-ಸಿದ್ಧಾಪುರ ಶಿವಕುಮಾರ್

ನಿಮಗೊಬ್ಬ ಅದ್ಭುತ ಕಲಾವಿದ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು ಟಿ.ಎಂ.ವೀರೇಶ್ ಅವರು ಹೇಳಿದಾಗ ಖುಷಿ ಕುತೂಹಲ ಒಟ್ಟಿಗೆ ಆಯ್ತು. ಯಾಕೆಂದರೆ ಅವರೊಬ್ಬ ಸಹೃದಯಿ ಕಲಾವಿದರಾಗಿ ಅವರದು ಯಾವಾಗಲೂ ತೀಕ್ಷ್ಣ ಗ್ರಹಿಕೆಯ ಆಯ್ಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಮಾತು ನನ್ನಲ್ಲಿ ಕುತೂಹಲ ಹೆಚ್ಚಿಸಿತು. ಒಂದು ಸಮಯ ಪಿಕ್ಸ್ ಮಾಡಿಕೊಂಡು ನನ್ನೊಂದಿಗೆ ಮತ್ತೊಬ್ಬ ಚಿತ್ರಕಲಾವಿದರಾದ ವೆಂಕಟೇಶ ರೆಡ್ಡಿಯವರನ್ನು ಆ ಕಲಾವಿದರ ಹತ್ತಿರ ಕರೆದುಕೊಂಡು ಹೋದರು. ಮೊದಲ ನೋಟದಲ್ಲೆ ಕಲಾವಿದನ ಕಳೆ ಕಂಡಿತು. ಅವರು ನಾನು ವಿಜಯಕುಮಾರ್ ಎಂದು ಸಹಜ ಸೌಜನ್ಯದಿಂದ ಪರಿಚಯಿಸಿಕೊಂಡರು. ಅವರೊಬ್ಬ ಸಾದಾರಣ ಶಿಲ್ಪ ಕಲಾವಿದರಲ್ಲ ಎಂಬುದನ್ನು ನಮ್ಮೆದುರು 31ಅಡಿ ಎತ್ತರದ ಸಿಮೆಂಟಿನ ಭವ್ಯವಾದ ಧ್ಯಾನಸ್ತ ಶಿವ ಪ್ರತಿಮೆ ಸಾಕ್ಷಿಕರಿಸಿತು. ಪ್ರತಿಮೆಯ ಪ್ರತಿ ಭಾಗವೂ ಶಿವ ದೇವರ ಜೀವ ಭಾವ ತನ್ಮಯತೆ ರೋಚಕವೆನಿಸಿತು. ವಿಜಯಕುಮಾರರೊಂದಿಗೆ ಹತ್ತಾರು ಕಲಾವಿದರು ಸೇರಿ ನಿರ್ಮಿಸಿದ ಈ ಕೃತಿಯೂ ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ನಮ್ಮ ವೀರೇಶ್ ಅವರಂತೂ ಪ್ರತಿಮೆ ಮುಂದೆ ಎರಡು ಕೈಜೋಡಿಸಿ ಮುಗಿಯುತ್ತ ನಿಂತು ಬಿಟ್ಟರು. ಎಲ್ಲಾ ಅಂಗಾಂಗಳ ಮತ್ತು ಅವುಗಳ ಜೀವಂತಿಕೆಯನ್ನು ಬಹಳ ಶ್ರದ್ಧೆ ಶ್ರಮವಹಿಸಿ ವಿಜಯಕುಮಾರ್ ನಿರ್ಮಿಸಿರುವುದು ಸ್ಪಷ್ಟವಾಗಿ ಕಾಣಬಹುದು.ಚಿತ್ರದುರ್ಗದ ಜೋಗಿಮಟ್ಟಿಯ ರಸ್ತೆಯ ತಿಮ್ಮಣ್ಣ ನಾಯಕನಕರೆಗೆ ಹೋಗುವ ದಾರಿಯ ಆರಂಭಿಕ ಸ್ಥಳದಲ್ಲಿ ಶಿವ ದೇವಸ್ಥಾನದ ಮೇಲ್ಬಾಗದಲ್ಲಿ ನಿರ್ಮಿಸಲಾಗಿದೆ. ಈ ಶಿಲ್ಪ ಕಾರ್ಯಕ್ಕೆ ಒಂದು ವರ್ಷಗಳ ಸಮಯದ ಶ್ರಮ ವ್ಯಯಿಸಬೇಕಾಯ್ತು. “ದೇವಸ್ಥಾನದ ಕಮಿಟಿಯವರು ನಮ್ಮ ತಂಡಕ್ಕೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದಕ್ಕಾಗಿ ಶಿವ ಪ್ರತಿಮೆ ಅದ್ಭುತವಾಗಿ ಮೂಡಿಬರಲಿಕ್ಕೆ ಸಾಧ್ಯವಾಯ್ತು” ಎಂದು ಶಿಲ್ಪಿ ವಿಜಯಕುಮಾರ್ ಸಂತಸದಿಂದ ಹೇಳಿಕೊಂಡರು. ಹೌದೌದು, ಕಲಾವಿದರ ಕಲ್ಪನೆ ಕ್ರಿಯಾಶೀಲತೆ ನೈಜವಾಗಿ ರೂಪಗೊಳ್ಳಲು ಅದರದೇ ಆದ ವ್ಯವಸ್ಥಿತ ಸಹಕಾರ ಬೇಕು. ಆಗಲೇ ಜನಮನ್ನಣೆಗೆ ಪಾತ್ರವಾಗುವಂತಹ ಕಲಾಕೃತಿಗಳು ತಲೆ ಎತ್ತಲು ಸಾಧ್ಯ. ಇದು ಇಲ್ಲಿ ಸಾಬೀತಾಗಿದೆ ಎಂದು ಶಿವನ ಪ್ರತಿಮೆಯೆ ಮೌನವಾಗಿಯೇ ಹೇಳುತ್ತಿತ್ತು. ಇಂತಹದೊಂದು 31ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ ವಿಜಯಕುಮಾರ್ ಅವರ ಹಿನ್ನೆಲೆ ಅರಿಯಲು ಪ್ರಶ್ನಿಸಿದಾಗ, ಅವರು ರಾಮನಗರದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ಬೆಳೆದವರೆಂದು ತಿಳಿಯಿತು. ಹಾಗೆ ಅವರ ಶಿಲ್ಪಕಲೆಯ ಆಸಕ್ತಿಗೆ ಗುಣವಂತೆ ಊರಿನ ಗುಣವಂತೇಶ್ವರ ಭಟ್ ಎಂಬ ಪರಿಣಿತ ಶಿಲ್ಪಿಗಳಿಂದ ವಿಜಯಕುಮಾರ್ ಶಿಲ್ಪಕಲೆಯನ್ನು ಅನೇಕ ವರ್ಷಗಳ ಕಾಲ ಅಭ್ಯಾಸಿದರು. ಗುಣವಂತೇಶ್ವರರೇ ನನಗೆ ಗುರುವೆಂದು ಅಭಿಮಾನದಿಂದ ಸ್ಮರಿಸುತ್ತಾರೆ. ಮುಂದುವರಿದು ಹಲವಾರು ಕಡೆ ಶಿಲ್ಪಕಲಾ ಸುಮಾರು 22 ವರ್ಷಗಳ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ಧಾರೆ. ಅಯೋದ್ಯದ ಶ್ರೀರಾಮ ರಾಮಲಲ್ಲ ಪ್ರತಿಮೆ ಕೆತ್ತನೆ ಮಾಡಿ ಪ್ರಸಿದ್ಧಿಯಾದ ಅರುಣ್ ಯೋಗಿರಾಜ್ ಮತ್ತು ಜಿ.ಎಲ್. ಭಟ್ ಅವರಿಗೆ ವಿಜಯಕುಮಾರ್ ಆತ್ಮೀಯರಾಗಿದ್ದಾರೆ. ಸ್ನೇಹ ಪರತೆಯೊಂದಿಗೆ ಅಧ್ಯಯನದ ಆಸಕ್ತಿ ಇರುವ ವಿಜಯಕುಮಾರ್ ಕುವೆಂಪುರವರ ‘ರಾಮಾಯಣ ದರ್ಶನಂ’ ಮತ್ತು ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ಕಾವ್ಯಕ್ಕೆ ಅತ್ಯಂತ ಪ್ರಭಾವಿತರಾಗಿರುವುದನ್ನು ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶಿಲ್ಪಶಾಸ್ತ್ರಕ್ಕೆ ಶಿಲ್ಪಕಲೆಗೆ ಅದರದೇ ಆದ ಇತಿಹಾಸವಿದೆ. ಇದರಲ್ಲಿ ಪರಿಣಿತಿಗೊಳ್ಳಲು ವಿಶೇಷ ಸ್ವಭಾತಃ ಗುಣಧರ್ಮಗಳು ಬೇಕು. ಅಧ್ಯಯನಶೀಲತೆ, ಸೃಜನಾತ್ಮಕ ಚಿಂತನೆ, ಜೊತೆಗೆ ಶ್ರದ್ಧೇ ಶ್ರಮದ ಕಲಾಸಕ್ತಿ ಅತ್ಯಗತ್ಯ. ಈ ವಿಶೇಷಣಗಳನ್ನು ಮೈಗೂಡಿಸಿಕೊಂಡು ಶಿಲ್ಪಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಇದುವರೆಗೆ ಯಾವ ಪ್ರಶಸ್ತಿ ಪುರಸ್ಕಾರಗಳು ಬಂದಿಲ್ಲದೇ ಇರುವುದರ ಬಗ್ಗೆ ವಿಜಯಕುಮಾರ್ ಅವರಿಗೆ ಕಿಂಚಿತ್ತೂ ಬೇಸರವಿಲ್ಲ. ನಿಮ್ಮ ಕಲೆ ಸಾಧನೆಯನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಲಾಗಿದೆಯ..? ಎಂದರೆ, ಕಲಾವಿದರಿಗೆ ಹೊರಗಿನ ಆನಂದಕ್ಕಿಂತ ಒಳಗಿನ ಆನಂದವೇ ಬಹುಮುಖ್ಯವೆಂದು ಎದೆ ಮುಟ್ಟಿಕೊಳ್ಳುತ್ತಾರೆ ಶಿಲ್ಪಿ ವಿಜಯಕುಮಾರ್. ಕಲೆ ಕಲಾವಿದರ ಪರಂಪರೆ ಬೆಳೆಯಲು ಮತ್ತಷ್ಟು ಶಿಲ್ಪ ಕಲಾಕ್ಷೇತ್ರ ವಿಸ್ತಾರವಾಗಲು ಸರ್ಕಾರ ಸಂಘ ಸಂಸ್ಥೆಗಳು ಪ್ರೇರೇಪಿಸಿ ಸಹಕರಿಸುವ ಸಲುವಾಗಿ ಶ್ರಮಿಕ ಶಿಲ್ಪಕಲೆಯ ಕಲಾವಿದರನ್ನು ತಕ್ಕದಾಗಿ ಗುರುತಿಸಿ
ಗೌರವಿಸಬೇಕಿದೆ.

- ಸಿದ್ಧಾಪುರ ಶಿವಕುಮಾರ್

