ಬಿಇಓ ಕಚೇರಿಯಲ್ಲಿ ಅನಾಥವಾಗಿ ಬಿದ್ದಿರುವ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು!

*– ಚೇತನ ಶಿವಶಿಂಪಿ*
ಮುದ್ದೇಬಿಹಾಳ: ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಭಯ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಂತೂ ಪರೀಕ್ಷೆ ಬರೆದು ಫಲಿತಾಂಶ ಬರೋವರೆಗೂ ಸಮಾಧಾನವಿರಲ್ಲ. ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಕೈ ಸೇರುತ್ತಿದ್ದಂತೆ ಅಬ್ಬಾ! ನನಗೆ ಇಷ್ಟು ಮಾಕ್ಸ್ ಬರುತ್ತೆ ಅಂದುಕೊಂಡಿರ್ತಾರೆ. ಆದರೆ ಫಲಿತಾಂಶ ಬಂದಾಗ ಬೇರೆನೇ ಆಗಿರುತ್ತೆ. ಕಾಣದ ಕೈಗಳ ಕೈಚಳಕದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಂಕದಲ್ಲಿ ಏರುಪೇರಾಗಿಬಿಟ್ಟಿರುತ್ತೆ. ಮುಗ್ಧ ಮಕ್ಕಳು ಇಲಾಖೆಯ ಮೇಲೆ ವಿಶ್ವಾಸ ಇಟ್ಟು ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆಗಳನ್ನು ಬರೀತಾರೆ. ಆದರೆ ಕೆಲ ಕರಾಳ ಮುಖಗಳು ತಮ್ಮ ಮಗು ಎಲ್ಲರಿಗಿಂತ ಹೆಚ್ಚಿನ ಅಂಕ ಗಳಿಸಬೇಕು ಅಂತಾ ಏನೇನೋ ಕರಾಮತ್ತನ್ನ ಮಾಡಿರ್ತಾರೆ.
ಇಲಾಖೆಯವರು ಅಧಿಕಾರಿಗಳಿಗೆ ಕೆಲವು ಸುತ್ತೋಲೆಗಳನ್ನು ಕೊಟ್ಟು ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸುವಂತೆ ಆದೇಶ ಮಾಡ್ತಾರೆ. ಕೆಲವು ಬಾರಿ ಕಟ್ಟು ನಿಟ್ಟಾಗಿ ಪರೀಕ್ಷೆಗಳು ನಡೆಯದೇ ಎಲ್ಲೋ ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇಲಾಖೆಯ ಮರ್ಯಾದೆ ಮೂರು ಪಾಲಾದ್ರೂ ಮೇಲಾಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಮೀನಮೇಷ ಎಣಿಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವಂಥದ್ದೇ.
ಕೆಲವು ಅಧಿಕಾರಿಗಳಿಗೆ ಪರೀಕ್ಷೆಗಳು ಬಂದ್ರೆ ಸಾಕು ದೊಡ್ಡ ಚೆಲ್ಲಾಟ. ದುಡ್ಡು ಉಳಿಸುವ ಮತ್ತು ಗಳಿಸುವದಕ್ಕಾಗಿಯೇ ಪರೀಕ್ಷೆಗಳನ್ನು ಬಂದಿವೆ ಅನ್ನೋದು ಅವರ ಭಾವನೆಯಾಗಿರುತ್ತೆ. ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಸೋಕೆ ಇಲಾಖೆ ಸುತ್ತೋಲೆಗಳನ್ನು ಹೊರಡಿಸುತ್ತೆ. ಆದರೆ ಆ ಸುತ್ತೋಲೆಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತ ಎಂಬ ಸಾರ್ವಜನಿಕರ ಆರೋಪ ಮತ್ತೊಮ್ಮೆ ಸಾಕ್ಷೀಕರಿಸಿದೆ.
ಹೌದು, ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಘಟನೆಯೊಂದು ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪೂರ್ವಭಾವಿ ಪರೀಕ್ಷೆಗಳು ಅಂತಿಮ ಪರೀಕ್ಷೆಗಳಂತೆಯೇ ನಡೆಯಬೇಕು ಎಂದು ಸುತ್ತೋಲೆ ಇದೆ. ಪ್ರಶ್ನೆ ಪತ್ರಿಕೆ, ಸ್ಟ್ರಾಂಗ್ ರೂಮ್ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಲೇಬೇಕು. ಅದರೆ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕಾರ್ಯಾಲಯಕ್ಕೆ ಬಂದು ಪಡೆದುಕೊಳ್ಳುವಂತೆ ತಿಳಿಸಿ ನಿಯಮಗಳನ್ನು ಗಾಳಿಗೆ ತೂರಿ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ.
ಕಳೆದ ೨೦೨೨ ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಶಿಕ್ಷಣ ಇಲಾಖೆ ಹಿಂದೇಟು ಹಾಕಿದೆ ಎಂಬ ಆರೋಪ ಬಿಸಿಯಾಗಿರುವಾಗಲೇ ಮತ್ತೊಮ್ಮೆ ನಿಯಮಗಳ ಉಲ್ಲಂಘನೆಯ ಆರೋಪ ಹೊತ್ತಿದೆ.
ತಾಲೂಕಿನ ಬಸರಕೋಡ, ಬಳಬಟ್ಟಿ, ಯಲಗೂರ, ರೂಡಗಿ ಸೇರಿದಂತೆ ಪಟ್ಟಣದ ಎಲ್ಲ ಶಾಲೆಯವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿಯೇ ಪ್ರಶ್ನೆ ಪತ್ರಿಕೆ ಸಾಗಿಸುವ ಕಾರ್ಯ ಫೆ.೨೭ ರಂದು ಭರದಿಂದ ಸಾಗಿತ್ತು. ಜೊತೆಗೆ ಕೆಲವಷ್ಟು ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳು ಅನಾಥವಾಗಿ ಬಿದ್ದಿದ್ದ ವಿಡಿಯೋ ತುಣುಕುಗಳು ’ಉದಯರಶ್ಮಿ’ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳದಲ್ಲಿ ಯಾವ ಅಧಿಕಾರಿಗಳೂ ಇಲ್ಲದಿರುವುದು ನಿಯಮಗಳು ಕಾಗದಕ್ಕೆ ಮಾತ್ರ ಸೀಮಿತ ಎಂಬುದನ್ನು ಸಾರಿ ಹೇಳುತ್ತಿವೆ.
ಪ್ರಶ್ನೆ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಖುದ್ದಾಗಿ ಇಲಾಖೆ ತಲುಪಿಸಬೇಕು ಎಂದು ನಿಯಮ ಇದೆ. ಆದರೆ ಆ ನಿಯಮ ಮಾತ್ರ ಇಲ್ಲಿ ಅನ್ವಯಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಜವಾಬ್ದಾರಿಯುತ ಉತ್ತರ ನೀಡಿಲ್ಲ ಹಾಗಾಗಿ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯ ಮುಟ್ಟಿಸೋ ಪ್ರಯತ್ನ ಮಾಡುತ್ತಿದ್ದೇವೆ.

