ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರೇಮಾನಂದ ಬಿರಾದಾರ ಆಗ್ರಹ
ವಿಜಯಪುರ: ಗುಂಟಾ ಪ್ಲಾಟ್ ನಿವಾಸಿಗಳು ಅತ್ಯಂತ ಬಡವರು, ಹೀಗಾಗಿ ಅವರಿಗೆ ಡಬಲ್ ಟ್ಯಾಕ್ಸ್ ಹೊರೆ ಹೊರೆಸುವುದು ಬೇಡ ಎಂದು ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಪ್ರಬಲವಾಗಿ ಒತ್ತಾಯಿಸಿದರು.
ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಮೆಹಜಬೀನ್ ಹೊರ್ತಿ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಬೆಳಕು ಚೆಲ್ಲಿದ ಬಿರಾದಾರ, ಆಟೋ, ಟಾಂಗಾ, ಕೂಲಿಕಾರ್ಮಿಕರೇ ಗುಂಟಾ ಪ್ಲಾಟ್ ಖರೀದಿಸಿದ್ದಾರೆ. ಕೋವಿಡ್‌ನಲ್ಲಿ ದುಡಿಯುವ ಅನೇಕ ಯಜಮಾನರೇ ತೀರಿ ಹೋಗಿದ್ದಾರೆ. ಅಂತಹ ಕುಟುಂಬಗಳು ಎಲ್ಲಿ ಹೋಗಬೇಕು? ಡಬಲ್ ಟ್ಯಾಕ್ಸ್, ದಂಡ ಹೀಗೆ ಎಲ್ಲವನ್ನು ಕಟ್ಟಲು ಅವರು ಸಾಲ ಮಾಡಬೇಕೆ? ಅವರು ಉಪಜೀವನ ನಡೆಸುವುದೇ ಕಷ್ಟವಾಗಿದೆ, ಅಂತಹದರಲ್ಲಿ ದೊಡ್ಡ ದೊಡ್ಡ ಮೊತ್ತದ ದಂಡ ಕಟ್ಟಲು ಆ ಬಡ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಆಯುಕ್ತ ಬದರುದ್ದೀನ ಸೌದಾಗರ, ಕಾಯ್ದೆ ಅನ್ವಯ ಗುಂಟಾ ಪ್ಲಾಟ್‌ಗಳಿಂದ ಕರ ವಸೂಲಿ ಮಾಡಲಾಗುತ್ತಿದೆ. ಇದು ವಿನಾಯ್ತಿ ನೀಡುವುದು ಸರ್ಕಾರಿ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದರು.
ಇದಕ್ಕೂ ಮುನ್ನ ಸದಸ್ಯ ರಾಜಶೇಖರ ಮಗಿಮಠ, ಠರಾವು ಸ್ವೀಕೃತವಾದ ಅಂಶಗಳನ್ನು ಕೈ ಬರಹದಲ್ಲಿಯೇ ಬರೆಯಬೇಕು, ಆದರೆ ಈ ಸಂಪ್ರದಾಯವನ್ನು ಗಾಳಿಗೆ ತೂರಿರುವುದು ಎಷ್ಟು ಸರಿ? ಕೈ ಬರಹ ಇದ್ದರೆ ತಿದ್ದಲು ಸಾಧ್ಯವಿಲ್ಲ, ಅಧಿನಿಯಮದಲ್ಲಿಯೂ ಕೈ ಬರಹ ಎಂದೇ ಉಲ್ಲೇಖವಿದೆ, ಹೀಗಾಗಿ ಠರಾವು ಪುಸ್ತಕವನ್ನು ಕೈ ಬರಹದಲ್ಲಿಯೇ ಬರೆಯಬೇಕು ಎಂದು ಒತ್ತಾಯಿಸಿದರು.
ಆಗ ಸ್ಪಷ್ಟೀಕರಣ ನೀಡಿದ ಆಯುಕ್ತ ಬದ್ರುದ್ದೀನ್ ಸೌದಾಗರ ಮಾತನಾಡಿ, ೨೦೦೮ ರಿಂದ ಠರಾವುಗಳನ್ನು ಗಣಕೀರಣ ಮೂಲಕ ಬರೆಯಲಾಗುತ್ತಿದೆ ಎಂದಾಗ ಮಗಿಮಠ ಅಸಮಾಧಾನ ಹೊರಹಾಕಿ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಠರಾವು ಪುಸ್ತಕ ಒಂದು ಮಹತ್ವದ ದಾಖಲೆ, ಯಾವುದೇ ಠರಾವು ಇರಲಿ, ಅದು ಕೈ ಬರಹದಲ್ಲಿಯೇ ಬರೆಯಬೇಕು ಎಂದು ಪಟ್ಟು ಹಿಡಿದಾಗ ಕೊನೆಗೂ ಕೈ ಬರಹದಲ್ಲಿ ಠರಾವು ಬರೆಯುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸಾಮಾನ್ಯ ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವುದು ಅಗತ್ಯ ಎಂದರು.
ಪಾಲಿಕೆ ಸದಸ್ಯ ರಾಹುಲ್ ಜಾಧವ, ಪಾಲಿಕೆ ಆವರಣದಲ್ಲಿ ಗಣಪತಿ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಈ ಹಿಂದೆಯೇ ನಿರ್ಣಯ ಸ್ವೀಕರಿಸಲಾಗಿದ್ದು, ಈ ಬಗ್ಗೆ ಕೂಡಲೇ ನಿರ್ಧಾರ ಪ್ರಕಟಿಸಿ ಎಂದರು. ಇದಕ್ಕೆ ಸದಸ್ಯ ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ ಮೊದಲಾದವರು ದನಿಗೂಡಿಸಿದರು. ಹಳೆಯ ಕಟ್ಟಡದಲ್ಲಿ ಗಣಪತಿ ಪ್ರತಿಮೆ ಇತ್ತು, ಈಗ ಪ್ರತಿಷ್ಠಾಪನೆಗೆ ವಿಳಂಬವೇಕೆ ಎಂದು ಪ್ರಶ್ನಿಸಿದರು.
ಸಂಡೇ ಬಜಾರ್ ಗುತ್ತಿಗೆದಾರರು ಬಡ ಕಾಯಿಪಲ್ಲೆ ವ್ಯಾಪಾರಸ್ಥರಿಂದ ತಕ್ಕಡಿ ಕಸಿದುಕೊಳ್ಳುವುದು, ದುಡ್ಡು ಕೊಡದಿದ್ದರೆ ಅಸಭ್ಯವಾಗಿ ವರ್ತನೆ ಮಾಡಿರುವುದು ಈ ಹಿಂದೆಯೂ ನಡೆದಾಗ ನಾನೇ ಗಮನ ಸೆಳೆದಿದ್ದೆ. ಈ ರೀತಿಯ ದಬ್ಬಾಳಿಕೆ ನಡೆಯದಂತೆ ಪಾಲಿಕೆ ನಿಗಾ ವಹಿಸಬೇಕು, ಅಷ್ಟೇ ಅಲ್ಲದೇ ಕಾಯಿಪಲ್ಲೆ ಮಾರಾಟಗಾರರಿಗೆ ಸಕಲ ಸೌಲಭ್ಯ ಕಲ್ಪಿಸಬೇಕು, ಈ ವಿಷಯವಾಗಿ ಠರಾವು ಸ್ವೀಕರಿಸಬೇಕು, ಇಲ್ಲವಾದರೆ ನಾನು ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ ಎಂದು ಬಿರಾದಾರ ಗುಡುಗಿದರು.
ಸಭೆ ಆರಂಭವಾಗುತ್ತಿದ್ದಂತೆ ಕುರ್ಚಿಗಳು ಅತ್ಯಂತ ಅವ್ಯವಸ್ಥೆಯಿಂದ ಕೂಡಿವೆ, ಕೂರಲು ಸಹ ಸಾಧ್ಯವಾಗದ ಪರಿಸ್ಥಿತಿ ಇದೆ, ಮೊದಲು ಕುರ್ಚಿಗಳನ್ನು ಬದಲಿಸುವಂತೆ ಪಾಲಿಕೆ ಸದಸ್ಯರು ಪಟ್ಟು ಹಿಡಿದರು. ಮೈಕ್ ಸರಿಯಿಲ್ಲ, ಮೈಕ್ ಸರಿ ಇಲ್ಲದಿದ್ದರೆ ನಾವು ಮಾತನಾಡುವುದಾದರೂ ಹೇಗೆ? ಮೈಕ್ ಆನ್ ಇದ್ದರೂ ಸೌಂಡ್ ಬರುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿಟಿಎಸ್ ಸರ್ವೇ ನಂ.೧೭೬೯ ರಲ್ಲಿರುವ ಸಾ-ಮಿಲ್‌ದವರಿಗೆ ಲೀಜ್ ಮುಂದುವರೆಸುವ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿದ ಸದಸ್ಯ ಅಶೋಕ ನ್ಯಾಮಗೌಡ, ಈ ಉದ್ಯಮವನ್ನು ನಂಬಿ ಅನೇಕರು ಜೀವನ ನಡೆಸುತ್ತಿದ್ದಾರೆ, ಹೀಗಾಗಿ ಮೂಲತ: ಅವರಿಗೆ ಲೀಜ್ ಅವಧಿ ಮುಂದುವರೆಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸದಸ್ಯ ರಾಜಶೇಖರ ಮಗಿಮಠ ದನಿಗೂಡಿಸಿದರು.
ಮೇಯರ್ ಮೆಹಜಬೀನ್ ಹೊರ್ತಿ, ಉಪಮೇಯರ್ ದಿನೇಶ ಹಳ್ಳಿ, ಪಾಲಿಕೆ ಆಯುಕ್ತ ಬದರುದ್ದೀನ್ ಸೌದಾಗರ, ಎಲ್ಲ ವಾರ್ಡ್ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

