕಾರ ಅವಧಿಯಲ್ಲಿ ಮಂಜೂರಿಸಲಾಗಿದೆ ಎಂದರು.
ನಮೋ ನಗರ ಒಂದರಲ್ಲೇ ಸುಮಾರು 3,700 ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 1,500 ಮನೆಗಳ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿವೆ. ಇದಾದ ಬಳಿಕ ಬಾಕಿ 2900 ಮನೆಗಳನ್ನು ನಿರ್ಮಿಸಲಾಗುವುದು. ಇನ್ನೂ ಸಾಕಷ್ಟು ಪ್ರದೇಶವಿದ್ದು, ಸ್ವಂತ ಮನೆಯಿಲ್ಲದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ವಿಜಯಪುರ ನಗರದಲ್ಲಿ ಆಸ್ತಿ ಹೊಡೆದುಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಬಡವರ ಬಗ್ಗೆ ಕಾಳಜಿಯೇ ಇಲ್ಲ. ಮನಸ್ಸು ಮಾಡಿದರೆ ನಾನು ಕೂಡ ನಮೋ ನಗರದಲ್ಲಿನ 32 ಎಕರೆ ಜಮೀನು ಹೊಡೆದುಕೊಳ್ಳಬಹುದಿತ್ತು. ಆದರೆ, ಬಡವರ ಬಾಯಲ್ಲಿ ಮಣ್ಣು ಹಾಕುವಂತವನಲ್ಲ. ಜನರಿಗೆ ಸ್ವಂತ ಸೂರು ಕಲ್ಪಿಸಿಕೊಡುವ ಪುಣ್ಯದ ಕೆಲಸ ಮಾಡುತ್ತಿರುವೆ ಎಂದು ಹೇಳಿದರು.
ಕಳೆದ ಐದಾರು ವರ್ಷಗಳಲ್ಲಿ ನಗರದಲ್ಲಿ ಆಂತರಿಕ ಮತ್ತು ಮುಖ್ಯ ರಸ್ತೆಗಳ ಸಿಸಿ ರಸ್ತೆ, ಚರಂಡಿ, ತ್ಯಾಜ್ಯ ವಿಲೇವಾರಿ, ನೀರು ಸರಬರಾಜು, ಸಮುದಾಯ ಭವನ ಸೇರಿದಂತೆ ಪ್ರತಿಯೊಂದು ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ನಿರೀಕ್ಷೆ ಮೀರಿ ಅಭಿವೃದ್ಧಿಗೊಳಿಸುವ ಮೂಲಕ ಸದ್ಯ ಮಾದರಿ ನಗರವನ್ನಾಗಿ ರೂಪಿಸಲಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯರಾದ ಜವಾಹಾರ ಗೋಸಾವಿ, ಎಂ.ಎಸ್.ಕರಡಿ, ಆಯುಕ್ತ ಬದರುದ್ದೀನ್ ಸೌದಾಗರ, ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ಬಸವರಾಜ ಸಸಾಲಟ್ಟಿ, ಮುಖಂಡರಾದ ವಿಕ್ರಮ ಗಾಯಕವಾಡ, ಬಾಬು ಶಿರಶ್ಯಾಡ ಸೇರಿದಂತೆ ಫಲಾನುಭವಿಗಳು, ಮಹಿಳೆಯರು, ಕಾರ್ಯಕರ್ತರು ಇದ್ದರು.

