ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದಿಂದ ವಿಕಲಚೇತನರ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ವಿಕಲಚೇತನರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಮೂಲಕ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನ ಮುಂಭಾಗ ವಿವಿಧೆಡೆಗಳಿಂದ ಆಗಮಿಸಿದ್ದ ವಿಕಲಚೇತನರು ಜಮಾಯಿಸಿ ಮೆರವಣಿಗೆ ಮೂಲಕ ಮುದ್ದೇಬಿಹಾಳ ರಸ್ತೆಯಲ್ಲಿರುವ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಒಕ್ಕೂಟದ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮ ವಿಕಲಚೇತನ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದರು.
ಪ್ರತಿ ತಿಂಗಳು ವಿಕಲಚೇತನರಿಗೆ ರೂ.೪ ಸಾವಿರದಿಂದ ೫ ಸಾವಿರ ಮಾಶಾಸನ ಏಕರೂಪದಲ್ಲಿ ಹೆಚ್ಚಳ ಮಾಡಬೇಕು. ವಿಕಲಚೇತನರಿಗೆ ರಾಜ್ಯಾದಂತ ಉಚಿತ ಬಸ್ ಪಾಸ್ ನೀಡಬೇಕು. ಅಂಗವಿಕಲರ ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಅಂಗವಿಕಲರಿಗೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೀಡ್ತುತಿರುವ ಸ್ವಯಂ ಉದ್ಯೋಗ ಮಾಡಲು ನೀಡುತ್ತಿರುವ ಆಧಾರ ಯೋಜನೆಯಡಿ ತಾಲೂಕಿಗೆ ೧ ಅಥವಾ ೨ ಕೊಡಲಾಗುತ್ತಿದೆ. ಇದನ್ನು ೧೦ ರಿಂದ ೧೫ ರವರೆಗೆ ವಿಸ್ತರಿಸಿ ತಾಲೂಕಿಗೆ ನೀಡಬೇಕು. ವಿಆರ್ಡಬ್ಲೂ, ಯುಆರ್ಡಬ್ಲೂ ಮತ್ತು ಎಂಆರ್ಡಬ್ಲೂ ಹುದ್ದೆಗಳನ್ನು ಖಾಯಂ ಗೊಳಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಬೇಕು. ಆಶ್ರಯ ಮನೆಗಳನ್ನು ನೀಡಬೇಕು. ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬೇಕು. ವಿಕಲಚೇತರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು. ಅಂಗವಿಕಲರು ಎಸ್ಸಿಎಸ್ಟಿಗೆ ಸಮಾನರು ಎಂದು ಉಚ್ಛನ್ಯಾಯಾಲಯ ತೀರ್ಪು ನೀಡಿದೆ ಅದನ್ನು ಜಾರಿ ಮಾಡಬೇಕೆಂಬ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಹಸೀಲ್ದಾರ ಅವರಿಗೆ ಮಿನಿವಿಧಾನಸೌಧದ ಮೇಲ್ಮಡಿಯಲ್ಲಿರುವ ಕಚೇರಿಗಳಿಗೆ ಅಂಗವಿಕಲರು ತೆರಳಲು ರ್ಯಾಂಪ್ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಬಂದೇನವಾಜ ವಾಲೀಕಾರ,ಚೆನ್ನಯ್ಯ ಸಾರಂಗಮಠ, ರಾಜು ಹಾರಿವಾಳ, ಪ್ರೀತಿಶ ಸುಂಕದ, ಹಂಪಯ್ಯ ಸಾಲಿಮಠ,ಶರಣಬಸು ಡೆಂಗಿ, ಮಹಿಬೂಬ ಸೈಯದ, ಶರಣು ಸಾಸನೂರ, ಶ್ರೀಶೈಲ ಸಂಕನಾಳ, ನಾಗಪ್ಪ ಗೊಲ್ಲರ, ನಾಗೇಶ ಗಬ್ಬೂರ, ನಜೀರ ಮಕಾನದಾರ, ಶಿವರಾಜಕುಮಾರ ಪಾತ್ರೋಟಿ, ಬಾಬು ಅತ್ತಾರ, ರವಿ ಮಸಬಿನಾಳ, ಗಂಗಾಧರ ದಂಡಿನ, ಹಸೇನಬಿ ಅತ್ತಾರ, ಕರೆಯಪ್ಪ ಡೋಣೂರ, ಮಹಾಂತೇಶ ಆಲೂರ, ನೀಲಮ್ಮ ಅಳಗುಂಡಗಿ, ಹನುಮವ್ವ ಪಾತ್ರೋಟಿ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

