ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರಿಗೆ ತಮ್ಮ ಮತಗಳನ್ನು ಖರೀದಿಸಲು ಆಫರ್ ನೀಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಚುನಾವಣೆಗೆ ಹೋಗಲಿರುವ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವ ಶಕ್ತಿ ಮೈತ್ರಿಕೂಟಕ್ಕಿದೆಯಾದರೂ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂಗ ರಾಜ್ಯದಲ್ಲಿ ರಾಜ್ಯಸಭಾ ಚುನಾವಣಾ ಕಣ ಬಿಸಿಯಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಶಿವಕುಮಾರ್, “ಎಚ್‌ಡಿ ಕುಮಾರಸ್ವಾಮಿ ಯಾರಿಗೆ ಫೋನ್ ಮಾಡುತ್ತಿದ್ದಾರೆ. ಏನು ಮಾತನಾಡುತ್ತಿದ್ದಾರೆ ಮತ್ತು ಏನು ಆಫರ್ ನೀಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನಮ್ಮ ಶಾಸಕರು ನಮಗೆ ಎಲ್ಲ ಮಾಹಿತಿ ನೀಡಿದ್ದಾರೆ. ಬಿಜೆಪಿಯ ತಂತ್ರಗಾರಿಕೆ ನಮಗೆ ತಿಳಿದಿದೆ” ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಅಡ್ಡ ಮತದಾನಕ್ಕೆ ಯತ್ನಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಯಾವುದೇ ಕಾರಣವಿಲ್ಲದೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರಾ..? ತಮ್ಮ ಪ್ರಯತ್ನ ಮಾಡಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಫೆಬ್ರವರಿ 27 ರಂದು (ಮತದಾನದ ದಿನ) ಯಾರು ಯಾರಿಗೆ ಮತ ಹಾಕುತ್ತಾರೆ ಎಂದು ನೋಡೋಣ” ಎಂದಿದ್ದಾರೆ.
“ಕುಮಾರಸ್ವಾಮಿ ಯಾರೊಂದಿಗೆ ಮಾತನಾಡಿದ್ದಾರೆ. ಯಾರಿಗೆ ಎಷ್ಟು ಆಫರ್ ನೀಡಿದ್ದಾರೆ ಎಂಬುದನ್ನು ಶಾಸಕರು ಬಂದು ನನಗೆ ಹೇಳಿದ್ದಾರೆ. ಶಾಸಕರಿಗೆ ಬೆದರಿಕೆ ಹಾಕಿದ್ದಾರೆ. ಅದು ನನಗೆ ತಿಳಿದಿದೆ. ನಾನು ಈಗ ಅದರ ಬಗ್ಗೆ ಮಾತನಾಡುವುದಿಲ್ಲ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕಳೆದ ವರ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದೆ.
224 ಸದಸ್ಯರ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಆಡಳಿತಾರೂಢ ಕಾಂಗ್ರೆಸ್, ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಮತ್ತು ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ರಾಜ್ಯ ಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಬಿಜೆಪಿ ಮತ್ತು ಜೆಡಿಎಸ್ ಅನುಕ್ರಮವಾಗಿ 66 ಮತ್ತು 19 ಸದಸ್ಯರನ್ನು ಹೊಂದಿದ್ದು, ಚುನಾವಣೆಯಲ್ಲಿ ಒಂದು ಸ್ಥಾನವನ್ನು ಜಂಟಿಯಾಗಿ ಗೆಲ್ಲುವ ಸ್ಥಿತಿಯಲ್ಲಿದೆ. ಈ ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸುತ್ತಾರೆ. ಕಾಂಗ್ರೆಸ್ ಅಜಯ್ ಮಾಕನ್, ಸೈಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ.
ಮಾಜಿ ಎಂಎಲ್‌ಸಿ ನಾರಾಯಣಸಾ ಬಾಂಡಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅಚ್ಚರಿಯ ನಡೆಯಲ್ಲಿ, ಜೆಡಿಎಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಡಿ ಕುಪೇಂದ್ರ ರೆಡ್ಡಿ ಕೂಡ ಕಳೆದ ವಾರ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕೇವಲ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರೆ ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳನ್ನು ಪಡೆಯಬೇಕು.
ಚುನಾವಣೆಗೆ ಪ್ರತಿಪಕ್ಷಗಳ ಮತಗಳನ್ನು ಪಡೆಯಲು ಕಾಂಗ್ರೆಸ್ ಪ್ರತಿತಂತ್ರವನ್ನು ರೂಪಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಿಕೆ ಶಿವಕುಮಾರ್, “ನಮಗೆ ಅದು ಅಗತ್ಯವಿಲ್ಲ. ನಾವು 136 ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಇಬ್ಬರು ಸ್ವತಂತ್ರ ಶಾಸಕರು ನಮ್ಮೊಂದಿಗೆ ಗುರುತಿಸಿಕೊಂಡಿದ್ದಾರೆ. ನಮ್ಮೊಂದಿಗೆ ಇರುವ ಇತರರ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಅದನ್ನು ತೋರಿಸುತ್ತೇವೆ” ಎಂದು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

