’ಉದಯರಶ್ಮಿ’ ವರದಿಗೆ ಸ್ಪಂದಿಸಿದ ಮುಖ್ಯಾಧಿಕಾರಿ

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ಉದ್ಯಾವನದ ಸ್ವಚ್ಛತೆ ಮತ್ತು ಕೆಲ ಆಟಿಕೆಗಳು ಹಾಳಾದ ಬಗ್ಗೆ ಬಿಚ್ಚಿಬಿದ್ದಿರುವ ಸಲಕರಣೆಗಳು, ಪುಂಡರ ಕಾಟ, ಪುರಸಭೆ ಕಡೆಗಣನೆ ಕುರಿತು ’ಉದಯರಶ್ಮಿ’ ಪತ್ರಿಕೆಯು ಸೋಮವಾರದ ಸಂಚಿಕೆಯಲ್ಲಿ “ಹುಡ್ಕೋ ಬಡಾವಣೆ ಉದ್ಯಾನವನ ಅದ್ವಾನ” ಎಂಬ ತಲೆಬರಹದ ಅಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ವರದಿಗೆ ಎಚೆತ್ತ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಹಿರಾದಾರ ಮಂಗಳವಾರ ಬೆಳಿಗ್ಗೆ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜೋಕಾಲಿಯೊಂದಕ್ಕೆ ವೈರ್ ಬಿಗಿದಿರುವುದನ್ನು ಕೂಡಲೇ ತೆಗೆದು ಸರಿಯಾದ ಸರಪಳಿ ಅಳವಡಿಸುವಂತೆ, ಮುರಿದ ಜಾರುಬಂಡೆಯನ್ನು ದುರಸ್ತಿಗೊಳಿಸುವಂತೆ, ನಟ್ ಇಲ್ಲದ ಮೊತ್ತೊಂದು ಜೋಕಾಲಿಗೆ ನಟ್ ಫಿಟ್ ಮಾಡುವಂತೆ, ಕೂಡಲು ಆಸನಗಳಿಲ್ಲದ ಮತ್ತೊಂದು ಆಟಿಕೆಯನ್ನು ಸರಿಪಡಿಸುವಂತೆ ಮತ್ತು ಹೈ ಮಾಸ್ಕ್ ಲೈಟ್‌ನ್ನು ಇಂದೇ ಬೆಳಗುವಂತೆ ನೋಡಿಕೊಳ್ಳಲು ಎಸ್‌ಐ ಗಳಿಗೆ ಸೂಚಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರ ಆಸ್ತಿಯನ್ನು ಕಾಪಾಡುವುದು ನಮ್ಮ ಕಾರ್ಯ ಮಾತ್ರವಲ್ಲ. ಸಾರ್ವಜನಿಕರ ಪಾತ್ರವೂ ಸಾಕಷ್ಟಿದೆ. ಚಿಕ್ಕ ಮಕ್ಕಳು ಆಟವಾಡಬೇಕಾದ ಆಟಿಕೆಗಳಲ್ಲಿ ದೊಡ್ಡವರು ಆಟವಾಡಿದಲ್ಲಿ ಬೇಗನೆ ಹಾಳಾಗುತ್ತವೆ. ಹಿರಿಯರು ಇಂತಹ ಘಟನೆಗಳು ಕಂಡಲ್ಲಿ ತಿಳಿ ಹೇಳಬೇಕು ಎಂದರು.
ಈ ವೇಳೆ ಎಸ್‌ಐ ಗಳಾದ ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ ಇದ್ದರು.

