’ವ್ಯಂಗೋತ್ಸವ’- ಶ್ರೀನಿವಾಸ ಜಾಲವಾದಿ, ಸುರಪುರ

‘ರೆಡ್ಡಿನ್ನ ನಿಂದರಿಸಿ ಕೆಡವಿದ್ರಲೋ ತಮ್ಮಾ?’ ಕೇಳಿದ ಕಾಕಾ ಗುಡುಮ್ಯಾಗ
‘ಏನಪಾ ಕಾಕಾ ಯಾವಾಗ ಬಂದಿ? ನೋಡ್ಲೆ ಇಲ್ಲಲಾ?’ ಅಂದ ಗುಡುಮ್ಯಾ
‘ನಾ ವೋಟಿಂಗ್ ಮುಗದ ಮ್ಯಾಕ ಬಂದೆ’ ಅಂದ ಕಾಕಾ
‘ಯಾವ ವೋಟಿಂಗ? ಈಗ ಯಾವ್ದು ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದೇಪಾ ಯಪ್ಪಾ?’ ಕೇಳಿದಳು ರಾಣಿ ಕುತೂಹಲದಿಂದ
‘ಏ ಅದೇ ರಾಜ್ಯಸಭಾ ಎಲೆಕ್ಷನ್ ಆತಲಾ, ಗೊತ್ತಿಲ್ಲೇನ ನಿಂಗ?’ ಎಂದ ಕಾಕಾ
‘ಅರೇ ಅದು ಹ್ಯಾಂಗ ನಿನ್ಗ ಗೊತ್ತಾತೈಪಾ?’ ಅಂದಳು ರಾಶಿ
‘ಏ ಮನಷಾ ಅಂದ ಮ್ಯಾಕ ಎಲ್ಲಾ ತಿಳ್ಕಂಡಿರಬೇಕು ತಿಳಿತಿಲ್ಲೋ?’ ಅಂತ ನಕ್ಕ ಕಾಕಾ
‘ಹೌದಾ?’ ಅಂತ ಬಾಯ್ತೆರೆದ ಗುಂಡ್ಯಾ
‘ಅದು ಸರಿ, ನೀ ಯಾಕ ಆ ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದಿ?’ ಅಂತ ಎನ್ಕ್ವೈರಿ ಮಾಡಿದಳು ರಾಶಿ
‘ಯಾಕ, ಹೋಗಬಾರದಿತ್ತೇನು?’ ಅಂದ ಕಾಕಾ
‘ನಿಂಗ ಅಲ್ಲಿ ಒಳಾಕ ಬಿಟ್ರೇನು?’ ಅಂದ ಶೌರಿ
‘ಏ ಅಲ್ಲಿ ಬರೇ ಎಂಎಲ್ಎಯವರು ವೋಟ ಹಾಕುದಿತ್ತು, ನೀ ಯಾಕ ಅಲ್ಲಿ ಹೋಗಿದ್ದಿ?’ ಅಂದ ಕಾಳ್ಯಾ
‘ಅಲ್ಲಾ ಕಾಳ್ಯಾಗ ಸೈತ ಈ ವಿಷಯದಾಗ ತಿಳಿತೈತಿ,ನಿಂಗ ತಿಳೇಣಿಲ್ಲಾ?’ ಅಂದ ರಬಡ್ಯಾ
‘ಅಂದ್ರs ನಿನ್ನ ಮಾತಿನ ಅರ್ಥರೇ ಏನಲೇ ರಬಡ್ಯಾ?’ ಅಂತ ಒಮ್ಮಿಕ್ಲೇ ರಾಂಗ್ ಆದ ಕಾಳ್ಯಾ
‘ಏ ಹಂಗಲ್ಲ ತಗಿ ಅದು, ಕಾಳ್ಯಾ ಅಂದ್ರs ಏನಂತ ತಿಳದಿ?
ಅಂವಾ ನ್ಯೂಜ್ ಚಾನೆಲ್ ಇದ್ದಂಗ’ ಅಂದ ಗುಡುಮ್ಯಾ
‘ಏ ಹಂಗಲ್ಲೋ ಕಾಳ್ಯಾ ಅದು…..ಅಂತ ಏನೋ ಸುಧಾರಸ್ಲಿಕ್ಕಿ ಹೋದ ರಬಡ್ಯಾ
ಕಾಳ್ಯಾ ದುರುಗುಟ್ಟಿ ನೋಡಿದಾ
‘ಏ ಇರ್ಲಿ ಬಿಡ್ರೋ ಏನ್ ಹಚ್ಚಿರಿ ನಿಮ್ದು’ ಅಂತ ಕಾಕಾ ಬೈದ
‘ಅಂದಂಗ ರಾಜ್ಯಸಭಾ ಎಲೆಕ್ಷನ್ದು ಏನಾತು?’ ಕೇಳಿದ ಗುಂಡ್ಯಾ
‘ಅಲ್ಲಪಾ ಅಲ್ಲಿ ನಾಕ ಸೀಟಿಗಿ ಆಗಸ್ಟು ಮೆಂಬರ ಇದ್ರು, ಇವ್ರು ರೆಡ್ಡಿ ನಿಂದ್ರಸಿ ಅಡ್ಡ ಮತದಾನ ಮಾಡಸ್ಬೇಕಂದ್ರು, ಅದು ಅವರಿಗೆ ತಿರುಗ ಬಾಣ ಆತು’ ಅಂದ ಶೌರಿ
‘ಯಾರ ನಿಂದರಿಸಿದವ್ರು? ಅದಕ್ಕ ಕೌಂಟರ್ ಕೊಟ್ಟವ್ರು ಯಾರು?’ ಅಂತ ಕೇಳಿದಳು ರಾಶಿ
‘ಇನ್ಯಾರು? ಅದೇ ಕುಮ್ವಿಜ್ಜಿ ನಿಂದ್ರಸಿದ್ರು, ಟಗರಿನ ಮ್ಯಾಗ ಬಂದ ಬಂಡೆ ಅದನ್ನ ಢಮಾರ ಅಂತ ಅನಿಸಿದ್ರು’ ಅಂತ ವ್ಯಂಗವಾಗಿ ನಕ್ಕ ಗುಡುಮ್ಯಾ
‘ಏ ಹೈನಾ ಬಾತ್? ಐಸಾ ಕ್ಯಾ?’ ಅಂತ ಕೇಳ್ದ ಬಾಶಾ
‘ಏ ಅದು ಮೊದ್ಲ ಭಾಂಡಗೆ ಒಂದೇ ಹೆಸರ ಫೈನಲ್ ಆಗಿತ್ತs, ಮತ್ತ ಈ ದೋಸ್ತಿ ಟೆಸ್ಟ್ ಮಾಡ್ಬೇಕಲ್ಲಾ? ಅದ್ಕ ಶ್ಯಾಣ್ಯಾಗ ತಲಿ ತುಂಬಿ ಟಕ್ಕರ ಕೊಡ್ಬೇಕು ಬಂಡೆ ಆ್ಯಂಡ್ ಕಂಪನಿಗಂತs ಹೊಂಟಾ ರಣಧೀರ ಕಂಠೀರವ, ಆಗ ಎಸ್ಟಿಸ್ ಆ್ಯಂಡ್ ಶಿವಾ ಹರೋ ಹರ ಮಾಡಿದ್ರು’ ಅಂತ ದೀರ್ಘ ಉಸಿರು ಬಿಟ್ಟ ಕಾಳ್ಯಾ
‘ಎಸ್ಟಿಎಸ್ ಮದ್ಲ ಬಾಂಬೆ ಕ್ಯಾಂಡಿಡೇಟ್ ಈಗ ಕೇಳ್ತಾನಾ?’ ಅಂದ ಶೌರಿ
‘ಶಿವಾ ಅಂತೂ ಆ ರೋಡಿಗೆ ಹಾಯ್ಲಿಲ್ಲಾ! ನಾಟ್ರಿಚೇಬಲ್’ ಅಂದಳು ರಾಶಿ
‘ಅಬಬ ಅಂದ್ರs ಯಾರ್ಯಾರು ಬಂದ್ರು ಆರ್ಸಿ?’ ಕೇಳಿದ ಗುಂಡ್ಯಾ
‘ಅದೇ ಮ್ಯಾಗಿನ ಕ್ಯಾಂಡಿಡೇಟು ಮಾಕೆಲ್, ನಾಸೀರುಸೇನ, ಚಂದ್ರಶೇಖರ ಮತ್ತ ನಾರಾಯಣಸಾ’ ಅಂತ ವರದಿ ಒಪ್ಪಿಸಿದ ಶೌರಿ
‘ಕುಪೇಂದ್ರ ಕೋಟಿ ಕೋಟಿ ಕುಳ ಇದ್ರೂ ಬಂಡೆ ಟಗರು ಎಲ್ಲಾ ಇಂಡಿಪೆಂಡೆಂಟ್ ಒಳ್ಗ ಹಾಕ್ಕೊಂಡು ಮಾರಮ್ಮನ ಜಾತ್ರಿ ಮಾಡಿದ್ರು’ ಅಂತ ನಕ್ಕ ಕಾಳ್ಯಾ
‘ಅದೇ ಅತ್ತೆಗೊಂದ ಕಾಲ ಸೊಸೆಗೊಂದ ಕಾಲ!’ ನಕ್ಕಳು ರಾಣಿ
‘ಹ್ಯಾಂಗ?’
‘ಅದೇ ಆವಾಗ್ಗೆ ಇವರ್ನೆಲ್ಲಾ ಬಾಂಬೆಕ್ಕ ಕರ್ಕೊಂಡ ಹೋಗಿ ಅಲ್ಲಿ ಹೊಟೆಲ್ದಾಗ ಡಂಪ್ ಮಾಡಿದ್ರು, ಅಲ್ಲಿ ಹೊಟೇಲ್ ಮುಂದ ಹೋಗಿ ಬಂಡೆ ತಲಿ ಚಚ್ಚಕೊಂಡಿದ್ರು ನಾಟ್ರಿಚೇಬಲ್ ಆಗಿತ್ತs, ಈಗ ಅದೇ ಸೋಮವಿಲ್ಲದ ಶೇಖರ ಆ್ಯಂಡ್ ಶಿವ ಇಲ್ಲದ ರಾಮ ಔಟ್ ಆಫ್ ಸಿಲೇಬಸ್ ಆದ್ರೂ ದೋಸ್ತಿಗೆ’ ಅಂತಂದಳು ರಾಣಿ
‘ಅಂತೂ ಮುಯ್ಯಿಗೆ ಮುಯ್ಯಿ ತೀರಿಸ್ಕೊಂಡಂಗಾತು’ ಅಂದ ಕಾಕಾ
‘ಈಗ ವಿಪ್ ಇತ್ತಲಾ ಇವ್ರ ಸಾಸಕಗಿರಿ ಹೊಕ್ಕತೋ ಹ್ಯಾಂಗ?’ ಕೇಳ್ದ ರಬಡ್ಯಾ
‘ ಅದಕ್ಕೆಲ್ಲ ಬಂಡೆ ಯವಸ್ಥಾ ಮಾಡಿರತೈತೇಳು’ ಅಂದ ಶೌರಿ
‘ ಮತ್ತs ಪಾರ್ಟಿ ಕೊಡಸ್ರಿ ಆರ್ಸಿ ಬಂದದ್ದಕ್ಕ’ ಅಂದ ಕೆಬಕ್ಯಾ
‘ಏ ಇದ ಯಾವ್ದ ಗಿರಾಕಿಲೇ ತಮ್ಮ?’ ಅಂದ ಕಾಕಾ
‘ಏ ಕಾಕಾ, ಇಂವಾ ನಮ್ಮ ಗುತ್ನಾಮ್ಮಳಂಕಲ್ ಪೈಕಿ ಮನ್ನಿ ಊರಿಗಿ ಬಂದತಿ’ ಅಂದಳು ರಾಶಿ
‘ಏನಲೇ ಬಂದ ಬಂದವನ ಪಾರ್ಟಿನೇ ಕೇಳ್ತಿ? ಕ್ಯಾ ಬಾ?’ ಅಂದ ಬಾಶಾ
‘ಏ ಇಂವಾ ಗಣಿಧಣಿ ಟೈಪ್ ಅದಾನು, ಅದ್ಕs ಎಕಡಿ ಸಿಗ್ತೈತಿ ಆ ಕಡಿ ಜಮಾಸ್ತೈತಿ’ ಅಂದ ಕಾಳ್ಯಾ
‘ ಅಂವಾ ನಾಸೇರ ಗೆದಿಯೂನ ಪಾಕಿಗೆ ಜೈ ಅಂದಾನಂತಲಾ?’ ಅಂದಳು ರಾಶಿ
‘ಅವ್ನ ಹಿಡದು ಗುದುಮುತೇವಿ ಅಂದಾರ ಹೋಂ ಮಿನಿಸ್ಟ್ರು’ ಅಂದ ಬಾಶಾ
‘ ಅಂತಾ ದೇಶ ನಿರಭಿಮಾನಿಗಳ್ನ ಒಯ್ದು ಅರಬ್ಬಿ ಸಮುದ್ರದಾಗ ಬಿಸಾಕಬೇಕು ನೋಡು’ ಅಂದ ಶೌರಿ
‘ಹೌದು ಇಂಥಾ ದೇದ್ರೋಗಳ್ನ ಗಡಿಪಾರ ಕರೇ ತೋ ಅಚ್ಚಾ ಹೋತಾ’ ಅಂದ ಬಾಶಾ
‘ಶಬ್ಭಾಶ್ ನಿನ್ನ ದೇಶಪ್ರೇಮ ಮೆಚ್ಚಿದ್ನೊಡು’ ಅಂದ ಕಾಕಾ
‘ಪೆಹಲಾ ಹಮಾರಾ ದೇಶ, ಏ ಹಮಾರಾ ಮಾ ಹೈ, ಔರ್ ನಮ್ಗೆ ಇದೇ ಎಲ್ಲಾ, ಇದೇ ಧರ್ತಿ ನಮ್ಮ ಪ್ರಾಣ’ ಅಂತ ಭಾವುಕನಾಗಿ ಅಂದ ಬಾಶಾ
‘ಆಹಾ, ಈ ದೇಶಮಾತೆ ಭಾರತಾಂಬೆ ತುಂಬಾ ಸಂತೋಸ್ಗೋಂಡಾಳ ನೋಡಪಾ ಅಣ್ಣಾ’ ಅಂತ ಅಂದಳು ರಾಶಿ
‘ಅದಿರಲಿ,ಈ ಮಾಜಿ ಪೋಲೀಸ ಅಧಿಕಾರಿ ಕಮಲಕ್ಕ ಮನಿಂದನೇ ಕೊಡಗು ಎಂಪಿ ಟಿಕೇಟ್ ಪಡೆತೆನಿ ಅಂದಾರಂತ’ ಅಂದ ಕಾಕಾ
‘ಇವರು ಆಪ್ ದೊಳಗ ಇದ್ರು, ಈಗ ದೋಸ್ತಿ ಜೋಡಿ ಇನ್ ಆಗ್ಯಾರು’ ಅಂದಳು ರಾಣಿ
‘ಇಂಡಿಯಾ’ನೂ ಅಲ್ಲಲ್ಲಿ ಜೋಡಿಸ್ಕಾಂತ ಹೊಂಟೈತಂತ ಕಾಣ್ತೈತಿ’ ಅಂದ ಕಾಳ್ಯಾ
‘ಇನ್ನಾ ಭಾಳ ಐತಿ ಅದು ಕೆಲ್ಸ ಸುಮ್ಕಲ್ಲ ತಗಿ’ ಅಂದಳು ರಾಣಿ
‘ಸೋನಕ್ಕ ರಾಜ್ಯಸಭಾಕ್ಕ ಹ್ವಾದ್ಲು, ರಾಯಬರಲಿಗ್ಯಾರು?’ ಕೇಳಿದ ಕಾಕಾ
‘ಪ್ರಿಯಾಂಕ ಇಲ್ಲಾ ವಡೊದ್ರಾ ರಾಗಾ, ಅವರ್ನ ಬಿಟ್ರ ಯಾರು?’ ಅಂದ ರಬಡ್ಯಾ
‘ನಮೋ ಶಾಣ್ಯಾಂದು ಭರ್ಜರಿ ಪ್ಲಾನ್ ಇದ್ದಂಗೈತೆ?’ ಕೇಳಿದ ಶೌರಿ
‘ಹೌದು ಇದ್ದೀತು,ಆದ್ರs ಈ ಮಂಡ್ಯ ಗೌಡ್ತಿದು ಕತಿ ಏನಾತು?’ ಕೇಳಿದ್ಳು ರಾಣಿ
‘ಕುಮ್ಮಿ ಅದ್ನ ಕಬ್ಜಾ ಮಾಡ್ಕೊಂಡು ಕುಂತಾನು, ಏನಾಕೈತಿ ನೋಡ್ಬೇಕು’ ಅಂದಳು ರಾಶಿ
‘ಮತ್ತs ಸೋಬಕ್ಕಗ ಗೋಬ್ಯಾಕ್ ಅಂದಾರಂತ?’ ಗುಂಡ್ಯಾ ಅಂದ
‘ಏ ಸೋಬಕ್ಕ ಗರಂ ಆಗ್ಯಾಳು, ಸಿಟ್ಟೂರಿ ಕಡೆ ಸಿಟಿಗೆ ಜಾಡಿಸ್ಯಾಳು’ ಅಂತಂದ ಕಾಳ್ಯಾ
‘ಏ ಈ ಸಲ ಇದು ‘ಲೋಕಾ’ ಭಾಳ ಗೊಜಲ ಗೊಜಲಾಗೇತಿ’ ಅಂತ ಕಾಕಾ ಅಂದ
‘ನಡ್ರಿ ಎಲ್ಲಾರೂ ಚಾ ಕುಡ್ಯಾಮು ಬರ್ರಿ’ ಅಂತ ಕಾಕಾ ಅಂದ
‘ಮತ್ತs ಜಯದೇವದ ಮಂಜುನಾಥ ಅವರೂ ಬರಕತ್ಯಾರು ಅಂತ ಸುದ್ದಿ ಹೊಂಟೈತಿ?’ ಅಂದ ಬೆಂಗಳೂರು ಉತ್ತರ ದಿಕ್ಕಿನ ಕಡೆ ನೋಡಿ ಗುಡುಮ್ಯಾ
‘ಹಾಂ, ಹೌದಾ?’ ಅಂತ ಎಲ್ಲಾರೂ ಅತ್ತ ಹೊಂಟರು.
– ಶ್ರೀನಿವಾಸ ಜಾಲವಾದಿ

