ರಾಜ್ಯಸಭಾ ಚುನಾವಣೆ ಫಲಿತಾಂಶ | ಕಾಂಗ್ರೆಸ್‌ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು | ಗೆದ್ದು ಬೀಗಿದ ಕೈ
ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. ಅಚ್ಚರಿಯ ಪಲಿತಾಂಶ ನಿರೀಕ್ಷಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ತಂತ್ರ ಫಲಿಸದೆ ಹೋಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕನ್ 47, ಸೈಯ್ಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ತಲಾ 46 ಮತಗಳನ್ನು ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಜನಾರ್ದನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು.
ಬಿಜೆಪಿ ಅಭ್ಯರ್ಥಿ ನಾರಾಯಣಾಸಾ ಬಾಂಡಗೆ ಅವರು 47 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ. ವರದಿಗಳ ಪ್ರಕಾರ, ಜೆಡಿಎಸ್‌ನ ಎಲ್ಲ ಶಾಸಕರು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದಾರೆ.
ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮತದಾನ ನಡೆದಿದ್ದು, ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಅಡ್ಡ ಮತದಾನ ಮಾಡಿದ ಎಸ್.ಟಿ ಸೋಮಶೇಖರ್
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಅಡ್ಡಮತದಾನ ಮಾಡಿದ್ದಾರೆ ಎಂದು ವರದಿಯಾಗಿದೆ
ವಿಧಾನಸೌಧದಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ” ಎಂದಿದ್ದಾರೆ.
“ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೋ, ಅವರಿಗೆ ಮತ ಹಾಕಿದ್ದೇನೆ. ಇದುವರೆಗೆ ಪಕ್ಷ ಹೇಳಿದ ಹಾಗೆ ಕೇಳಿದ್ದೇನೆ. ಆದರೆ, ಈ ಬಾರಿ ನನ್ನ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡುವುದಾಗಿ ಭರವಸೆ ನೀಡಿದವರ ಪರ ಮತ ಚಲಾಯಿಸಿದ್ದೇನೆ” ಎಂದು ಹೇಳಿದ್ದಾರೆ.
ಶಿವರಾಮ್ ಹೆಬ್ಬಾರ್ ಗೈರು!
ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ರಾಜ್ಯಸಭೆ ಚುನಾವಣೆಗೆ ಗೈರಾಗಿದ್ದಾರೆ. ಇಂದು ಬೆಳಗಿನವರೆಗೆ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದ ಹೆಬ್ಬಾರ್ ಅವರು ಮತದಾನ ಆರಂಭಕ್ಕೆ ಕೆಲವೇ ಗಂಟೆಗಳು ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು.
ಹೆಬ್ಬಾರ್ ಅವರು ಎಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಅವರನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನ ವಿಫಲವಾದವು. ಕೊನೆಗೆ ಪಕ್ಷದ ಶಾಸಕಾಂಗ ಕಾರ್ಯದರ್ಶಿ ಹೆಬ್ಬಾರ್ ಅವರ ಶಾಸಕರ ಭವನದ ಕಚೇರಿಗೆ ತೆರಳಿ ಕಚೇರಿಯ ಬಾಗಿಲಿಗೆ ಪಕ್ಷದ ವಿಪ್ ಅಂಟಿಸಿದರು. ಆನಂತರ ಪಕ್ಷದ ಇತರೆ ಮುಖಂಡರು ಅವರ ನಿವಾಸಕ್ಕೂ ತೆರಳಿದ ಮನೆಯ ಬಾಗಿಲಿಗೆ ವಿಪ್ ಅಂಟಿಸಿ ಬಂದರು.
ಬಿಜೆಪಿ ನಾಯಕರು ಹೆಬ್ಬಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ, ಅದು ಸಫಲವಾಗಿಲ್ಲ. ಅಷ್ಟೊತ್ತಿಗೆ ಮತದಾನದ ಸಮಯವಾದ್ದರಿಂದ ಬಿಜೆಪಿ ನಾಯಕರು ಹೆಬ್ಬಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ಕೈ ಬಿಟ್ಟರು ಎಂದು ವರದಿಗಳು ತಿಳಿಸಿವೆ.

