ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಾಗೃತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಕರೆ
ದೇವರಹಿಪ್ಪರಗಿ: ದೇಶದಲ್ಲಿ ಐದು ಜನಪರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜು ಆಲಗೂರ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಾದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಚುನಾವಣೆ ಪೂರ್ವದಲ್ಲಿ ನುಡಿದಂತೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ಅನುಷ್ಠಾನಗೊಳಿಸಿದ್ದಾರೆ. ಇದನ್ನು ಲೋಕಸಭೆ ಚುನಾವಣೆಗೆ ಮುನ್ನ ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.
ಸಿಂದಗಿ ಕ್ಷೇತ್ರದ ಮಾಜಿಶಾಸಕ ಶರಣಪ್ಪ ಸುಣಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ನಾಯಿಕ್, ಮಡಿವಾಳಪ್ಪ ಬ್ಯಾಲ್ಯಾಳ, ಜಹಾಂಗೀರ ಶಿರಸಗಿ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು. ಪರಶುರಾಮ ದಿಂಡವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವರಹಿಪ್ಪರಗಿ ಹಾಗೂ ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಶೀರ್ ಅಹ್ಮದ್ ಬೇಪಾರಿ, ಬಿ.ಎಸ್.ಪಾಟೀಲ (ಸಾತಿಹಾಳ), ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರಮೀಜಾ ನಧಾಫ್ ಹಾಗೂ ಮತಕ್ಷೇತ್ರದ ಪ್ರಮುಖ ನಾಯಕರುಗಳಾದ ಬಿ.ಎಸ್.ಪಾಟೀಲ (ಯಾಳಗಿ), ಸುಭಾಸ್ ಛಾಯಾಗೋಳ, ಪ್ರಭುಗೌಡ ಬಿ.ಎಲ್.(ಚಬನೂರ), ಗೌರಮ್ಮ ಮುತ್ತಗಿ, ಸುಜಾತಾ ಕಳ್ಳಿಮನಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ(ಯರನಾಳ) ಸೇರಿದಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾಯಿತ ಕಾಂಗ್ರೆಸ್ ಸದಸ್ಯರು ಹಾಗೂ ಮತಕ್ಷೇತ್ರದ ಪ್ರಮುಖ ನಾಯಕರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಇದು ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನಲು ಮತ್ತೊಮ್ಮೆ ಸಾಕ್ಷಿಯಾಯಿತು. ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಳ್ಳಬೇಕಾಗಿದ್ದ ಸಭೆ ೨ ಗಂಟೆಗಳ ಕಾಲ ವಿಳಂಬವಾಗಿ ಮಧ್ಯಾನ್ಹ ೧.೦೦ ಗಂಟೆಗೆ ಆರಂಭಗೊಂಡಿತು.
ಸಭೆಯಲ್ಲಿ ರಾಜ್ಯ ಯುವಕಾಂಗ್ರೆಸ್ ಜಂಟಿಕಾರ್ಯದರ್ಶಿ ಸಂತೋಷ ದೊಡಮನಿ, ಅಶೋಕ ಚಲವಾದಿ, ಸಿ.ಎಸ್.ನ್ಯಾಮಣ್ಣವರ(ಯಾಳವಾರ), ಮೈನೂದ್ಧಿನ ಬಾಗವಾನ(ಹುಣಶ್ಯಾಳ), ರಮೇಶ ಗುಬ್ಬೇವಾಡ, ಹುಯೋಗಿ ತಳ್ಳೋಳ್ಳಿ, ಪ್ರೋ.ಯಂಕಂಚಿ, ಲಾಳೇಮಶಾಕ್ ರೂಗಿ, ದಾವುಲಸಾಬ್ ನಾಯ್ಕೋಡಿ, ವಿಠ್ಠಲ ದೇಗಿನಾಳ, ಪ್ರಕಾಶ ಗುಡಿಮನಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಸುನೀಲ ಕನಮಡಿ, ಹುಸೇನ ಕೊಕಟನೂರ, ಸುನಂದಾ ಸೊನ್ನಳ್ಳಿ, ರಾವುತಮಾಸ್ತರ ತಳಕೇರಿ, ಬಸವರಾಜ ಇಂಗಳಗಿ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.

