‘ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ತಾ:ಜಿ: ಬೆಳಗಾವಿ ೯೪೪೯೨೩೪೧೪೨

ಹೋದ ವರ್ಷದಂತೆ ಪರೀಕ್ಷೆ ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಒತ್ತಡದ ಓದನ್ನು ಈ ವರ್ಷ ಮುಂದುವರಿಸುವುದು ಬೇಡ ಅಂತ ದಿನಾಲೂ ಅಂದುಕೊಳ್ತಿನಿ. ಇವತ್ತಿನಿಂದ ಅಭ್ಯಾಸ ಪ್ರಾರಂಬಿಸಬೇಕು, ಗುರುಗಳು ಹೇಳಿದಂತೆ ಅಂದಂದಿನ ಅಭ್ಯಾಸ ಮಾಡಬೇಕಂತಾನೂ ಅಂದುಕೊಳ್ತಿನಿ. ಅಪ್ಪ ಅವ್ವನ ಒತ್ತಾಯಕ್ಕೆ ಶಾಲೆಯಲ್ಲಿ ಕೊಟ್ಟ ಮನೆಗೆಲಸ ಅನಿವಾರ್ಯವೆಂಬಂತೆ ಮುಗಿಸ್ತಿನಿ. ಟಿವಿ ಮೊಬೈಲ್‌ನೊಳಗ ಸಿಕ್ಕಿ ಹಾಕಿಕೊಂಡು ಸಮಯ ಸರಿದಿದ್ದೇ ಗೊತ್ತಾಗಲ್ಲ. ತಲೆದಿಂಬಿಗೆ ತಲೆ ಇಟ್ಟಾಗ ಮತ್ತೆ ಪಶ್ಚಾತ್ತಾಪವೆನಿಸುತ್ತದೆ. ನಾಳೆಯಿಂದ ಮೊದಲನೇ ಅಧ್ಯಾಯದಿಂದ ಎಲ್ಲ ವಿಷಯಗಳ ಓದನ್ನು ಪ್ರಾರಂಭಿಸ್ತಿನಿ ಅಂದುಕೊಂಡು ಮಲಗ್ತಿನಿ. ಮತ್ತೆ ಮರುದಿನವೂ ಇದೇ ಗೋಳು. ಇದಕ್ಕೆ ಏನು ಮಾಡಬೇಕು ಅಂತ ತಿಳಿತಿಲ್ಲ ಅನ್ನೋದು ರಾಜುವಿನ ಚಿಂತೆ. ಇದನ್ನು ತನ್ನ ಆತ್ಮೀಯ ಗೆಳೆಯ ಶಶಿ ಜೊತೆ ಹಂಚಿಕೊಳ್ಳುತ್ತಾನೆ. ನನ್ನ ಪರಿಸ್ಥತಿಯೇನೂ ಬೇರೆ ಇಲ್ಲ ಎನ್ನುವುದು ಶಶಿಯ ಉತ್ತರ. ಇವು ಕೇವಲ ರಾಜು ಮತ್ತು ಶಶಿಯ ಮಾತುಗಳಲ್ಲ ತಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಆರಂಭದ ತೊಂದರೆ ಅನುಭವಿಸುತ್ತಿದ್ದೀರಿ ಅಲ್ಲವೇ? ಗಂಭೀರ ಓದನ್ನು ಮುಂದೂಡುತ್ತಿದ್ದೀರಿ ಅಲ್ಲವೇ? ನಿಮ್ಮನ್ನು ನೀವು ಗಂಭೀರ ಓದಿಗೆ ತೊಡಗಿಸಿಕೊಳ್ಳುವುದು ಹೇಗೆ? ಎಂದು ಯೋಚಿಸುತ್ತಿದ್ದೀರಲ್ಲವೆ? ಇದಕ್ಕೆ ಪರಿಹಾರ ಬೇಕಿದೆಯೇ? ಹಾಗಾದರೆ ಮುಂದಕ್ಕೆ ಓದಿ.
ಇಂದೇ ಪ್ರಾರಂಭಿಸಿ
ಈಗಾಗಲೇ ಅಭ್ಯಾಸ ಮುಂದೂಡುವ ಕೆಟ್ಟ ಚಟ ಬೇರೂರಿಕೊಂಡಿದೆ. ಇದರಿಂದ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗಂತ ಅಸಾಧ್ಯವಾದುದೇನೂ ಅಲ್ಲ. ಚಂಚಲ ಮನಸ್ಸನ್ನು ಹದಗೊಳಿಸಿ ಅಭ್ಯಾಸದ ಲಯಕ್ಕೆ ಹೊಂದಿಸಿದರೆ ಖಂಡಿತ ಸಾಧ್ಯ. ಮನಸ್ಸು ಯಾಕೋ ಎಂದಿನಂತಿಲ್ಲ ಎಂಬ ನೆಪ ಹೇಳಿ,ಗಂಭೀರ ಓದಿಗೆ ನಾಳೆ ಭೇಟಿಯಾಗುವೆನೆಂದು ಬೈ ಬೈ ಹೇಳಬೇಡಿ. ಅದೇನೇ ಆಗಲಿ ನನಗೆ ಬೇಕಾದ ವಸ್ತು ಅಪ್ಪ ಕೊಡಿಸಲೇ ಬೇಕು ಎಂದು ಹಟ ಹಿಡಿಯುತ್ತೀರಲ್ಲ, ಹಾಗೆಯೇ ಅಭ್ಯಾಸ ಇಂದೇ ಆರಂಭಿಸುತ್ತೇನೆ ಎಂದು ಗಟ್ಟಿಯಾಗಿ ನಿರ್ಧರಿಸಿ. ಹಿಂದಿನ ದಿನದವರೆಗೂ ಸಮಯ ವ್ಯರ್ಥವಾಗಿ ಕಳೆಯುತ್ತಿದ್ದ ಎಲ್ಲ ಚಟುವಟಿಕೆಗಳಿಗೆ ಮರಳಲು ಮನಸ್ಸು ಹಾತೊರೆಯುತ್ತದೆ. ಹೊಸ ಚಟುವಟಿಕೆಗೆ ಹೊಂದಿಕೊಳ್ಳಲು ಮನಸ್ಸು ತಕರಾರು ತೆಗೆಯುವುದು ಖಚಿತ. ಅದನ್ನು ಓಲೈಸುವುದು ತುಸು ಕಠಿಣವೂ ಎನ್ನಿಸುವುದು. ಆದರೂ ಅಭ್ಯಾಸ ಮುಂದೂಡುವುದರಿಂದ ಆಗುವ ಹಾನಿಗಳನ್ನು ಮನಸ್ಸಿಗೆ ತಿಳಿ ಹೇಳಿ. ಆಗ ಚುರುಕುಗೊಂಡ ಮನಸ್ಸು ನಿಮ್ಮ ಓದಿಗೆ ಸಾವಕಾಶವಾಗಿ ಸಾಥ್ ಕೊಡಲು ಶುರು ಮಾಡುತ್ತದೆ.
ಜೊತೆಗಿರಲಿ ವೇಳಾಪಟ್ಟಿ
ಓದಬೇಕಾದ ವಿಷಯಗಳು ಎಷ್ಟು? ಯಾವ ವಿಷಯಗಳು ನಿನಗೆ ಇಷ್ಟ? ಯಾವ ವಿಷಯಗಳು ಕಷ್ಟ? ಎಂಬುದನ್ನು ತಿಳಿದುಕೊಳ್ಳಲು ಬ್ರಹ್ಮ ವಿದ್ಯೆ ಏನೂ ಬೇಕಿಲ್ಲ. ಕಷ್ಟದ ವಿಷಯಗಳನ್ನು ನಿಮ್ಮದಾಗಿಸಿಕೊಳ್ಳಲು ಅಧಿಕ ಪ್ರಮಾಣದಲ್ಲಿ ಪ್ರಯತ್ನಿಸಬೇಕಾಗುತ್ತದೆ. ಹೀಗಾಗಿ ವೇಳಾ ಪಟ್ಟಿಯಲ್ಲಿ ಆ ವಿಷಯಗಳಿಗೆ ಹೆಚ್ಚಿನ ಸಮಯ ಒದಗಿಸಿ. ಇಷ್ಟದ ವಿಷಯಗಳಿಗೆ ಕಡಿಮೆ ಸಮಯ ನೀಡಿ. ವೇಳಾಪಟ್ಟಿ ಇರದಿದ್ದರೂ ನಾನು ಓದ್ತಿನಿ ಬಿಡು ಎಂಬ ಉದಾಸೀನತೆ ತೋರ ಬೇಡಿ. ವೇಳಾಪಟ್ಟಿಯು ನಿಮ್ಮ ಗಂಭೀರ ಓದಿಗೆ ದಿಕ್ಸೂಚಿ ಇದ್ದಂತೆ ನಿಮ್ಮನ್ನು ಶಿಸ್ತು ಬದ್ಧ ಓದಿಗೆ ಹೊಂದಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಸ್ವಯಂ ಪ್ರೇರಣೆ ಇರಲಿ
ನಿಗದಿ ಪಡಿಸಿಕೊಂಡ ವೇಳಾ ಪಟ್ಟಿಯನ್ನು ಅನುಸರಿಸುವುದು ನನ್ನಿಂದಾಗದು ಎಂದು ಹಿಂದೇಟು ಹಾಕ ಬೇಡಿ. ನಾನು ಮನಸ್ಸು ಮಾಡಿದರೆ ಅದೇನು ದೊಡ್ಡ ವಿಷಯವಲ್ಲ. ನಾನು ವೇಳಾಪಟ್ಟಿಯಂತೆ ಗಂಭೀರ ಓದಿಗೆ ತೊಡಗಿಸಿಕೊಳ್ಳ ಬಲ್ಲೆ ಎಂದು ನಿಮಗೆ ನೀವೇ ಪ್ರೇರೇಪಿಸಿಕೊಳ್ಳಿ. ಸ್ವಯಂ ಪ್ರೇರಣೆ ಸಖತ್ ಕೆಲಸ ಮಾಡುತ್ತದೆ. ನಿಮ್ಮಲ್ಲಿ ಓದಿನ ಬಗೆಗೆ ಹೊಸ ಆಸಕ್ತಿಯನ್ನು ಹುಟ್ಟಿಸುತ್ತದೆ. ಅದೇ ಕಾರಣಕ್ಕೆ ಸ್ವಯಂ ಪ್ರೇರಣೆ ಒತ್ತಾಯ ಮಾಡಿ ಓದಲು ಪ್ರೇರೇಪಿಸುವ ಹೆತ್ತವರ ಗುರುಗಳ ಪ್ರೇರಣೆಗಳಿಗಿಂತ ಹೆಚ್ಚು ಶಕ್ತಿಯುತವಾದುದು. ಛಲದಿಂದ ಪ್ರಾರಂಭಿಸಿದರೆ ಮನಸ್ಸು ಮುಗ್ಧ ಮಗುವಿನಂತೆ ಸರಾಗವಾಗಿ ನಿಮ್ಮ ಓದಿಗೆ ಪೂರಕವಾಗಿ ನಿಲ್ಲುತ್ತದೆ. ಸ್ಯಯಂ ಪ್ರೇರಣೆಗೆ ಸ್ಪೂರ್ತಿ ನೀಡುವಂಥ ಭಾಷಣ ಇಲ್ಲವೇ ಸಾಧಕರ ವಿಡಿಯೋಗಳನ್ನು ವೀಕ್ಷಿಸಿ.
ಟಿಪ್ಪಣಿ ಮಾಡಿಕೊಳ್ಳಿ
ಪಾಠದ ಹಿಂದಿನ ಪ್ರಶ್ನೆಗಳಿಗೆ ಮಾತ್ರ ಉತ್ತರಗಳನ್ನು ಬಾಯಿ ಪಾಠ ಮಾಡಲು ಮುಂದಾಗ ಬೇಡಿ. ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳಲು ಆರಂಭಿಸಿ. ನೋಟ್ಸ್ ಮಾಡುವುದು ಹೇಗೆ ಎಂಬುದರ ಕುರಿತು ಗೊಂದಲವಿದ್ದರೆ ಗುರುಗಳನ್ನು ಹೆತ್ತವರನ್ನು ಇಲ್ಲವೇ ಸೀನಿರ‍್ಸ್ಗಳನ್ನು ಕೇಳಿ ತಿಳಿದುಕೊಳ್ಳಿ. ಟಿಪ್ಪಣಿಯಿಂದ ಅಧ್ಯಾಯದ ಸೂಕ್ಷ್ಮ ಅಂಶಗಳ ಕುರಿತು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನೀವು ಸಮರ್ಥರಾಗುತ್ತೀರಿ. ಅಲ್ಲದೇ ಹೆಚ್ಚು ಅಂಕದ ಪ್ರಶ್ನೆಗಳಿಗೆ ಸವಿಸ್ತಾರ ರೂಪದಲ್ಲಿ ಬರೆಯಲು ಸಹಕಾರಿಯಾಗುತ್ತದೆ.
ಯೋಜನೆಯನ್ನು ಪ್ರಚುರಪಡಿಸಿ
ಮುಂಬರುವ ಕಿರು ಪರೀಕ್ಷೆಯಲ್ಲಿ ಮಧ್ಯಾವಧಿ ಇಲ್ಲವೇ ಪೂರ್ವ ಸಿದ್ದತೆಯ ಪರೀಕ್ಷೆಗಳಲ್ಲಿ ಇಂಥ ವಿಷಯದಲ್ಲಿ ಇಷ್ಟು ಅಂಕಗಳನ್ನು ತೆಗೆದೇ ತೀರುತ್ತೇನೆ ಎಂದು ನಿಮ್ಮ ಆಪ್ತ ಗೆಳೆಯ/ತಿಯರ ಮುಂದೆ ಇಲ್ಲವೇ ಸಹೋದರರ ಮುಂದೆ ನಿಮ್ಮ ಯೋಜನೆಯನ್ನು ಪ್ರಚುರಪಡಿಸಿ. ಹೀಗೆ ಹೇಳುವುದರಿಂದ ನಿಮ್ಮ ಮಾತನ್ನು ಸಾಧಿಸಿ ತೋರಿಸುವುದರ ಉಪಯುಕ್ತ ಒತ್ತಡ ಒಳಗಿನಿಂದ ನಿರ್ಮಾಣವಾಗಿ ನಿಮ್ಮನ್ನು ಚೆನ್ನಾಗಿ ಓದುವಂತೆ ಪ್ರೇರೇಪಿಸುತ್ತದೆ.
ಸ್ಥಳ ಸೂಕ್ತವಾಗಿರಲಿ
ನೀವು ಓದಿಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಗಾಳಿ ಬೆಳಕಿನಿಂದ ಕೂಡಿರಲಿ. ಜೊತೆಗೆ ಮನಸ್ಸನ್ನು ಸೆಳೆಯುವ ಟಿವಿ ರೇಡಿಯೋ ಸದ್ದು ಇರದಿರಲಿ. ಮನೆ ಮಂದಿ ಮೇಲಿಂದ ಮೇಲೆ ಅಡ್ಡಾಡುವ ಸ್ಥಳ ಆಗದಿರಲಿ. ಯಾವುದೇ ತೊಂದರೆ ಇರದಂಥ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಮನೆಯಲ್ಲಿ ಓದುವ ಕೋಣೆ ಇದ್ದರೆ ‘ತೊಂದರೆ ಕೊಡಬೇಡಿ’ ಎನ್ನುವ ಫಲಕ ತೂಗು ಹಾಕಿ ಬಾಗಿಲು ಮುಂದೆ ಮಾಡಿಕೊಂಡು ಓದಿರಿ. ದಿನವೂ ನಿಗದಿತ ಸಮಯಕ್ಕೆ ಓದಿ ಇದರಿಂದ ನಿಮ್ಮ ಗೆಳೆಯರು ಮತ್ತು ಮನೆಯವರು ನಿಮಗೆ ತೊಂದರೆ ಕೊಡುವ ಸಂದರ್ಭಗಳು ಕಡಿಮೆ ಆಗುತ್ತವೆ. ಏಕಾಗ್ರತೆಯಿಂದ ಓದಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು.
ಇವು ಅಡೆ ತಡೆಗಳಲ್ಲ
ನಿದ್ರೆ ನೀರೆಡಿಕೆ ಹಸಿವು ವ್ಯಾಯಾಮಗಳು ಗಂಭೀರ ಓದಿಗೆ ಅಡ ತಡೆಗಳು ಎಂದು ತಿಳಿಯುವ ವಿದ್ಯಾರ್ಥಿಗಳು ಆಹಾರ ಸೇವಿಸಿದರೆ ನಿದ್ದೆ ಬರುವುದು ಎಂದು ಊಟವನ್ನು ತಪ್ಪಿಸುತ್ತಾರೆ. ನಿದ್ರೆಯಿಲ್ಲದೇ ಓದಲು ಯತ್ನಿಸುತ್ತಾರೆ. ವ್ಯಾಯಾಮ ಮನರಂಜನೆಗಳಿಂದೇನು ಅಷ್ಟು ಲಾಭವಿಲ್ಲವೆಂದು ಅವುಗಳನ್ನು ನಿರ್ಲಕ್ಷಿಸಿ ಓದುವ ರೂಢಿ ಮಾಡಿಕೊಂಡು ಕೊನೆಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ದಣಿವು ಹೋಗಾಲಾಡಿಸಲು ಕೆಲ ಸಮಯ ನಿಮ್ಮ ಗೆಳೆಯರೊಂದಿಗೆ ನಿಮಗಿಷ್ಟವಾದ ಆಟೋಟಗಳಲ್ಲಿ ಭಾಗವಹಿಸಿ. ಸ್ವಲ್ಪ ಹೊತ್ತು ಟಿವಿಯಲ್ಲಿ ಬರುವ ಜ್ಞಾನವರ್ಧಕ ಕಾರ್ಯಕ್ರಮಗಳನ್ನು ನೋಡಿ. ಸಂಗೀತ ಆಲಿಸಿ. ರೇಡಿಯೋ ಕಾರ್ಯಕ್ರಮಗಳನ್ನು ಕೇಳಿ. ಇವೆಲ್ಲ ಸಮಯ ವ್ಯರ್ಥಗೊಳಿಸುತ್ತವೆ ಎಂಬ ತಪ್ಪು ಗ್ರಹಿಕೆ ಬೇಡ. ಈ ಎಲ್ಲ ಚಟುವಟಿಕೆಗಳು ನಿಮ್ಮಲ್ಲಿ ಹೊಸ ಚೈತನ್ಯ ತುಂಬಿ ನವೋಲ್ಲಾಸದಿಂದ ಗಂಭೀರ ಓದಿಗೆ ಮರಳುವಂತೆ ಮಾಡುತ್ತವೆ.
‘ನಿಮ್ಮ ಪಾಲ್ಗೊಳ್ಳುವಿಕೆ ಇಲ್ಲದೆ ನೀವು ಯಶಸ್ವಿಯಾಗಲಾರಿರಿ. ನಿಮ್ಮ ಪಾಲ್ಗೊಳ್ಳುವಿಕೆ ಇದ್ದರೆ ನೀವು ವಿಫಲಗೊಳ್ಳುವುದಿಲ್ಲ.’ ಎಂಬ ಅಬ್ದುಲ್ ಕಲಾಮ್‌ರವರ ಎಚ್ಚರಿಕೆಯ ನುಡಿಮುತ್ತಿನಂತೆ ಗಂಭೀರ ಓದಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಯಶಸ್ವಿ ಫಥದಲ್ಲಿ ಮುನ್ನುಗ್ಗಿ.

– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ತಾ:ಜಿ: ಬೆಳಗಾವಿ ೯೪೪೯೨೩೪೧೪೨

