ಘಾಳಪೂಜಿ ಗ್ರಾಮದಲ್ಲಿರುವ ವಸತಿ ಶಾಲೆ | ಮೂವರು ವಿದ್ಯಾರ್ಥಿಗಳಿಗೆ ಗಾಯ | ಓರ್ವನ ಸ್ಥಿತಿ ಗಂಭೀರ

ಮುದ್ದೇಬಿಹಾಳ: ಏಕಾ ಏಕಿ ಹತ್ತಿದ ಬೆಂಕಿಯಿಂದಾಗಿ ವಿದ್ಯಾರ್ಥಿ ನಿಲಯದ ಕೊಠಡಿಯೊಂದು ಸಂಪೂರ್ಣ ಸುಟ್ಟು ಒಬ್ಬ ವಿದ್ಯಾರ್ಥಿಗೆ ಗಂಭೀರವಾಗಿ ಗಾಯವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿಗೆ.
ತಾಲೂಕಿನ ಘಾಳಪೂಜಿ ಗ್ರಾಮದ ಮುರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯಲ್ಲಿ ಫೆ.೨೫ ರ ಮಧ್ಯರಾತ್ರಿ ೧೨:೩೦ ಕ್ಕೆ ದುರಂತ ಸಂಭವಿಸಿದೆ. ಒಟ್ಟು ೮ ಡಬಲ್ ಬೆಡ್ ಗಳಿರುವ ಕೊಠಡಿಯಲ್ಲಿ ೬ನೇ ತರಗತಿಯ ೧೬ ವಿದ್ಯಾರ್ಥಿಗಳು ಇದ್ದು ೫ ಬೆಡ್‌ಗಳಿಗೆ ಬೆಂಕಿ ಆವರಿಸುತ್ತಿದ್ದಂತೆ ಎಚ್ಚೆತ್ತು ಹೊರಗಡೆ ಓಡಿದ್ದಾರೆ. ಸಮರ್ಥ ಭಜಂತ್ರಿ ಎಂಬ ವಿದ್ಯಾರ್ಥಿ ಗೆ ಗಂಭೀರವಾಗಿ ಗಾಯವಾಗಿದ್ದು ವಿಜಯಪುರದ ಬಿಎಲ್‌ಡಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಾರ್ಜುನ ಭಜಂತ್ರಿ ಮತ್ತು ಸಾಗರ ಕಡಕೋಳ ಎಂಬ ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ನಾಲತವಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಬಸವರಾಜ ನಾಗರಾಳ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯುತ್ ಬೋರ್ಡ್, ಫ್ಯಾನ್ ನ ವೈರ್ ಗಳು ಸುಟ್ಟಿದ್ದು ನೋಡಿದರೆ ಘಟನೆ ಶಾರ್ಟ್ ಸಕ್ಯೂಟ್ ನಿಂದ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ ಸ್ಪಷ್ಠಪಡಿಸಿದ್ದಾರೆ.
ನಿರ್ಲಕ್ಷ ಆರೋಪ:
ಇದೇ ಶಾಲೆಯಲ್ಲಿ ಕಳೆದ ಸಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿಯೊಬ್ಬನನ್ನು ಊರಿಗೆ ಬಿಡುವದಿಲ್ಲ ಎಂದಿದ್ದಕ್ಕೆ ಕೋಪಗೊಂಡು ಬೆಂಕಿ ಹಚ್ಚಿ ತೊಂದರೆ ಮಾಡಿದ್ದು ಅದೇ ಕೊಠಡಿಯಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಂಶುಪಾಲರ ನಿರ್ಲಕ್ಷ ಎಂದು ಕೆಲ ಪಾಲಕರು ದೂರಿದ್ದು ಸಂಪೂರ್ಣ ತನಿಖೆಗಾಗಿ ಒತ್ತಾಯಿಸಿದ್ದಾರೆ.


