ಮುದ್ದೇಬಿಹಾಳ: ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಬುಧವಾರ ಲೋಕಾಯುಕ್ತ ಡಿಎಸ್‌ಪಿ ಸುರೇಶ ರೆಡ್ಡಿ ಎಂ ಎಸ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಯಾಲಯದ ಸ್ವಚ್ಛತೆ, ಇಲಾಖಾ ಕಡತಗಳು ಸೇರಿದಂತೆ ಕಛೇರಿಯ ಪ್ರತಿಯೊಂದು ಕೊಠಡಿಗಳು ಮಾತ್ರವಲ್ಲದೇ ಮಹಡಿಯನ್ನೂ ಸಹ ಖುದ್ದು ಡಿಎಸ್‌ಪಿ ಅವರೇ ಜಾಲಾಡಿಸಿದರು. ಕೆಲವು ಕೊಠಡಿಗಳಲ್ಲಿ ಕಡತಗಳ ಮೇಲೆ ಧೂಳು ಬಿದ್ದಿರುವದು, ವಿಲೇವಾರಿಯಾಗದ ಪಿಠೋಪಕರಣಗಳು, ಟ್ಯೂಬ್ ಲೈಟ್‌ಗಳು, ಹಳೆಯ ಕಡತಗಳನ್ನು ಶೇಖರಿಸಿಟ್ಟ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡು ಪಟ್ಟಣವನ್ನು ಶುಚಿಯಾಗಿ ಇಡಬೇಕಾದ ಕಾರ್ಯಾಲಯದಲ್ಲಿಯೇ ಹೀಗಾದರೆ ಹೇಗೆ ಎಂದು ಪುರಸಭೆಯ ಆಡಳಿತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಸರ್ಕಾರಿ ನೌಕರರಿಗೆ ಆಡಳಿತದ ಚುರುಕು ಮುಟ್ಟಿಸುವ, ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸರಳವಾಗಿ ದೊರಕಿಸುವ ಹಾಗೂ ಭ್ರಷ್ಠಾಚಾರ ಮಟ್ಟಹಾಕುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಶೋಧ ಕಾರ್ಯಕ್ಕೆ ಮುಂದಾಗಿದ್ದೇವೆ. ಸಧ್ಯಕ್ಕೆ ಇಲ್ಲೇನು ಭ್ರಷ್ಠಾಚಾರದ ಬಗ್ಗೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ. ಇನ್ನೂ ಶೋಧ ಕಾರ್ಯ ಮುಂದುವರೆದಿದೆ. ಜನನ, ಮರಣಗಳ ಉತಾರೆ, ಆಸ್ತಿಗಳ ಕುರಿತ ಕಾಗದ ಪತ್ರಗಳ ವ್ಯವಹಾರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣಪಡೆಯದಂತೆ, ಸರ್ಕಾರ ನಿಗದಿಪಡಿಸಿದ ಶುಲ್ಕದ ಮಾಹಿತಿ ಒಳಗೊಂಡ ಫಲಕವನ್ನು ಅಳವಡಿಸುವಂತೆ, ಸಕಾಲದ ಮಾಹಿತಿಯನ್ನು ಒಳಗೊಂಡ ಫಲಕವನ್ನು ಅಳವಡಿಸುವಂತೆ ಸೂಚಿಸಿದ್ದೇವೆ. ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಾದರೂ ವಿಲೆಯಾಗದ ಕಡತ ನಿರ್ವಾಹಕರ ಮೇಲೆ ಸೂಕ್ತ ಕ್ರಮಕ್ಕಾಗಿ ಪತ್ರ ಬರೆಯುವದಾಗಿ ತಿಳಿಸಿದರು.
ಈ ವೇಳೆ ಸಿಪಿಐ ಆನಂದ ಡೋಣಿ ಮತ್ತು ಆನಂದ ಟಕ್ಕಣ್ಣವರ, ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಶಂಕರ ಕಟೆ, ಆನಂದ ಪಡಶೆಟ್ಟಿ, ಶ್ರೀಶೈಲ ಬಳಗಾನೂರ, ಸಂತೋಷ ಚವ್ಹಾಣ, ವಾಸೀಮ ಅಕ್ಕಲಕೋಟ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

