ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಕುಲಕರ್ಣಿ ವಾಗ್ದಾಳಿ
ಬಸವನಬಾಗೇವಾಡಿ: ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ನಾನೇ ಹೇಳಿ ನೀರು ಬಿಡಿಸಿದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡಿರುವ ದೇವರ ಹಿಪ್ಪರಗಿ ಶಾಸಕರ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ತಾಲೂಕಿನ ಹೂವಿನ ಹಿಪ್ಪರಗಿಯ ಪತ್ರಿವನ ಮಠದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳ ಭರ್ತಿ ಮಾಡಬೇಕೆಂದು ಆಲಮಟ್ಟಿಯಲ್ಲಿ ಅಖಂಡ ಕರ್ನಾಟಕದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಬಳಿ ಹೋಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಗತ್ಯತೆ ಮತ್ತು ಕೆರೆಗಳಲ್ಲಿರುವ ನೀರಿನ ಪ್ರಮಾಣದ ಕುರಿತು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟನ್ನವರ ಇವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ನಂತರ ಪ್ರಾದೇಶಿಕ ಆಯುಕ್ತರು 19 ರಂದು ನೀರು ಹರಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗುವದೆಂದು ನಮಗೆ ಭರವಸೆ ನೀಡಿದ್ದರು. ಅವರ ಭರವಸೆಯಂತೆ 19 ರಂದು ನೀರು ಹರಿಸಲು ಪ್ರಾರಂಭಿಸಿದ್ದಾರೆ. ಇದನ್ನು ಗಮನಿಸಿದ ದೇವರ ಹಿಪ್ಪರಗಿ ಶಾಸಕರು ನಮ್ಮ ಹೇಳಿಕೆಯನ್ನು ಗಮನಿಸಿ ನೀರು ಬಿಟ್ಟ ನಂತರ ನಾನೇ ಹೇಳಿ ನೀರು ಬಿಡಿಸಿದ್ದೇನೆ ಎಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಇವರ ಜೊತೆ ಮಾತನಾಡಿದಂತೆ ಟೇಬಲ್ ಮೇಲೆ ಮೋಬೈಲ್ ಇಟ್ಟು ನಾನೇ ನೀರು ಬಿಡಿಸಿದ್ದೇನೆ ಎಂಬಂತೆ ನಾಟಕ ಮಾಡುತ್ತಾ ಕ್ಷೇತ್ರದ ರೈತರನ್ನು ಮತ್ತು ಜನಸಾಮಾನ್ಯರನ್ನು ಮೆಚ್ಚಿಸಲು ಹೊರಟಿದ್ದಾರೆ. ಕೆರೆಗಳ ಭರ್ತಿಗಾಗಿ ಕಾಲುವೆಗಳಿಗೆ ನೀರು ಹರಿಸಲು ಅನುಮತಿ ಕೊಡುವ ಅಧಿಕಾರ ಯಾರಿಗೆ ಇದೆ ಎಂಬ ಕನಿಷ್ಠ ಪ್ರಜ್ಞೆ ಶಾಸಕರಿಗೆ ಇಲ್ಲದಂತಾಗಿದೆ. ಕೆರೆಗಳ ತುಂಬಿಸಲು ಕಾಲುವೆಗೆ ನೀರು ಹರಿಸಲು ಅನುಮತಿ ನೀಡುವ ಅಧಿಕಾರ ಪ್ರಾದೇಶಿಕ ಆಯುಕ್ತರಿಗೆ ಇದೆ ಎಂಬುದು ಶಾಸಕರಿಗೆ ಗೊತ್ತಿಲ್ಲವೆ. ಒಟ್ಟಾರೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ದೇವರ ಹಿಪ್ಪರಗಿ ಮತ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಶಾಸಕರಾಗಬೇಕೆಂದು ಈಗಿನಿಂದಲೇ ತಯಾರಿ ಮಾಡಿಕೊಂಡಂತೆ ಕಾಣುತ್ತಿದೆ. ಹೋರಾಟ ಮಾಡಿ ನೀರು ಬಿಡಿಸಲು ರೈತ ಸಂಘದವರು ಅನುಮತಿ ತಂದಿದ್ದಾರೆ. ಇದರ ಬಗ್ಗೆ ಶಾಸಕರು ಸಂತಸ ಪಡಬೇಕು.ಅದನ್ನು ಬಿಟ್ಟು ನಾನೇ ನೀರು ಬಿಡಿಸಿದ್ದೇನೆ ಎಂಬುವ ರೀತಿಯಲ್ಲಿ ಹೇಳಿಕೆ ನೀಡುವದು ಶಾಸಕ ಸ್ಥಾನಕ್ಕೆ ಗೌರವ ತರುವ ಹೇಳಿಕೆಯಲ್ಲ. ಶಾಸಕರ ಹೇಳಿಕೆ ಕೋಗಿಲೆ ಕಟ್ಟಿದ ಗೂಡಿನಲ್ಲಿ ಕಾಗೆ ವಾಸ ಮಾಡಿದಂತಾಗಿದೆ. ನಿಜವಾಗಿಯೂ ಶಾಸಕರಿಗೆ ಜಿಲ್ಲೆಯ ಅನ್ನಧಾತರ ಬಗ್ಗೆ ಕಳಕಳಿ ಇದ್ದರೇ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಆಲಮಟ್ಟಿ ಆಣೆಕಟ್ಟಿನ ನೀರಿನ ಮಟ್ಟವನ್ನು 524.256 ಕ್ಕೆ ನೀರು ನಿಲ್ಲಿಸಲು ಹೋರಾಟಕ್ಕೆ ಶಾಸಕರು ಸಿದ್ಧರಾದರೆ ನಾವು ಕೂಡಾ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಾವು ಎಲ್ಲವನ್ನು ತ್ಯಾಗ ಮಾಡಿ ಅವರೊಂದಿಗೆ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದು ಅರವಿಂದ ಕುಲಕರ್ಣಿ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಣಮಂತ್ರಾಯಗೌಡ ಗುಣಕಿ, ಬಸನಗೌಡ ಪಾಟೀಲ, ಮೋಹನಗೌಡ ಪಾಟೀಲ, ಪ್ರಭುಗೌಡ ಪೋತರಡ್ಡಿ ಇದ್ದರು.

